ಕಾರವಾರ: ಮಾರುಕಟ್ಟೆಯಲ್ಲಿ 150 ರಿಂದ 300 ರೂಪಾಯಿ ದರದಲ್ಲಿ ದೊರೆಯುವ ಬಕೇಟನ್ನು ವಿವಿಧ ಗ್ರಾಮ ಪಂಚಾಯತಿಗಳು ಹತ್ತುಪಟ್ಟು ಅಧಿಕ ಹಣ ನೀಡಿ ಸಾವಿರಾರು ಸಂಖ್ಯೆಯಲ್ಲಿ ಬಕೆಟ್ ಖರೀದಿಸಿವೆ. ಆ ಮೂಲಕ ಅಧಿಕಾರಿಗಳು ಸ್ವಚ್ಛತೆ ಹೆಸರಿನಲ್ಲಿ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿ ಲಕ್ಷಾಂತರ ರೂಪಾಯಿಯನ್ನು ತಮ್ಮ ಜೇಬಿಗಿಳಿಸಿದ್ದಾರೆ! ಎನ್ನುವ ಆರೋಪ ಕೇಳಿಬಂದಿದೆ.
ಭಟ್ಕಳ ತಾಲೂಕಿನ ಮಾರುಕೇರಿ ಹಾಗೂ ಶಿರಾಲಿ ಗ್ರಾಮ ಪಂಚಾಯತದಲ್ಲಿ ಅತ್ಯಧಿಕ ಬೆಲೆ ನೀಡಿ ಲಕ್ಷಾಂತರ ರೂ. ವೆಚ್ಚ ಮಾಡಿ ಬಕೇಟ್ ಖರೀದಿಸಿದ ದಾಖಲೆಗಳು ಲಭ್ಯವಾಗಿವೆ.
ಭಟ್ಕಳ ತಾಲ್ಲೂಕಿನ ಬಹಳಷ್ಟು ಗ್ರಾಮ ಪಂಚಾಯತ್‌ನಲ್ಲಿ, ದುಬಾರಿ ವೆಚ್ಚದ ಕಸ ತುಂಬುವ ಬಕೆಟ್‌ಗಳನ್ನು ಖರೀದಿ ಈ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ. ಸ್ವಚ್ಛ ಗ್ರಾಮ ಯೋಜನೆಯಡಿ ಪಂಚಾಯತ್ ವ್ಯಾಪ್ತಿಯ ಮನೆಗಳ ಕಸ ವಿಲೇವಾರಿಗೆ ಬಳಸಲು ಕಸದ ಬುಟ್ಟಿಗಳನ್ನು ಖರೀದಿಸಿ, ಅವುಗಳನ್ನು ಆಯ್ದ ಮನೆ, ಹೋಟೆಲ್, ಅಂಗಡಿಗಳಿಗೆ ಹಂಚಲಾಗಿತ್ತು.
ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ 150 ರಿಂದ 300 ರೂಪಾಯಿಗೆ ಸಿಗುವ ಕಸದ ಬಕೆಟ್‌ಗಳಿಗೆ ಬರೋಬ್ಬರಿ 950 ರೂಪಾಯಿ ನೀಡಿ ಖರೀದಿ ಮಾಡಿದ್ದರು. ಶಿರಾಲಿ ಗ್ರಾಮ ಪಂಚಾಯತಿಯ ಖರೀದಿ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಅಲ್ಲದೇ ಇದೊಂದು ದೊಡ್ಡ ಭ್ರಷ್ಟಾಚಾರ ಎನ್ನುವುದು ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ತನಿಖೆಗೆ ಆದೇಶಿಸಿದ್ದು, ಬಕೆಟ್ ಖರೀದಿಯಲ್ಲಿ ಪಿಡಿಓ ಅಕ್ರಮ ಬೆಳಕಿಗೆ ಬಂದಿದೆ.
ಬಕೆಟ್ ಹಗರಣದ ಬಗ್ಗೆ ಕೈಗಾರಿಕಾ ಇಲಾಖೆ ಉಪನಿರ್ದೇಶಕರಿಂದ ತನಿಖೆ ಮಾಡಿಸಿದ್ದು, ಆರೋಪ ಸಾಬೀತಾಗಿದೆ. ಸುಮಾರು 60 ಸಾವಿರದಷ್ಟು ಹೆಚ್ಚುವರಿ ಹಣ ಪಾವತಿಯಾಗಿರುವ ಬಗ್ಗೆ ತನಿಖೆಯಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಇಲಾಖೆಯಿಂದಲೂ ತನಿಖೆ ಮಾಡಿಸಿ ಪಿಡಿಓ ಅವರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡಲಾಗಿದೆ. ಅಲ್ಲದೆ ಅವರ ಮೇಲೆ ಶಿಸ್ತುಕ್ರಮ ಕೂಡ ಜರುಗಿಸಲಾಗಿದೆ ಎಂದು ಸಿಇಓ ಈಶ್ವರ ಕಾಂದೂ ತಿಳಿಸಿದ್ದಾರೆ.
ಬಹುತೇಕ ಗ್ರಾಪಂಗಳಲ್ಲಿ ಇದೇ ರೀತಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.