ಬೆಂಗಳೂರು: ನಮಗೆ ಬಿಜೆಪಿ ಶತ್ರುವಲ್ಲ, ಈ ದೇಶಕ್ಕೆ ನಿಜವಾದ ಶತ್ರು ಆರ್ಎಸ್ಎಸ್. ಈ ದೇಶಕ್ಕೆ ಶತ್ರುವಾದವರು ಕಾಂಗ್ರೆಸ್ ಶತ್ರುವಾಗುವರು. ಇವರ ವಿರುದ್ಧ ನಮ್ಮ ಯುವ ಪೀಳಿಗೆ ಹೋರಾಡಬೇಕಾದರೆ, ಸೈದ್ಧಾಂತಿಕವಾಗಿ ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧಿ ಅವರ ಸರ್ವಧರ್ಮ ಸಮಬಾಳು ತತ್ವದ ಬಗ್ಗೆ ಅರಿವು ಹೊಂದಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಕೆಪಿಸಿಸಿ ಕಚೇರಿಯ ರಾಜೀವ್ ಭವನದಲ್ಲಿ ಮಾತನಾಡಿದ ಬಿ ಕೆ ಹರಿಪ್ರಸಾದ್, ರಾಹುಲ್ ಗಾಂಧಿ ಅವರು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕೋಮುವಾದದ ಅಜೆಂಡಾ ಹೊಂದಿದೆ. ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಿದ್ಧಾಂತವನ್ನು ಹೇಳುತ್ತಾ ಹಿಂದೂ ಹಾಗೂ ಹಿಂದುತ್ವದ ನಡುವಣ ವ್ಯತ್ಯಾಸವನ್ನು ಹೇಳಿದ್ದರು. ಇದನ್ನು ನಾವು ತಳಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.
ಕೋಮುವಾದದ ಬಗ್ಗೆ ಮಾತನಾಡಿದರೆ ನಾವು ದೇಶಕ್ಕೆ ಕೊಟ್ಟಿರುವ ಪ್ರಜಾಪ್ರಭುತ್ವ, ಸಂವಿಧಾನದ ಮೂಲಕ ದುರ್ಬಲ ವರ್ಗದವರಿಗೆ ಕೊಟ್ಟಿರುವ ಶಕ್ತಿ ಬಗ್ಗೆ ಮಾತನಾಡಬೇಕು. ನಾವು ಹರ್ಡಿಕರ್ ಅವರ ಕ್ಷೇತ್ರದಲ್ಲಿ ತರಬೇತಿ ಕೇಂದ್ರ ಆರಂಭಿಸಿದ್ದು, ಅಲ್ಲಿ ದೇಶದ ಯುವಕರಿಗೆ ಸರಿಯಾದ ಮಾರ್ಗದರ್ಶ ನೀಡಲಾಗುವುದು ಎಂದರು.
ಎಐಸಿಸಿ ನನಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಕೊಟ್ಟಿದ್ದು, ನನ್ನ ಕೊನೆ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.