ನವದೆಹಲಿ: ಕಾಂಗ್ರೆಸ್ ಪಕ್ಷದ ಉನ್ನತ ಮಂಡಳಿ ಸಭೆಯು ಅಕ್ಟೋಬರ್ 16 ರಂದು ನಿಗದಿಯಾಗಿದ್ದು, ಅಂದಿನ ಸಭೆ ಅತ್ಯಂತ ಮಹತ್ವವೂ ಒಳಗೊಂಡಿದೆ. ಅಂದು ಪಕ್ಷದ ನೂತನ ಅಧ್ಯಕ್ಷರ ಆಯ್ಕೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಪರಿಸ್ಥಿತಿ, ಮುಂದಿನ ವರ್ಷ ನಡೆಯಲಿರುವ ಪ್ರಮುಖ ರಾಜ್ಯಗಳ ಚುನಾವಣೆ ಹಾಗೂ ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆಯೂ ಮಾತುಕತೆ ನಡೆಸಲಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯು ಅಕ್ಟೋಬರ್ 16 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ದೆಹಲಿಯ ಪಕ್ಷದ ಪ್ರಧಾನ ಕಚೇರಿಯು ಹೇಳಿಕೆ ಬಿಡುಗಡೆಗೊಳಿಸಿದೆ.
ಅಜೆಂಡಾದಲ್ಲಿ ದೇಶದ ‘ಪ್ರಸ್ತುತ ರಾಜಕೀಯ ಪರಿಸ್ಥಿತಿ’, ‘ಮುಂಬರುವ ವಿಧಾನಸಭಾ ಚುನಾವಣೆ’ ಹಾಗೂ ಸಾಂಸ್ಥಿಕ ಚುನಾವಣೆಗಳು ಇರುತ್ತವೆ ಎಂದು ಅದು ಉಲ್ಲೇಖಿಸಿದೆ.
ಕಳೆದ ತಿಂಗಳು ಪಕ್ಷವು ನಾಯಕತ್ವದ ಬದಲಾವಣೆಯ ವಿಚಾರಗಳ ಚರ್ಚೆಯ ನಡುವೆಯೇ ಪಂಜಾಬ್ ರಾಜ್ಯದಲ್ಲಿ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಿತು. ಅಮರೀಂದರ್ ಸಿಂಗ್ ಬದಲಿಗೆ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಚರಣಜಿತ್ ಚನ್ನಿ ಆಯ್ಕೆಯಾಗಿ ರಾಜ್ಯದ ಸಾರಥ್ಯವನ್ನು ವಹಿಸಿಕೊಂಡರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಂಜಾಬ್ ರಾಜ್ಯದ ವಕ್ತಾರಲ್ಲಿ ಒಬ್ಬರು ರಣದೀಪ್ ಸುರ್ಜೆವಾಲಾ ಸುದ್ದಿಗಾರರಿಗೆ ಶೀಘ್ರದಲ್ಲಿಯೇ ಉನ್ನತ ಮಂಡಳಿ ಸಭೆಯನ್ನು ಸೇರುವ ಬಗ್ಗೆ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದರು.
ಕಾಂಗ್ರೆಸ್ ಪಕ್ಷದ ಕೆಲವು ರಾಜ್ಯಗಳಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಪ್ರಮುಖ ನಾಯಕರು ಪಕ್ಷ ತ್ಯಜಿಸುತ್ತಿರುವ ಬಗ್ಗೆ ಸಭೆ ಕರೆದು ಚರ್ಚಿಸಬೇಕು ಎಂದು ‘ಜಿ–23’ರ ಮುಖಂಡರು ಸೇರಿದಂತೆ ಅನೇಕ ನಾಯಕರು ಇತ್ತೀಚೆಗೆ ಆಗ್ರಹಿಸಿದ್ದರು. ಹಾಗಾಗಿ ಅಕ್ಟೋಬರ್ 16ರ ಕಾಂಗ್ರೆಸ್ ಉನ್ನತ ಮಂಡಳಿ ಸಭೆ ಮಹತ್ವವನ್ನು ಪಡೆದುಕೊಂಡಿದೆ.