ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ

ಪ್ರೊ. ಪ್ರಭಾತ್ ಪಟ್ನಾಯಕ್
ಆಹಾರಧಾನ್ಯಗಳ ಕೊರತೆಗಿಂತ ಹೆಚ್ಚಾಗಿ ಕೊರತೆಯ “ನಿರೀಕ್ಷೆ” ಬೆಲೆಗಳನ್ನು ಏರಿಸುತ್ತಿರುವುದು ಕಂಡು ಬಂದಿದೆ. ಇಂತಹ ಹಣದುಬ್ಬರವನ್ನು ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿಸದೆಯೇ ತಡೆಯುವ ಅಸ್ತ್ರ ಇನ್ನೂ ಸರಕಾರದ ಕೈಯಲ್ಲಿ ಉಳಿದಿದೆಯಾದರೆ, ಅದಕ್ಕೆ ರೈತರ ಐತಿಹಾಸಿಕ ಹೋರಾಟವೇ ಕಾರಣ. ಮೂರು ಕುಖ್ಯಾತ ಕೃಷಿ ಕಾನೂನುಗಳ ಮೂಲಕ ಜಾರಿಗೆ ತರಲು ಬಯಸಿದ ಕ್ರಮಗಳ ಅಸಾಧಾರಣ ಮೂರ್ಖತನವು ಈಗ ಸ್ಪಷ್ಟವಾಗುತ್ತದೆ. ರೈತರ ಆಂದೋಲನದಿಂದಾಗಿ ಆ ಕ್ರಮಗಳನ್ನು ಹಿಂತೆಗೆದುಕೊಂಡಿರದಿದ್ದರೆ, ನಂತರ ಸಂಗ್ರಹಣೆಯನ್ನು ಖಾಸಗೀಕರಣಗೊಳಿಸಲಾಗುತ್ತಿತ್ತು, ಆಗ ಸರಕಾರದ ಬಳಿ ಹಣದುಬ್ಬರವನ್ನು ಎದುರಿಸಲು ಯಾವುದೇ ಸಾಧನವಿರುತ್ತಿರಲಿಲ್ಲ; ಹಣದುಬ್ಬರ ಖಾಸಗಿ ವಲಯದ ಕೃಪೆಯಿಂದ ಎಗ್ಗಿಲ್ಲದೆ ಮುಂದುವರಿಯುತ್ತಿತ್ತು. ಅದೃಷ್ಟವಶಾತ್ ರೈತರು ದೇಶವನ್ನು ಉಳಿಸಿದರು.

ಭಾರತದಲ್ಲಿನ ಪ್ರಸ್ತುತ ಬೆಲೆಗಳ ಏರಿಕೆಯು ಪ್ರಧಾನವಾಗಿ ಆಗುತ್ತಿರುವುದು ಆಹಾರದ ಬೆಲೆಗಳ ಏರಿಕೆಗಳಿಂದ. ಜುಲೈ 2023 ರಲ್ಲಿ ಚಿಲ್ಲರೆ ಹಣದುಬ್ಬರವು (ಹಿಂದಿನ ವರ್ಷದ ಜುಲೈಗೆ ಹೋಲಿಸಿದರೆ) ಶೇಕಡಾ 7.44 ರಷ್ಟಿದ್ದರೆ, ಆಹಾರ ಧಾನ್ಯಗಳು, ತರಕಾರಿಗಳು, ಹಾಲಿನ ಉತ್ಪನ್ನಗಳು ಮತ್ತು ಮುಂತಾದ ಎಲ್ಲಾ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಆಹಾರ ಬೆಲೆಯುಬ್ಬರವು ಶೇಕಡಾ 11.5 ರಷ್ಟಿತ್ತು. ಆಹಾರದ ಬೆಲೆಗಳ ಉಬ್ಬರವು ಆಗಸ್ಟಿನಲ್ಲಿ ಸುಮಾರು 10ಶೆ.ಕ್ಕಿಂತ ಸ್ವಲ್ಪ ಕಡಿಮೆಯಾಯಿತು, ಮುಖ್ಯವಾಗಿ ಟೊಮೆಟೊಗಳಂತಹ ತರಕಾರಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಅಳವಡಿಸಿಕೊಂಡ ಕೆಲವು ಪೂರೈಕೆ ನಿರ್ವಹಣಾ ಕ್ರಮಗಳಿಂದಾಗಿ ಮತ್ತು ಒಟ್ಟಾರೆ ಚಿಲ್ಲರೆ ಹಣದುಬ್ಬರ ದರವನ್ನು ಶೇಕಡಾ 6.83 ಕ್ಕೆ ಇಳಿಸಲು ಇದು ಕಾರಣವಾಗಿದೆ; ಆದರೆ ನಿಸ್ಸಂಶಯವಾಗಿ ಆಹಾರ ಬೆಲೆ ಹಣದುಬ್ಬರ, ಮತ್ತು ಅದರೊಂದಿಗೆ ಒಟ್ಟಾರೆ ಚಿಲ್ಲರೆ ಹಣದುಬ್ಬರವು ಗಂಭೀರ ಸಮಸ್ಯೆಯಾಗಿ ಉಳಿದಿದೆ.

ಆಹಾರ ಪದಾರ್ಥಗಳ ಬೆಲೆ ತೀವ್ರವಾಗಿ ಏರುತ್ತಿರುವುದು ಭಾರತದಲ್ಲಿ ಮಾತ್ರವಲ್ಲ. ಇದು ತೃತೀಯ ಜಗತ್ತಿನಲ್ಲಿ ಮಾತ್ರವಲ್ಲದೆ ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಕಾಣುತ್ತಿರುವ ಜಾಗತಿಕ ವಿದ್ಯಮಾನವಾಗಿದೆ. ಇದಕ್ಕೆ ಕೊಡುವ ಸಾಮಾನ್ಯ ವಿವರಣೆಯೆಂದರೆ ಉಕ್ರೇನ್ ಯುದ್ಧದಿಂದ ಉಂಟಾದ ಕೊರತೆ. ಆದರೆ ತಾತ್ವಿಕವಾಗಿ ಉಕ್ರೇನ್ ಯುದ್ಧವು ಕೊರತೆಯನ್ನು ಉಂಟುಮಾಡುವ ಮೂಲಕ ಹಣದುಬ್ಬರಕ್ಕೆ ಕಾರಣವಾಗಬಹುದಾದರೂ ಆಹಾರದ ಬೆಲೆಗಳಲ್ಲಿನ ಪ್ರಸ್ತುತ ಏರಿಕೆಯು ನಿಜವಾದ ಕೊರತೆಗಿಂತ ಹೆಚ್ಚಾಗಿ, ಅಂತಹ ಕೊರತೆ ಉಂಟಾಗುತ್ತದೆ ಎಂಬ ನಿರೀಕ್ಷೆಯ ಫಲಿತಾಂಶವಾಗಿ ಆಗಿರಬಹುದು. ಯಾವುದೇ ನಿಜವಾದ ಕೊರತೆ ಸಂಭವಿಸುವ ಮೊದಲೇ, ಚಿಲ್ಲರೆ ಆಹಾರ ವಲಯದಲ್ಲಿ ಲಾಭಾಂಶದ ಪ್ರಮಾಣ ಹೆಚ್ಚಿದವು ಎಂದು
ತೋರಿಸುವುದಕ್ಕೆ ಪ್ರಪಂಚದಾದ್ಯಂತ ಸಾಕಷ್ಟು ಪುರಾವೆಗಳಿವೆ. ಇದು ಕೊರತೆ ಉಂಟಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಗುತ್ತೇದಾರಿಗಳು ಬೆಲೆಗಳನ್ನು ಏರಿಸಿದವು ಎಂಬುದನ್ನು ಸೂಚಿಸುತ್ತದೆ.

“ಹಣದುಬ್ಬರದ ನಿರೀಕ್ಷೆಗಳು”

ಭಾರತದಲ್ಲಿಯೂ ಇದು ನಿಜ. ಇದರಿಂದಾಗಿ ಅನೇಕರು “ಹಣದುಬ್ಬರದ ನಿರೀಕ್ಷೆಗಳು” ಆಟವಾಡುತ್ತಿರುವ ಬಗ್ಗೆ ಮಾತನಾಡುತ್ತಿದ್ದಾರೆ; ನಿರೀಕ್ಷಿತ ಬೆಲೆ ಏರಿಕೆ ನಿಜವಾದ ಬೆಲೆಗಳನ್ನು ಏರಿಸುತ್ತದೆ. ಆದರೆ ನಿಜವಾದ ಕೊರತೆಯಿಲ್ಲದಿದ್ದರೂ, ನಿಜವಾದ ಪೂರೈಕೆಯಲ್ಲಿ ಪರಿಸ್ಥಿತಿಯು ಹೆಚ್ಚೇನೂ ಸಮಾಧಾನಕರವಾಗಿರದ ಪರಿಸ್ಥಿತಿಯಲ್ಲಿ ಮಾತ್ರ ಈ ಹಣದುಬ್ಬರದ ನಿರೀಕ್ಷೆಗಳು ಪಾತ್ರವಹಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಬೃಹತ್ ಆಹಾರಧಾನ್ಯ ದಾಸ್ತಾನುಗಳಿರುವಾಗ, ಹಣದುಬ್ಬರದ
ನಿರೀಕ್ಷೆಯಲ್ಲಿ ಪೂರೈಕೆದಾರರು ಬೆಲೆಗಳನ್ನು ಹೆಚ್ಚಿಸುವುದಿಲ್ಲ: ಅಂತಹ ದಾಸ್ತಾನುಗಳನ್ನು ಸರ್ಕಾರವು ಹೊಂದಿದ್ದರೆ, ಯಾವುದೇ ರೀತಿಯಲ್ಲಿ ಬೆಲೆಗಳನ್ನು ಏರಿಸಲು ಆಗದಂತಹ ರೀತಿಯಲ್ಲಿ ಗ್ರಾಹಕರಿಗೆ ಬಿಡುಗಡೆ ಮಾಡಲಾಗುವುದು ಎಂದು ಪೂರೈಕೆದಾರರಿಗೆ ತಿಳಿದಿದೆ. ದಾಸ್ತಾನುಗಳನ್ನು ಖಾಸಗಿ ಮಾರಾಟಗಾರರು ಹೊಂದಿದ್ದರೂ ಸಹ, ಅವರ ಆದ್ಯತೆ ಬೆಲೆಗಳನ್ನು ಏರಿಸುವುದಕ್ಕಿಂತ ಹೆಚ್ಚಾಗಿ, ತಮ್ಮ ದಾಸ್ತಾನುಗಳ ಮಟ್ಟವನ್ನು ಇಳಿಸುವುದಕ್ಕೇ ಇರುತ್ತದೆ.; ಇಷ್ಟೇ ಅಲ್ಲ, ಕೆಲವು ಪೂರೈಕೆದಾರರು ಬೆಲೆಗಳನ್ನು ಏರಿಸಿದರೂ, ಇತರರು ಈ ಮಾರಾಟಗಾರರಿಂದ ಗ್ರಾಹಕರನ್ನು ದೂರಮಾಡಲು ಮತ್ತು ತಮ್ಮ
ದಾಸ್ತಾನುಗಳ ಮಟ್ಟವನ್ನುಳಿಸಲು ಒಂದು ಅವಕಾಶವಾಗಿ ಕಾಣುತ್ತಾರೆ.

ಇದನ್ನೂ ಓದಿ: ಬಹುನಿರೀಕ್ಷಿತ ಜಾತಿ ಸಮೀಕ್ಷೆ ಬಿಡುಗಡೆ ಮಾಡಿದ ಬಿಹಾರ ಸರ್ಕಾರ | ಹಿಂದುಳಿದ ವರ್ಗಳಗದ್ದೆ ಪ್ರಾಬಲ್ಯ

ವಿಶ್ವ ಆಹಾರಧಾನ್ಯ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಯದಿಂದ ಇದೇ ಆಗಿದೆ. 1979-80 ರಿಂದ 1981-82ರ ತ್ರಿವರ್ಷೀಯ (ಅಥವಾ ಸಂಕ್ಷಿಪ್ತವಾಗಿ 1980-82ರ)ಅವಧಿಯಲ್ಲಿ ವಾರ್ಷಿಕ ತಲಾವಾರು ಪ್ರಪಂಚದ ಧಾನ್ಯಗಳ ಉತ್ಪಾದನೆಯು (ತ್ರೈವಾರ್ಷಿಕ ಸರಾಸರಿಯನ್ನು ತ್ರೈವಾರ್ಷಿಕದ ಮಧ್ಯದ ಜನಸಂಖ್ಯೆಯಿಂದ ಭಾಗಿಸಿದಾಗ) 355 ಕೆಜಿ; ಇದು 2000-02 ರ ವೇಳೆಗೆ 343 ಕೆಜಿಗೆ ಕುಸಿಯಿತು. 2016-18 ರ ಅವಧಿಯಲ್ಲಿ ಕೂಡ ಇದು ಕೇವಲ 344 ಕೆಜಿ ಆಗಿತ್ತು. ಇದಲ್ಲದೆ, 2002 ರಿಂದ ಎಥೆನಾಲ್ ಉತ್ಪಾದನೆಗೆ ತಿರುಗಿಸಲಾದ ಧಾನ್ಯಗಳ ಉತ್ಪಾದನೆಯ ಪ್ರಮಾಣ ಹೆಚ್ಚುತ್ತಾ ಬಂದಿದೆ. ಅಂದರೆ ಪ್ರಪಂಚದ ಜನಸಂಖ್ಯೆಗೆ
ಸಿರಿಧಾನ್ಯಗಳ ತಲಾ ಸೇವನೆಯ ಲಭ್ಯತೆಯು ಕುಗ್ಗಿರಬೇಕು.

ಕುಗ್ಗುತ್ತಿರುವ ಪೂರೈಕೆ ಮತ್ತು ಕುಗ್ಗಿಸಲಾಗುತ್ತಿರುವ ಬೇಡಿಕೆ

ಈ ಕುಗ್ಗುತ್ತಿರುವ ಲಭ್ಯತೆಯು ಇಲ್ಲಿಯವರೆಗೆ ಯಾವುದೇ ನಿರಂತರ ಮತ್ತು ಗಮನಾರ್ಹ ಹಣದುಬ್ಬರದ ಒತ್ತಡವನ್ನು ಉಂಟು ಮಾಡಿರದಿದ್ದರೆ, ನವ ಉದಾರವಾದಿ ವ್ಯವಸ್ಥೆಯಲ್ಲಿ, ವಿಶೇಷವಾಗಿ ತೃತೀಯ ಜಗತ್ತಿನಲ್ಲಿ ದುಡಿಯುವ ಜನರ ಕೊಳ್ಳುವ ಶಕ್ತಿಯನ್ನು ತೀವ್ರವಾಗಿ ಹಿಂಡಲಾಗಿದೆ ಎಂಬುದೇ ಅದಕ್ಕೆ ಕಾರಣ. ಸಂಕ್ಷಿಪ್ರವಾಗಿ ಹೇಳುವುದಾದರೆ, ದುಡಿಯುವ ಜನರ ಮೇಲೆ ಆದಾಯ ಕಡಿತವನ್ನು ಹೇರಿದ್ದರಿಂದಾಗಿ ಲಭ್ಯತೆ ಮತ್ತು ಬೇಡಿಕೆಯ ನಡುವೆ ಹೇಗೋ ಸಮತೋಲನವನ್ನು ನಿಭಾಯಿಸಲಾಗಿದೆ. ಈ ಕಾರಣದಿಂದಾಗಿ ನವ ಉದಾರವಾದಿ ಯುಗದಲ್ಲಿ ಬಡತನ ಮತ್ತು ಅಪೌಷ್ಟಿಕತೆಯು ಬಹಳವಾಗಿ ಹೆಚ್ಚಿದ್ದರೂ (ಈ ಸತ್ಯವನ್ನು ಸಾಮಾನ್ಯವಾಗಿ ಬ್ರೆಟನ್ ವುಡ್ಸ್ ಸಂಸ್ಥೆಗಳ ಆಶ್ರಯದಲ್ಲಿ ಹಲವಾರು “ಬಡತನದ ಅಧ್ಯಯನಗಳು” ಮುಚ್ಚಿಡಲು ಪ್ರಯತ್ನಿಸಿದರೂ), ಈ ಅಭಾವವು ಸಾಮಾನ್ಯವಾಗಿ ಹಣದುಬ್ಬರದ ಹಿಂಡಿಕೆಯ ರೂಪವನ್ನು ಪಡೆದಿಲ್ಲ. ಆಹಾರದ ಬೆಲೆಗಳಲ್ಲಿ ಆಗಾಗ ಏರಿಕೆಗಳಾಗಿವೆ, ಆದರೆ ದುಡಿಯುವ ಜನರ ಆದಾಯದಲ್ಲಿ ಕಡಿತವುಂಟು ಮಾಡುವ ಮೂಲಕ ಅವುಗಳನ್ನು “ನಿಯಂತ್ರಿಸಲಾಗಿದೆ”, ಇದು ಹಣದುಬ್ಬರವಿರದ ರೀತಿಯಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ಸಮತೋಲನವನ್ನು ಹೇಗೋ ಪುನಃಸ್ಥಾಪಿಸುತ್ತದೆ.

ಇದನ್ನೂ ಓದಿ: ಕಮಲ “ದಳವನ್ನು” ನುಂಗುತ್ತಾ? ಜೆಡಿಎಸ್‌ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಿದೆಯೇ ಬಿಜೆಪಿ?

ಭಾರತದಲ್ಲಿಯೂ ಇಂತದ್ದೇ ಪರಿಸ್ಥಿತಿ ಇದೆ. 1991 ರಲ್ಲಿ ಆಹಾರಧಾನ್ಯಗಳ ತಲಾ ಲಭ್ಯತೆ ದಿನಕ್ಕೆ 510.1 ಗ್ರಾಂ. ಇದು 2019- 20ರಲ್ಲಿ ದಿನಕ್ಕೆ 501.8 ಗ್ರಾಂಗೆ ಸ್ವಲ್ಪ ಕಡಿಮೆಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ, ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರದ ಆಹಾರ ಧಾನ್ಯದ ದಾಸ್ತಾನುಗಳನ್ನು ಇಳಿಸಿ ಆಹಾರ ಧಾನ್ಯಗಳ ವಿತರಣೆಯನ್ನು ಮಾಡಿದ್ದರಿಂದ ಈ ಸಂಖ್ಯೆ ಕ್ರಮವಾಗಿ 511.7 ಗ್ರಾಂ ಮತ್ತು 514.6 ಗ್ರಾಂಗಳಿಗೆ ಹೆಚ್ಚಿತು, ಆದರೆ ಸಂಪೂರ್ಣ ನವ-ಉದಾರವಾದಿ ಅವಧಿಯಲ್ಲಿ ಆಹಾರಧಾನ್ಯಗಳ ತಲಾವಾರು ಲಭ್ಯತೆ ಅಧಿಕೃತ ಅಂಕಿಅಂಶಗಳ ಪ್ರಕಾರ ಏರಿಕೆಯನ್ನೇ ಕಂಡಿಲ್ಲ ಎಂಬುದು ಸ್ಪಷ್ಟ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬೇಡಿಕೆ ಮತ್ತು ಪೂರೈಕೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಯಾವುದೇ ಗಮನಾರ್ಹ ಮತ್ತು ಸತತ ಬೆಲೆಯೇರಿಕೆಗಳಿಲ್ಲದೆ ನಿಭಾಯಿಸಲಾಯಿತು. ಏಕೆಂದರೆ ದುಡಿಯುವ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ನವ ಉದಾರವಾದಿ ಆಳ್ವಿಕೆಯ ಕಾರ್ಯವಿಧಾನದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಹಿಂಡಲಾಯಿತು.

ಸಮತೋಲನ ತಲೆಕೆಳಗಾಗಬಹುದು

ಈ ಅತಂತ್ರ ಸಮತೋಲನವು ಯಾವುದೇ ಸಮಯದಲ್ಲಿ ತಲೆಕೆಳಗಾಗಬಹುದು, ಅದರಿಂದಾಗಿ ಆಹಾರಧಾನ್ಯದ ಬೆಲೆಗಳಲ್ಲಿ ತಕ್ಷಣವೇ ಏರಿಕೆಯಾಗಬಹುದು. ಅದರಿಂದಾಗಿ ಉಂಟಾಗುವ ಹಣದುಬ್ಬರದ ನಿರೀಕ್ಷೆಗಳು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು. ಇದು ಬಂಡವಾಳಶಾಹಿ ಪರಿಸ್ಥಿತಿಗಳಲ್ಲಿ ಸರಕಾರ ಹಣದುಬ್ಬರ-ವಿರೋಧಿ ನೀತಿ ಎಂಬ ಹೆಸರಿನಲ್ಲಿ ಅಂಗೀಕರಿಸುವ ಕ್ರಮಗಳು ಕೊಳ್ಳುವ ಶಕ್ತಿಯನ್ನು ಇನ್ನಷ್ಟು ಬಿಗಿಯಾಗಿ ಹಿಂಡಿ ಹಾಕುವ ವರೆಗೆ ಮುಂದುವರೆಯುತ್ತದೆ. ಉಕ್ರೇನ್ ಯುದ್ಧ ಮತ್ತು ಆಹಾರ ಧಾನ್ಯಗಳ ಬೆಲೆಗಳಲ್ಲಿನ ಜಾಗತಿಕ ಏರಿಕೆಯು ಭಾರತದಲ್ಲಿಯೂ ಹಣದುಬ್ಬರದ ನಿರೀಕ್ಷೆಗಳನ್ನು
ಉಂಟುಮಾಡುವ ಸನ್ನಿವೇಶವನ್ನು ಒದಗಿಸುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನಿರ್ವಹಿಸಲು ಅಗತ್ಯವಿರುವುದಕ್ಕಿಂತ ಹೆಚ್ಚಿನ ಆಹಾರಧಾನ್ಯದ ದಾಸ್ತಾನು ಹೊಂದಿದ್ದರೂ, ಕೆಲವು ಸಮಯದಿಂದ ಇದರ ಪ್ರಮಾಣ ಇಳಿದಿದೆ ಎಂಬ ಸಂಗತಿಯು ಇಂತಹ ನಿರೀಕ್ಷೆಗಳನ್ನು ಮತ್ತಷ್ಟು ಬಲಪಡಿಸುತ್ತದೆ.

ಆಗಸ್ಟ್ 22 ರಂದು, ಉದಾಹರಣೆಗೆ, ಎಫ್‌ಸಿಐ ನ ಒಟ್ಟು ಆಹಾರ ಧಾನ್ಯ ದಾಸ್ತಾನುಗಳು 52.335 ಮಿಲಿಯ ಟನ್‌ಗಳಾಗಿದ್ದು, ಇದರಲ್ಲಿ 24.296 ಮಿಲಿಯನ್ ಟನ್‌ಗಳಷ್ಟು ಅಕ್ಕಿ ಮತ್ತು 28.039 ಮಿಲಿಯನ್ ಟನ್‌ಗಳಷ್ಟು ಗೋಧಿ; ಈ ದಾಸ್ತಾನುಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅಗತ್ಯವಿರುವ ಕಾರ್ಯಾಚರಣೆಯ ದಾಸ್ತಾನುಗಳಿಗಿಂತ ಹೆಚ್ಚಿದ್ದವು, ಆದರೆ ಹಿಂದಿನ ಆರು ವರ್ಷಗಳಲ್ಲಿ ಯಾವುದೇ ಸಮಯದಲ್ಲಿ ಇದ್ದುದಕ್ಕಿಂತ ಕಡಿಮೆ ಇದ್ದವು, ಇದು ಧಾನ್ಯಗಳನ್ನು ಕಳ್ಳ ದಾಸ್ತಾನು ಮಾಡಲು ಮತ್ತು ಮುಕ್ತ-ಮಾರುಕಟ್ಟೆ ಬೆಲೆಯನ್ನು ಏರಿಸಬಹುದು ಎಂಬ ಸಂಕೇತವನ್ನು ಸಟ್ಟಾಕೋರರಿಗೆ ನೀಡಿರಬಹುದು.

ಆಹಾರ ದಾಸ್ತಾನುಗಳ ಈ ಇಳಿಕೆಯೇ ಮೋದಿ ಸರ್ಕಾರದ ಅಸಾಧಾರಣ ಅವಿವೇಕದ ನೀತಿಯ ಒಂದು ಫಲಿತಾಂಶವಾಗಿದೆ. ತನ್ನ ಬಳಿಯಿರುವ ದಾಸ್ತಾನುಗಳನ್ನು ಹೊರಹಾಕುವ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಆಹಾರಧಾನ್ಯಗಳ ಬೆಲೆಉಬ್ಬರವನ್ನು ತಗ್ಗಿಸಬಹುದು ಎಂದು ಅದು ಭಾವಿಸಿತ್ತು. ಸಟ್ಟಾಕೋರರು ಸರ್ಕಾರವು ಹೊರ ಹಾಕಿದ್ದನ್ನು ಖರೀದಿಸಿದರು, ಇದರಿಂದಾಗಿ ಹಣದುಬ್ಬರವು ಮೊದಲಿನಂತೆ ಮುಂದುವರೆಯಿತು, ಆದರೆ ಸರ್ಕಾರಿ ದಾಸ್ತಾನುಗಳು ಅಕಾರಣವಾಗಿ ಇಳಿದವು, ಆ ಮೂಲಕ ಹಣದುಬ್ಬರದ ನಿರೀಕ್ಷೆಗಳನ್ನು ಮತ್ತು ಅದರಿಂದಾಗಿ ಹಣದುಬ್ಬರದ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲಾಯಿತು. ಆದ್ದರಿಂದ ಸಹಜವಾಗಿಯೇ ಆಹಾರಧಾನ್ಯದ ಬೆಲೆಗಳು ಹಣದುಬ್ಬರದ ನಿರೀಕ್ಷೆಗಳ ಉತ್ತೇಜನೆಯಿಂದ ಏರಿದಾಗ, ಅದರ ಸಾಮಾನ್ಯ
ಪರಿಣಾಮವಾಗಿ ಇತರ ಆಹಾರ ಪದಾರ್ಥಗಳ ಬೆಲೆಗಳೂ ಏರಿದವು.

ಎರಡು ಪರ್ಯಾಯ ದಾರಿಗಳು

ಈಗ ಸಂಭವಿಸುತ್ತಿರುವ ಆಹಾರ ಹಣದುಬ್ಬರವನ್ನು ಎದುರಿಸಲು ಎರಡು ಪರ್ಯಾಯ ಮಾರ್ಗಗಳಿವೆ. ಒಂದು, ವಿತ್ತೀಯ ನೀತಿಯ ಮೂಲಕ, ಬಡ್ಡಿದರಗಳನ್ನು ಹೆಚ್ಚಿಸುವುದು ಮತ್ತು ಒಟ್ಟಾರೆಯಾಗಿ ಸಾಲನೀಡಿಕೆಯನ್ನು ಬಿಗಿಗೊಳಿಸುವುದು. ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಕೇವಲ ಆಹಾರಧಾನ್ಯ ವಲಯಕ್ಕೆ ನೀಡಲಾಗುತ್ತಿದ್ದ ಸಾಲಗಳನ್ನು “ಆಯ್ದ ಸಾಲ ನಿಯಂತ್ರಣ” ಎಂಬ ನೀತಿಯ ಅಡಿಯಲ್ಲಿ ಬಿಗಿಗೊಳಿಸಲಾಗಿತ್ತು; ಆದರೆ ನವ-ಉದಾರವಾದಿ ಯುಗದಲ್ಲಿ ಇದು ಬಳಕೆಯಲ್ಲಿಲ್ಲ, ಅದರಿಂದಾಗಿ ಬಡ್ಡಿದರದ ನೀತಿಯನ್ನು ಬಳಸಲಾಗುತ್ತಿದೆ, ಇದು ಅನಿವಾರ್ಯವಾಗಿ ಸಣ್ಣ ಉದ್ಯಮಗಳನ್ನು ಅಸಮರ್ಥಗೊಳಿಸುತ್ತದೆ ಮತ್ತು
ಗಮನಾರ್ಹ ನಿರುದ್ಯೋಗವನ್ನು ಉಂಟುಮಾಡುತ್ತದೆ. ಸಂಕ್ಷಿಪ್ತವಾಗಿ, ಆಹಾರ ಬೆಲೆಯ ಹಣದುಬ್ಬರವನ್ನು ನಿಯಂತ್ರಿಸುವ ಈ ವಿಧಾನವು ನಿರುದ್ಯೋಗದ ಸೃಷ್ಟಿಗೆ ಕಾರಣವಾಗುತ್ತದೆ; ಆದರೇನು ಮಾಡುವುದು, ಬಂಡವಾಳಶಾಹಿಯ ಅಡಿಯಲ್ಲಿ ಹಣದುಬ್ಬರವನ್ನು ಎದುರಿಸಲು ಇದೇ ರಾಮಬಾಣವೆಂದು ಸಾಮಾನ್ಯವಾಗಿ ಇದಕ್ಕೇ ಒಲವು ತೋರಿಸಲಾಗುತ್ತದೆ.

ಹಣದುಬ್ಬರವನ್ನು ನಿಯಂತ್ರಿಸುವ ಇನ್ನೊಂದು ಮಾರ್ಗವೆಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸುವುದು, ಇದರಿಂದ ಸರ್ಕಾರಿ ದಾಸ್ತಾನುಗಳನ್ನು ಬಹಿರಂಗ ಮಾರುಕಟ್ಟೆಗೆ ತಳ್ಳುವಂತಾಗದೆ, ಗ್ರಾಹಕರನ್ನು ಬಹಿರಂಗ ಮಾರುಕಟ್ಟೆಯಿಂದ ತೆಗೆದು ಸರ್ಕಾರಿ ದಾಸ್ತಾನುಗಳನ್ನು ಅವರ ನಡುವೆ ವಿತರಿಸಲಾಗುತ್ತದೆ, ಇದು ಸಟ್ಟಾಕೋರರಿಗೆ ಈ ದಾಸ್ತಾನುಗಳು ಲಭ್ಯವಾಗದಂತೆ ಮಾಡುತ್ತದೆ.

ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯು ಉಳಿಯಬೇಕಾದರೆ, ಸರಕಾರ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಕ ಮಾರಾಟವನ್ನು ವಿಸ್ತಾರಗೊಳಿಸಬೇಕು, ಅದನ್ನನುಸರಿಸಿ ಸಂಗ್ರಹಣೆಯನ್ನು ವಿಸ್ತಾರಗೊಳಿಸಬೇಕು; ಹೇಗೂ ಸರ್ಕಾರವು ಈ ವರ್ಷದ ಮುಂಗಾರು ಋತುವಿನಲ್ಲಿ 52.1 ಮಿಲಿಯ ಟನ್‌ಗಳಷ್ಟು ಅಕ್ಕಿಯನ್ನು ಸಂಗ್ರಹಿಸಲು ಯೋಜಿಸುತ್ತಿದೆ. ಪ್ರಸ್ತುತ ಆಹಾರ ಹಣದುಬ್ಬರವನ್ನು ಸೋಲಿಸಲು ಇದು ಸಂಪೂರ್ಣವಾಗಿ ಅಗತ್ಯ ಕ್ರಮವಾಗಿದೆ.

ಮೂರು ಕುಖ್ಯಾತ ಕೃಷಿ ಕಾನೂನುಗಳ ಮೂಲಕ ಜಾರಿಗೆ ತರಲು ಬಯಸಿದ ಕ್ರಮಗಳ ಅಸಾಧಾರಣ ಮೂರ್ಖತನವು ಈಗ ಸ್ಪಷ್ಟವಾಗುತ್ತದೆ. ರೈತರ ಆಂದೋಲನದಿಂದಾಗಿ ಆ ಕ್ರಮಗಳನ್ನು ಹಿಂತೆಗೆದುಕೊಂಡಿರದಿದ್ದರೆ, ನಂತರ ಸಂಗ್ರಹಣೆಯನ್ನು ಖಾಸಗೀಕರಣಗೊಳಿಸಲಾಗುತ್ತಿತ್ತು, ಆಗ ಸರಕಾರದ ಬಳಿ ಹಣದುಬ್ಬರವನ್ನು ಎದುರಿಸಲು ಯಾವುದೇ ಸಾಧನವಿರುತ್ತಿರಲಿಲ್ಲ; ಹಣದುಬ್ಬರ ಖಾಸಗಿ ವಲಯದ ಕೃಪೆಯಿಂದ ಎಗ್ಗಿಲ್ಲದೆ ಮುಂದುವರಿಯುತ್ತಿತ್ತು. ಅದೃಷ್ಟವಶಾತ್ ರೈತರು ದೇಶವನ್ನು ಉಳಿಸಿದರು, ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆಯು ಈಗಲೂ ಚಾಲ್ತಿಯಲ್ಲಿ ಉಳಿದಿದೆ; ಮತ್ತು ಸರ್ಕಾರದ ಕೈಯಲ್ಲಿ ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿಸದೆ ಹಣದುಬ್ಬರವನ್ನು ಎದುರಿಸುವ ಒಂದು ಅಸ್ತ್ರ ಇನ್ನೂ ಉಳಿದಿದೆ.

ವಿಡಿಯೋ ನೋಡಿ: ಪೋಸ್ಟರ್ ಪ್ರದರ್ಶನದ ಮೂಲಕ ಗಾಂಧಿ ಜಯಂತಿ ಆಚರಿಸಿದ ಬೆಂಗಳೂರು ಮೆಟ್ರೋJanashakthi Media

Donate Janashakthi Media

Leave a Reply

Your email address will not be published. Required fields are marked *