ವಿಧಾನಸಭೆ ಕಲಾಪ : ಮಳೆಗೆ ಅಪಾರ ಹಾನಿ, ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಲು ನಿರ್ಧಾರ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ನೋಟಿಸ್ ಸಲ್ಲಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ‘ಹಸಿಬರ’ದ ಸಮಸ್ಯೆಯಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 25 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗದೆ ಜಮೀನು ಪಾಳು ಬದ್ದಿದೆ. ಪ್ರವಾಹ-ಅತಿವೃಷ್ಟಿ ಹಾನಿಗೆ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ನೋಟಿಸ್ ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ಬೆಂಗಳೂರು, ರಾಮನಗರ, ತುಮಕೂರು, ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹ ಹಾಗೂ ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಈ ಎಲ್ಲ ವಿಷಯಗಳ ಚರ್ಚೆಗೆ ಅವಕಾಶ ಕೊಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.  ನಿಯಮ 69 ರ ಅಡಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಿದೆ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮಹದೇವಪುರ, ಬೊಮ್ಮಹಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಐಟಿ-ಬಿಟಿ ಕಂಪನಿಗಳಿಗೂ ಮಳೆ ನೀರು ನುಗ್ಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಕೂಡಾ ಈ ಬಗ್ಗೆ ಧ್ವನಿ ಎತ್ತಿದ್ದರು. ಅದರ ಜೊತೆ ಐಟಿ ಕಂಪನಿಗಳ ಒಕ್ಕೂಟ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರವನ್ನು ಬರೆದಿದ್ದರು. ಈ ನಡುವೆ ರಾಜ್ಯ ಸರ್ಕಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದೆ.

ನಗರದ ಮಹದೇವಪುರದಲ್ಲಿ ಒಂದು ಕಿಲೋ ಮೀಟರ್‌ ರಾಜಕಾಲುವೆ ತೆರವುಗೊಳಿಸಲಾಗಿದೆ. ಒಟ್ಟು ಐದು ಕಡೆಗಳಲ್ಲಿ 15 ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಈ ಎಲ್ಲ ವಿಚಾರಗಳು ಮಂಗಳವಾರ ಸದನದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಒತ್ತುವರಿ ವಿಚಾರ ಹಾಗೂ ಮಳೆ ಹಾನಿ ಸದ್ಯ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬೆಂಗಳೂರಿನ ಮಳೆ ಹಾನಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದರು. ಆದರೆ ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು.

Donate Janashakthi Media

Leave a Reply

Your email address will not be published. Required fields are marked *