ಬೆಂಗಳೂರು : ರಾಜ್ಯದಲ್ಲಿ ಕಾಡ್ಗಿಚ್ಚು ವ್ಯಾಪಿಸುತ್ತಿದ್ದರೂ ಅದರತ್ತ ಗಮನ ಹರಿಸದೆ ಆಡಳಿತಾರೂಢ ಬಿಜೆಪಿ ಸರ್ಕಾರ ಚುನಾವಣಾ ಪ್ರಚಾರ ಮತ್ತು ಶೇ.40ರಷ್ಟು ಲೂಟಿಗಷ್ಟೇ ಪ್ರಾಮುಖ್ಯತೆ ನೀಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯದ ಹಲವೆಡೆ ದಿನದಿನಕ್ಕೂ ಕಾಡ್ಗಿಚ್ಚು ವ್ಯಾಪಿಸುತ್ತಿದೆ. ಬೆಂಕಿ ನಂದಿಸಲು ಶ್ರಮಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಶಸ್ತ್ರವಿಲ್ಲದೆ ಯುದ್ಧ ಮಾಡುವ ದುಃಸ್ಥಿತಿ ಬಂದೊದಗಿದೆ. ಅಪಾರ ಪ್ರಮಾಣದ ಅರಣ್ಯ ಸಂಪತ್ತು, ಪ್ರಾಣಿ ಪಕ್ಷಿಗಳು ಹಾಗೂ ಕಾಡಂಚಿನ ಜನರ ಅರಣ್ಯ ರೋಧನ ಸರ್ಕಾರಕ್ಕೆ ಕೇಳಿಸುತ್ತಿಲ್ಲ ಎಂದು ಪ್ರಶ್ನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶೇ.40ರಷ್ಟು ಕಮಿಷನ್ ಲೂಟಿಯೇ ಮುಖ್ಯವಾಗಿದೆಯೇ ? ಆಡಳಿತ ನಡೆಸುವುದನ್ನು ಬಿಟ್ಟು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವುದೇಕೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ : ಯುಗಾದಿ ಹಬ್ಬಕ್ಕೆ ಸೀರೆ ಹಂಚಲು ಬಂದ ಬಿಜೆಪಿ ಕಾರ್ಯಕರ್ತರು- ಬೆಂಕಿ ಹಚ್ಚಿ ಮತದಾರರಿಂದ ಕ್ಲಾಸ್
ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಹೆಲಿಕಾಫ್ಟರ್ ಪಡೆಯಲು ಕೇಂದ್ರ ಸರ್ಕಾರದ ನೆರವು ಪಡೆಯಬೇಕು. ಇದಕ್ಕಾಗಿ ಮುಖ್ಯಮಂತ್ರಿ ಮತ್ತೆ ದೆಹಲಿಗೆ ಹೋಗಬೇಕಿಲ್ಲ, ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಇಲ್ಲಿಗೇ ಬರುತ್ತಿದ್ದಾರೆ. ಅವರೊಂದಿಗೆ ಮಾತನಾಡಿ ಬೆಂಕಿ ನಂದಿಸಲು ಹೆಲಿಕಾಫ್ಟರ್ ಸೌಲಭ್ಯವನ್ನು ಪಡೆದುಕೊಳ್ಳಿ ಎಂದು ಕಾಂಗ್ರೆಸ್ ಸಲಹೆ ನೀಡಿದೆ.