ಕೊರೊನಾ ಕರ್ಫ್ಯೂ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಪೂರ್ಣ ವಿವರ

ಬೆಂಗಳೂರು: ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕೊರೊನಾ ಕಫ್ರ್ಯೂ ಇಂದು ರಾತ್ರಿಯಿಂದ ಜಾರಿಯಾಗಲಿದ್ದು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ , ಪಬ್, ಸಿನಿಮಾ ಮಂದಿರ ಬಂದ್ ಆಗಲಿವೆ.

ಇಂದು ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ರಾಜಧಾನಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ತುಮಕೂರು, ಕಲಬುರಗಿ ಜಿಲ್ಲೆಗಳಲ್ಲಿ ನಗರಕ್ಕೆ ಮಾತ್ರ ಸೀಮಿತವಾಗುತವಂತೆ ಕಫ್ರ್ಯೂ ಜಾರಿಯಾಗಲಿದೆ.

ಒಟ್ಟು 10 ದಿನಗಳ ಕಾಲ ಕೊರೊನಾ ಕಫ್ರ್ಯೂ ಜಾರಿಯಲ್ಲಿದ್ದು, ರಾತ್ರಿ 10ರಿಂದ 5 ಗಂಟೆವರೆಗೆ ಬಾರ್, ರೆಸ್ಟೋರೆಂಟ್, ಪಬ್, ಡಿಸ್ಕೋತೆಕ್, ಸಿನಿಮಾ ಮಂದಿರಗಳು, ನಾಟಕ ಮಂದಿರಗಳು, ಕೈಗಾರಿಕೆ, ಗಾರ್ಮೆಂಟ್ಸ್, ಹೋಟೆಲ್, ಕ್ಲಬ್‍ಗಳು, ರಸ್ತೆಬದಿ ವ್ಯಾಪಾರ, ಗುಂಪುಗೂಡುವುದು, ಸಭೆ-ಸಮಾರಂಭ, ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ

ಕೊರೊನಾ ಕಫ್ರ್ಯೂ ಇದ್ದರೂ ಕೂಡ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಸರ್ಕಾರಿ , ಖಾಸಗಿ, ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡೇ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬೇಕು. ಸಾಮಥ್ರ್ಯಕ್ಕಿಂತ ಹೆಚ್ಚು ಜನರಿಗೆ ಅವಕಾಶವಿರುವುದಿಲ್ಲ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಇಡೀ ನಗರ ಸ್ತಬ್ದಗೊಳ್ಳಲಿದೆ. ಪ್ರಮುಖವಾಗಿ ಅತ್ಯಂತ ಜನನಿಬಿಡ ಪ್ರದೇಶಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಶಾಂತಿನಗರ, ಸ್ಯಾಟ್‍ಲೈಟ್ ಬಸ್ ನಿಲ್ದಾಣ, ಯಶವಂತಪುರ, ಶಿವಾಜಿನಗರ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲೂ 10 ಗಂಟೆ ನಂತರ ಜನರು ಸೇರುವುದಕ್ಕೆ ನಿರ್ಬಂಧ ಹಾಕಲಾಗಿದೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಕೆಲವು ರಸ್ತೆಗಳು ಕೂಡ ಬಂದ್ ಆಗಲಿದ್ದು, ಮುಖ್ಯವಾಗಿ ತುಮಕೂರು ರಸ್ತೆಯಿಂದ ಗೊರಗುಂಟೆಪಾಳ್ಯ, ಯಲಹಂಕ ರಸ್ತೆ, ಹೊಸಕೋಟೆ, ಬಿಡದಿ ಸೇರಿದಂತೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಅಲ್ಲದೆ ನಗರದ ಒಳಗಡೆ ಇರುವ ಬಹುತೇಕ ಎಲ್ಲ ಪ್ರಮುಖ ರಸ್ತೆಗಳ ಫ್ಲೈಓವರ್‍ಗಳಿಗೆ ರಾತ್ರಿ 9.30ರಿಂದಲೇ ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಸಾರ್ವಜನಿಕರು ಸಂಚರಿಸದಂತೆ ಪೊಲೀಸರು ನಿರ್ಬಂಧ ಹಾಕಲಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚಿನ ಸೋಂಕು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಇಲ್ಲಿಯೇ ಕಠಿಣ ನಿಯಮಗಳನ್ನು ಜಾರಿ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ , ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಶೇ.80ರಷ್ಟು ಸೋಂಕಿನ ಪ್ರಕರಣಗಳು ಬೆಂಗಳೂರುವೊಂದರಲ್ಲೇ ಬೆಳಕಿಗೆ ಬರುತ್ತಿರುವುದರಿಂದ ಇಲ್ಲಿ ನಿಯಮಗಳನ್ನು ಬಿಗಿಗೊಳಿಸಬೇಕೆಂದು ಸಿಎಂ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಉಳಿದಂತೆ ಇತರೆ ಜಿಲ್ಲಾ ಭಾಗಗಳಲ್ಲೂ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಲಿದ್ದು, ಅಪ್ಪಿತಪ್ಪಿ ಯಾರಾದರೂ ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಸೂಚನೆ ಕೊಟ್ಟಿದೆ.

ಶತಾಯಗತಾಯ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರೇ ಎಲ್ಲಾ ರಾಜ್ಯಗಳಿಗೂ ಸೂಚನೆ ಕೊಟ್ಟಿರುವುದರಿಂದ, ಈ ಬಾರಿ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

 

ಏನೇನು ಲಭ್ಯ
* ಆಸ್ಪತ್ರೆ
* ಆಯಂಬುಲೆನ್ಸ್
* ಬಸ್ ಸಂಚಾರ
* ಹಣ್ಣು, ಹಾಲು, ತರಕಾರಿ
* ಔಷಧಿ ಅಂಗಡಿಗಳು

 ಏನೇನು ಬಂದ್
* ಬಾರ್ ಅಂಡ್ ರೆಸ್ಟೋರೆಂಟ್,
* ಡಿಸ್ಕೊತೆಕ್, ಪಬ್
* ಕ್ಲಬ್‍ಗಳು
* ಗಾರ್ಮೆಂಟ್ಸ್
* ಕೈಗಾರಿಕೆಗಳು
* ಹೋಟೆಲ್‍ಗಳು
* ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು
* ಔತಣಕೂಟಗಳು
* ಹಾರ್ಡ್‍ವೇರ್‍ಶಾಪ್
* ಮಾಲ್‍ಗಳು
* ಮಾರುಕಟ್ಟೆ
* ಬಸ್ ನಿಲ್ದಾಣ
* ಜನನಿಬಿಡ ಪ್ರದೇಶ

Donate Janashakthi Media

Leave a Reply

Your email address will not be published. Required fields are marked *