ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಇತರರ ಮೇಲೆ ಖಾಸಗಿ ಕಂಪನಿಯಿಂದ 12 ಕೋಟಿ ರೂ. ಲಂಚ ಪಡೆದ ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ದಾಖಲಾಗಿದ್ದ ಖಾಸಗಿ ದೂರಿನ ಅರ್ಜಿಯನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದು ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿದ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಮೂಲಗಳ ಪ್ರಕಾರ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ, ವಿಶೇಷ ನ್ಯಾಯಾಲಯದ ಅರ್ಜಿ ವಜಾಗೊಂಡಿದೆ.
ಟಿ.ಜೆ.ಅಬ್ರಹಾಂ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ, ಸೊಸೆ ವಿರೂಪಾಕ್ಷಪ್ಪ ಯಮಕನಮರಡಿ, ಯಡಿಯೂರಪ್ಪ ಅವರ ಪುತ್ರ ಸಂಜಯ್ ಶ್ರೀ, ಪದ್ಮಾವತಿ ಅವರ ಪುತ್ರ ಸಂಜಯ್ ಶ್ರೀ ಮತ್ತು ಇತರರ ಅವರ ವಿರುದ್ಧ ದೂರು ದಾಖಲಿಸಿದ್ದರು.
ಈ ಹಿಂದೆ ಭ್ರಷ್ಟಾಚಾರ ಆರೋಪದಿಂದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡಿದ್ದ ಈ ಪ್ರಕರಣ ಅಂತ್ಯಗೊಂಡಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಅರ್ಜಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ರದ್ದು ಮಾಡಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಕೋಲ್ಕತಾ ಮೂಲದ ಶೆಲ್ ಕಂಪನಿ ಹಾಗೂ ಯಡಿಯೂರಪ್ಪ ಕುಟುಂಬ ಒಡೆತನಕ್ಕೆ ಸೇರಿದ ಹಲವು ಕಂಪನಿ ನಡುವೆ ಹಣಕಾಸಿನ ವಹಿವಾಟು ನಡೆದಿದ್ದು, ಇದೆಲ್ಲವೂ ಕಾನೂನುಬಾಹಿರ ಬೇನಾಮಿ ವ್ಯವಹಾರ ನಡೆಸಿ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ರಾಮಲಿಂಗಂ ಕನ್‌ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ರಾಮಲಿಂಗಂ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ಮೂಲಕ ಪ್ರಭಾವ ಬೀರಿ ಹಲವು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಡತಗಳನ್ನು ತ್ವರಿತ ವಿಲೇವಾರಿ, ಬಿಲ್ ಪಾವತಿ ಹೀಗೆ ನಾನಾ ಕಾರ್ಯಗಳನ್ನು ಮಾಡಿಸಿಕೊಂಡು ಅದಕ್ಕೆ ಪ್ರತಿಯಾಗಿ ಲಂಚವನ್ನು ನೀಡಲಾಗಿದೆ ಎನ್ನಲಾಗಿದೆ.
ಯಡಿಯೂರಪ್ಪ ಕುಟುಂಬ 12.5 ಕೋಟಿ ರೂ. ಕಪ್ಪ ಸಂಗ್ರಹ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಸಂಬಂಧಿಸಿದ ವಾಟ್ಸಪ್ ಸಂದೇಶ, ಸಾಕ್ಷ್ಯಾಧಾರಗಳನ್ನು ನೀಡಲಾಗಿದೆ. ಇನ್ನು ಶಶಿಧರ್ ಮರಡಿ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವಿನ 12.5 ಕೋಟಿ ರೂ. ಹಣಕಾಸಿನ ವಹಿವಾಟು ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಅರ್ಜಿ ವಜಾದ ಬಗ್ಗೆ ಟಿ.ಜೆ. ಅಬ್ರಹಾಂ ಅವರು ಸಾಕ್ಷಾಧಾರಗಳ ಸಮೇತ ಖಾಸಗಿ ದೂರನ್ನು ಸಲ್ಲಿಸಿದ್ದೆ. ಹಿಂದಿನ ರಾಜ್ಯಪಾಲ ವಜುಬಾಯಿ ವಾಲಾ ಅವರು ಅಭಿಯೋಜನಾ ಮಂಜೂರಾತಿ ನಿರಾಕರಣೆ ಮಾಡಿರುವ ಅಂಶವನ್ನೇ ಆಧಾರವಾಗಿಟ್ಟುಕೊಂಡು ನನ್ನ ದೂರನ್ನು ರದ್ದು ಮಾಡಲಾಗಿದೆ. ಯಡಿಯೂರಪ್ಪ ಕುಟುಂಬ ಈ ಪ್ರಕರಣದಲ್ಲಿ ಬೀರಿರುವ ಪ್ರಭಾವ, ರಾಜ್ಯಪಾಲರ ಕಚೇರಿಯ ಭ್ರಷ್ಟಾಚಾರ ಕುರಿತು ನಾನು ಶೀಘ್ರದಲ್ಲಿಯೇ ಸುದ್ದಿಗೊಷ್ಠಿ ನಡೆಸಿ ಬಹಿರಂಗ ಪಡಿಸಲಿದ್ದೇನೆ ಎಂದು ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.