ನವದೆಹಲಿ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದ ಮತ್ತೆ ರೂ.25 ಹೆಚ್ಚಳ ಮಾಡಲಾಗಿದೆ. ಸತತ ಮೂರನೇ ತಿಂಗಳು ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ಇಂದಿನಿಂದ, ಅಂದರೆ, ಸೆಪ್ಟೆಂಬರ್ 1, 2021ರಿಂದ ಎಲ್‌ಪಿಜಿ ಅಡುಗೆ ಅನಿಲ ದರವನ್ನು 25 ರೂ.ಗಳಷ್ಟು ಹೆಚ್ಚಿಸಲು ತೀರ್ಮಾನಿಸಿದೆ. ಈ ಪ್ರಕಾರವಾಗಿ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ. ತಲುಪಿದೆ.
ಕಳೆದ ತಿಂಗಳು ಸಹ ಬೆಲೆ ಏರಿಕೆ
ತೈಲ ಕಂಪನಿಗಳು ಪ್ರತಿ ತಿಂಗಳು 1 ಹಾಗೂ 15ರಂದು ಎಲ್‌ಪಿಜಿ ಬೆಲೆಗಳನ್ನು ಪರಿಶೀಲನೆ ನಡೆಸಲಿದ್ದು, ಆ ಪ್ರಕಾರವಾಗಿ ಬೆಲೆಗಳನ್ನು ಏರಿಸಲಾಗುತ್ತದೆ. ಈ ಹಿಂದೆ ಆಗಸ್ಟ್ 18, 2021 ರಂದು ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಅದಕ್ಕೂ ಮೊದಲು ಜುಲೈ 1, 2021 ರಂದು ಬೆಲೆಯನ್ನು ಹೆಚ್ಚಿಸಲಾಗಿತ್ತು.
ಇದನ್ನು ಓದಿ: ಅಡುಗೆ ಅನಿಲ ದರ ರೂ.25 ಮತ್ತೆ ಹೆಚ್ಚಳ: ಗ್ರಾಹಕರಿಗೆ ಮತ್ತೆ ಹೊರೆ
ಜುಲೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 25.50 ರೂಪಾಯಿ ಮತ್ತು ಆಗಸ್ಟ್‌ನಲ್ಲಿ 25 ರೂಪಾಯಿ ಏರಿಕೆ ಮಾಡಲಾಗಿತ್ತು.
2021ರ ಆರಂಭದಿಂದ ಸರಾಸರಿ ರೂ.190 ದರ ಏರಿಕೆ
2021 ರ ಆರಂಭದಲ್ಲಿ, ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. 694 ಇತ್ತು. ನಂತರ ಫೆಬ್ರವರಿಯಲ್ಲಿ ರೂ.75, ಮಾರ್ಚ್‌ನಲ್ಲಿ ರೂ.50 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ನಂತರ ಏಪ್ರಿಲ್‌ನಲ್ಲಿ 10 ರೂಪಾಯಿ ಇಳಿಕೆ ಮಾಡಿದ್ದರಿಂದ ಸರಾಸರಿ ಬೆಲೆ 809 ರೂಪಾಯಿಗೆ ತಲುಪಿತ್ತು.
ನಂತರ ಮತ್ತೆ ಜುಲೈ ಮತ್ತು ಆಗಸ್ಟ್‌ನಲ್ಲಿ ತಲಾ 25 ರೂಪಾಯಿ ಏರಿಕೆಗೊಂಡು 859.50 ರೂಪಾಯಿ ದರ ಏರಿಕೆ ಮಾಡಿದ್ದು ಇದೀಗ ಮತ್ತೆ ಇಂದು 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಎಲ್‌ಪಿಜಿ ಸಿಲಿಂಡರ್ ಸರಾಸರಿ ಬೆಲೆ 884.50 ರೂಪಾಯಿಗೆ ತಲುಪಿಸಿದೆ.
ಪ್ರಮುಖ ನಗರಗಳಲ್ಲಿ 14.2 ಕೆ.ಜಿ. ಅಡುಗೆ ಅನಿಲ ದರ ಪಟ್ಟಿ 2021ರಂತೆ ಹೀಗಿವೆ:
ಮಹಾನಗರ | ಸೆಪ್ಟಂಬರ್ 1ರಂತೆ | ಆಗಸ್ಟ್ 17ರಂತೆ | ಜುಲೈ 1ರಂತೆ |
ದೆಹಲಿ | 884.50 | 859.50 | 834.50 |
ಕೋಲ್ಕತ್ತಾ | 911 | 886 | 861 |
ಮುಂಬೈ | 884.50 | 859.50 | 834.50 |
ಚೆನ್ನೈ | 900.50 | 875.50 | 850.50 |
ಏಳು ವರ್ಷಗಳಲ್ಲಿ ಎಲ್‌ಪಿಜಿ ದರ ದುಪ್ಪಟ್ಟು
ಗ್ಯಾಸ್ ಸಿಲಿಂಡರ್‌ಗಳಿಗೆ ಸಬ್ಸಿಡಿ ರಹಿತ ಬೆಲೆಗಳು ಕಳೆದ ಹಲವು ವರ್ಷಗಳಿಂದ ಹೆಚ್ಚಾಗುತ್ತಿವೆ. ದೆಹಲಿಯಲ್ಲಿ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ದರ ಕಳೆದ ಏಳು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ದೆಹಲಿಯಲ್ಲಿ 2014 ರ ಮಾರ್ಚ್ 1 ರಂದು ಪ್ರತಿ ಸಿಲಿಂಡರ್‌ಗೆ ರೂ 410.50 ಇದ್ದ ಬೆಲೆ ಇಂದಿನ ದರಕ್ಕೆ ಹೋಲಿಸಿದ್ದಲ್ಲಿ ಈಗ 884.50 ರೂ.ಗಳಷ್ಟು (ಬೆಂಗಳೂರು ರೂ.887.5) ಆಗಿದೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಬಿಜೆಪಿ ಸರಕಾರದ ನೀತಿಗಳಿಂದಾಗಿ ಸತತ ಬೆಲೆ ಏರಿಕೆ ಕಂಡಿದ್ದು, ಗ್ಯಾಸ್ ಸಿಲಿಂಡರ್ ದರಗಳೊಂದಿಗೆ ಪೆಟ್ರೋಲ್ ಡೀಸೆಲೆ ಮೇಲಿನ ದರಗಳು ಸಹ ಸತತವಾಗಿ ಏರಿಕೆ ಕಂಡಿದೆ. ಬೆಲೆಗಳ ದರಗಳು ಏರಿಕೆ ಕಂಡಷ್ಟು ಪ್ರಮಾಣದಲ್ಲಿ ಇಳಿಕೆ ಕಂಡು ಬರದ ಪರಿಣಾಮವಾಗಿ ಬಿಜೆಪಿ ಸರಕಾರದ ವಿರುದ್ಧ ಜನತೆ ಆಕ್ರೋಶ ತೀವ್ರಗೊಂಡಿದೆ.
ರಾಹುಲ್ ಗಾಂಧಿ ಟೀಕೆ
ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡುತ್ತಿರುವವರು, ತಾವು ಮಾತ್ರ ಸ್ನೇಹಿತರ ನೆರಳಿನಲ್ಲಿ ಮಲಗುತ್ತಿದ್ದಾರೆ. ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದೇಶದ ಜನರು ಒಗ್ಗಟ್ಟಿನಿಂದ ಹೋರಾಡಲಿದ್ದಾರೆʼ ಎಂದು ಟ್ವೀಟ್ ಮಾಡಿದ್ದಾರೆ.
ಅರಸೀಕೆರೆ ತಾಲೋಕಿನ ಬಾಣಾವರ ದ ಸುತ್ತಮುತ್ತಲಿನ ಹಳ್ಳಗಳ ಜನರಿಗೆ ಸಿಲಿಂಡರ್ ತಲುಪಿಸಿ ಒಂದು ಸಿಲಿಂಡರ್ ಗೆ ೯೩೦ ರೂ ತೆಗೆದುಕೊಳ್ಳುತ್ತಾರೆ. ಹಳ್ಳಿಯ ಬಡ ರೈತರುಗಳು ಬದುಕಬೇಕೋ ಬೇಡವೋ ನೀವುಗಳೇ ಹೇಳಿ.