ಬೆಂಗಳೂರು: 16 ತಿಂಗಳುಗಳಾದರೂ ಕೋವಿಡ್ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲಿಯೇ ಕೊಳೆತು ಹೋದ ಆಘಾತಕಾರಿ ಘಟನೆಯೊಂದು ರಾಜಾಜಿನಗರದ ESI ಆಸ್ಪತ್ರೆಯಲ್ಲಿ ನಡೆದಿದೆ.
ಮೃತದೇಹಗಳನ್ನು ಚಾಮರಾಜಪೇಟೆಯ ದುರ್ಗಾ ಸುಮಿತ್ರಾ (40) ಹಾಗೂ ಕೆ.ಪಿ.ಅಗ್ರಹಾರದ ಎನ್.ಎಲ್.ಮುನಿರಾಜು (67) ಎಂದು ಗುರುತಿಸಲಾಗಿದೆ. ಇವರು 2020ರ ಜುಲೈನಲ್ಲಿ ಅಸುನೀಗಿದ್ದರು.
‘ಆಸ್ಪತ್ರೆ ಆವರಣದಲ್ಲಿರುವ ಹಳೆಯ ಶೈತ್ಯಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿತ್ತು. ಅವುಗಳನ್ನು ವಿಲೆ ಮಾಡಲು ಸಿಬ್ಬಂದಿ ಮರೆತಿದ್ದರು. ಕೋವಿಡ್ ಮರಣ ಪ್ರಕರಣಗಳು ಕಡಿಮೆಯಾಗಿದ್ದರಿಂದ ಶೈತ್ಯಾಗಾರದತ್ತ ಸಿಬ್ಬಂದಿ ತಿರುಗಿಯೂ ನೋಡಿರಲಿಲ್ಲ. 2021ರ ಆಗಸ್ಟ್‌ನಲ್ಲಿ ಅದಕ್ಕೆ ಬೀಗ ಹಾಕಲಾಗಿತ್ತು. ಆಗಲೂ ಒಳಗೆ ಹೋಗಿ ಪರೀಕ್ಷಿಸಿರಲಿಲ್ಲ. ಹೋದ ಶನಿವಾರ ಸ್ವಚ್ಛತಾ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷಕ್ಕೆ ಇದು ನಿದರ್ಶನ’ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೀಗ ಎರಡೂ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಪತ್ರ ಬರೆದ ರಾಜಾಜಿ ನಗರ ಶಾಸಕ ಸುರೇಶ್ ಕುಮಾರ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಕುಟುಂಬದವರ ಆಕ್ರೋಶ : ಘಟನೆ ಬೆಳಕಿಗೆ ಬಂದ ನಂತರ ತಮ್ಮ ಕುಟುಂಬ ಸದಸ್ಯರ ಮೃತದೇಹಗಳು ಪತ್ತೆಯಾದ ವಿಚಾರ ತಿಳಿದು ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಮೃತರ ಸಂಬಂಧಿಕರು, ಆಸ್ಪತ್ರೆ ವೈದ್ಯರು ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದಾಗಲೇ ಮೃತದೇಹದ ಪತ್ತೆಯಾಗಿರುವುದು ತಿಳಿದಿದ್ದು ಎಂದು ದುರ್ಗಾ ಸೀತಾರಾಮ್ ಅವರು ಸಂಬಂಧಿ ಸುಜಾತಾ ಅವರು ಹೇಳಿದ್ದಾರೆ.
ಮುನಿರಾಜು ಅವರ ಸಂಬಂಧಿ ಸತೀಶ್ ಕುಮಾರ್ ಮಾತನಾಡಿ, ಇದು ನಿರ್ಲಕ್ಷ್ಯದ ವಿಚಾರವೆಂದು ಆಸ್ಪತ್ರೆ ಹಾಗೂ ಬಿಬಿಎಂಪಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳ ದೂರವಾಣಿ ಸಂಖ್ಯೆ ನೀಡುವಂತೆ ತಿಳಿಸಿದಾಗ ನಮಗೆ ಬೆದರಿಕೆ ಹಾಕಿದರು. ಈಗಾಗಲೇ ತಡವಾಗಿದೆ, ಮತ್ತಷ್ಟು ತಡ ಮಾಡಬೇಡಿ ಎಂದು ಹೇಳಿ ಆಸ್ಪತ್ರೆಯಿಂದ ನಮ್ಮನ್ನು ಹೊರಗೆ ಕಳುಹಿಸಿದರು. ಇದೀಗ ಕ್ಷಮೆಯಾಚಿಸುತ್ತಿದ್ದಾರೆಂದು ಹೇಳಿದ್ದಾರೆ.