ಸರಕಾರಿ ನೌಕರರ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸ್ಥಾಪಿಸುವ ಜಮ್ಮು ಕಾಶ್ಮೀರ ಸರಕಾರದ ನಿರ್ಧಾರವನ್ನು ಸಿಪಿಐ(ಎಂ) ಮುಖಂಡ ಮೊಹಮ್ಮದ್ ಯೂಸುಫ್ ತರಿಗಾಮಿ ವಿರೋಧಿಸಿದ್ದಾರೆ. ತರಿಗಾಮಿ ಅವರು ಸರಕಾರದ ಈ ಕ್ರಮವನ್ನು “ನಿರಂಕುಶ ಮತ್ತು ಕಠಿಣ” ಎಂದು ಕರೆದಿದ್ದಾರೆ.
ಅವರು ದಿ ಹಿಂದೂ ಪತ್ರಿಕೆಗೆ ಗುರುವಾರ ನೀಡಿರುವ ಹೇಳಿಕೆಯಲ್ಲಿ, “ಯಾವುದೇ ವಿಚಾರಣೆ ನಡೆಸದೆ, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸರ್ಕಾರಿ ನೌಕರರನ್ನು ವಜಾಗೊಳಿಸುವುದು ಅಥವಾ ಇತರ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ನಿರಂಕುಶ ಮತ್ತು ಕಠಿಣ ನಿರ್ಧಾರವಾಗಿದೆ. ಇದಕ್ಕಾಗಿ ಜಮ್ಮು ಕಾಶ್ಮೀರ ಆಡಳಿತವು ಎಸ್‌ಟಿಎಫ್ ಅನ್ನು ರಚಿಸುವುದು ಲಕ್ಷಾಂತರ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿ: ಸುಪ್ರಿಂನಲ್ಲಿ ಕೋವಿಡ್ ಸಂಬಂಧ ತುರ್ತು ವಿಚಾರಣೆ: ಹಿಂದೆ ಸರಿದ ಹರೀಶ್ ಸಾಳ್ವೆ
ಇದು ಜಾರಿಯಾದರೆ ಯಾವುದೇ ವಿಚಾರಣೆ ನಡೆಸದೆ, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸರ್ಕಾರಿ ನೌಕರರನ್ನು ವಜಾಗೊಳಿಸುವುದು ಅಥವಾ ಇತರ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.
ಇಂತಹ ಕ್ರಮಗಳು ನೌಕರರ ಶ್ರೇಣಿಯಲ್ಲಿ ಕೋಪ ಮತ್ತು ಅಸಮಾಧಾನವನ್ನು ಹೆಚ್ಚಿಸುತ್ತದೆ ಎಂದು ಅವರು ಎಚ್ಚರಿಸಿದ್ದು, “ಆಡಳಿತವು ಈ ಆದೇಶವನ್ನು ಪರಿಶೀಲಿಸಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಆಕ್ಸಿಜನ್ ಗೆ ಪರದಾಟ ಕೇರಳದಲ್ಲಿ ಮಾತ್ರ ಇಲ್ಲ
ಸೇವಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ ಅಂತಹ ನೌಕರರ ವಿರುದ್ಧ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಸಾಕಷ್ಟು ನಿಬಂಧನೆಗಳಿವೆ. ಹೊಸ ಆದೇಶಗಳನ್ನು ಹೊರಡಿಸುವ ಅಗತ್ಯವಿಲ್ಲ. ಈ ಆದೇಶವು ಸರ್ಕಾರ ಮತ್ತು ಅಧಿಕಾರಿಗಳಿಗೆ ತಮ್ಮ ಅಧೀನ ಅಧಿಕಾರಿಗಳನ್ನು ನಿಗ್ರಹಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಅನಿಶ್ಚಿತತೆಯ ಖಡ್ಗವನ್ನು ನೌಕರರ ತಲೆಯ ಮೇಲೆ ಇರಿಸಲಾಗಿದೆ, ಅದನ್ನು ಅವರ ಮೇಲಧಿಕಾರಿಗಳು ಸಹ ಬಳಸಿಕೊಳ್ಳಬಹುದು ಎಂದು ಮಾಜಿ ಶಾಸಕರೂ ಆಗಿರುವ ಯೂಸುಫ್ ತರಿಗಾಮಿ ಹೇಳಿದ್ದಾರೆ.
ಯಾವುದೆ ನೌಕರರು ಮೊದಲು ಈ ದೇಶದ ನಾಗರಿಕ ಮತ್ತು ಅವರು ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದರೆ. ಅವರ ಈ ಹಕ್ಕುಗಳನ್ನು ಕಾಪಾಡುವುದು ಈ ಸಂದರ್ಭದ ಅವಶ್ಯಕತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.