ಬಿಜೆಪಿ ಸರ್ಕಾರದ ಎರಡು ವರ್ಷಗಳ ವೈಫಲ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ

ಜನಪೀಡಕ ಸರ್ಕಾರ” ಎಂಬ ತಲೆಬರಹದ ಸಣ್ಣ ಪುಸ್ತಕ ಬಿಡುಗಡೆ

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ದುರಾಡಳಿತ ಮತ್ತು ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ಕೊಟ್ಟಿದ್ದು, ಬಿಟ್ಟರೆ ಶೂನ್ಯ ಸಾಧನೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ‘ಜನಪೀಡಕ ಸರ್ಕಾರ’ ಎಂಬ ಸರ್ಕಾರದ ವೈಫಲ್ಯದ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ಮೊನ್ನೆ ಬಿ.ಎಸ್. ಯಡಿಯೂರಪ್ಪ 2 ವರ್ಷ ಸರ್ಕಾರ ನಡೆಸಿದೆ ಎಂದು ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದರು. ರಾಜ್ಯವನ್ನು ಸಂಕಷ್ಟದ ದಿನದಲ್ಲೂ ಅಭಿವೃದ್ಧಿಗೆ ಕೊಂಡೊಯ್ದಿದ್ದೇವೆ ಅಂತೆಲ್ಲಾ ಹೇಳಿದರು. ಇದೀಗ ನಿರ್ಗಮಿಸಿದ್ದಾರೆ. ಹೊಸದಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.
2019 ಜುಲೈನಲ್ಲಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು 2 ವರ್ಷದ ನಂತರ ಅದೇ ತಿಂಗಳು ಸಿಎಂ ರಾಜೀನಾಮೆ ನೀಡಿದ್ದಾರೆ. ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. 2018ರಲ್ಲಿ ಯಾರಿಗೂ ಬಹುಮತ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ದೊಡ್ಡ ಪಕ್ಷ ಆಗಿದ್ದಕ್ಕೆ ಬಿ.ಎಸ್ ಯಡಿಯೂರಪ್ಪಗೆ ಸರ್ಕಾರ ರಚಿಸುವ ಅವಕಾಶ ಬಂತು. ಅವರು ವಿಫಲವಾದಾಗ ಮೈತ್ರಿ ಸರ್ಕಾರ ಬಂತು. ಅದನ್ನು ಬೀಳಿಸಿ ಮತ್ತೆ ಯಡಿಯೂರಪ್ಪ ಅನ್ಯಮಾರ್ಗದಲ್ಲಿ ಅನೈತಿಕ ಸರ್ಕಾರ ರಚಿಸಿದರು ಎಂದು ವಾಗ್ದಾಳಿ ನಡೆಸಿದರು.
2ನೇ ಅಲೆ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತು. ಸಿದ್ಧತೆ ಮಾಡಿಕೊಳ್ಳದೇ ಸರ್ಕಾರ ವಿಫಲವಾಯಿತು. ಕೊರತೆಗಳೇ ಹೆಚ್ಚಾದವು. ಬೆಡ್ ಸಿಗದೇ ಸಾವಿರಾರು ಜನ ಮೃತಪಟ್ಟರು. ಸಿದ್ಧತೆ ಮಾಡಿಕೊಂಡಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಇಲ್ಲಿ ಸುಧಾಕರ್ ಹೇಳಿದಂತೆ ಕೇಂದ್ರ ಆರೋಗ್ಯ ಸಚಿವರೂ ಸುಳ್ಳು ಹೇಳಿದ್ದಾರೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಕಾರ್ಮಿಕರು ಬೀದಿಗೆ ಬಂದರು ಎಂದಿದ್ದಾರೆ.
ಮಕ್ಕಳಿಗೆ, ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲೂ ಹಣ ಹೊಡೆದ ಸರ್ಕಾರ‌ವಿದು. ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಕೊರೊನಾ ಸಲಕರಣೆ ಖರೀದಿಯಲ್ಲೂ ಅಕ್ರಮ ಎಸಗಿದ್ದಾರೆ. ಎಷ್ಟೋ ಸಲಕರಣೆ ಬಳಸಲಿಕ್ಕಾಗಲಿಲ್ಲ. 909 ವೆಂಟಿಲೇಟರ್ ಬಳಸಲೇ ಇಲ್ಲ. ನೂರಾರು ಕೋಟಿ ರೂ. ಬಿಲ್ ಮಾಡಿದರು. ದಾಖಲೆ ಸಮೇತ ನಾವು ಸರ್ಕಾರದ ಭ್ರಷ್ಟಾಚಾರವನ್ನು ಗಮನಕ್ಕೆ ತಂದೆವು. ಯಡಿಯೂರಪ್ಪ ಉತ್ತರಿಸಲೇ ಇಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಜನರನ್ನು  ಕೊಂದ ಸರ್ಕಾರ :  ಆಕ್ಸಿಜನ್ ಇಲ್ಲದೆ ಚಾಮರಾಜನಗರ, ಬೆಂಗಳೂರು, ಕಲ್ಬುರ್ಗಿ, ಕೋಲಾರ ಮುಂತಾದ ಕಡೆ ಜನ ಮರಣ ಹೊಂದಿದರು. ಆದರೆ ಕೇಂದ್ರ ಸರ್ಕಾರ “ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೊಬ್ಬರೂ ಮರಣ ಹೊಂದಿಲ್ಲ” ಎಂದು ಹೇಳುತ್ತಿದೆ. ಚಾಮರಾಜನಗರ ದುರಂತದ ಬಗ್ಗೆ, ಆಕ್ಸಿಜನ್ ಇಲ್ಲದೆ ಜನರು ಮರಣ ಹೊಂದುತ್ತಿರುವ ಬಗ್ಗೆ ದೇಶದ ನ್ಯಾಯಾಲಯಗಳು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ತಜ್ಞರುಗಳು 2020ರ ನವೆಂಬರ್ 30 ರಂದೆ ಎರಡನೆ ಅಲೆಯ ಕುರಿತು ವರದಿ ನೀಡಿದ್ದರು. ಆದರೆ ಸರ್ಕಾರ ಯಾವುದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕ್ರಮ ಕೈಗೊಳ್ಳಲು ಕನಿಷ್ಠ 5 ತಿಂಗಳು ಕಾಲಾವಕಾಶವಿತ್ತು.

ವೆಂಟಿಲೇಟರುಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆದು ವೆಂಟಿಲೇಟರುಗಳಲ್ಲಿ ಬಹುತೇಕ ಕಳಪೆಯಾಗಿದ್ದಕ್ಕೆ ಆಸ್ಪತ್ರೆಗೆ ವಿತರಿಸದೆ ಕರ್ನಾಟಕದಲ್ಲಿ 909 ವೆಂಟಿಲೇಟರುಗಳು ಗೋದಾಮುಗಳಲ್ಲೆ ಧೂಳಿಡಿಯುವಂತೆ ಮಾಡಿ ಅಸಂಖ್ಯಾತ ಜನ ವೆಂಟಿಲೇಟರುಗಳಿಲ್ಲದೆ ಸಾಯುವಂತಾಯಿತು. ರಾಜ್ಯದ ರೋಗಿಗಳು ಆಕ್ಸಿಜನ್‌ಗಾಗಿ ಬೀದಿ ಬೀದಿಗಳಲ್ಲಿ ಪರಿತಪಿಸುತ್ತಿದ್ದಾಗ, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರವು ಕಿತ್ತುಕೊಂಡು ಬೇರೆ ಕಡೆ ಕೊಂಡು ಹೋದರು. ನಂತರ ರಾಜ್ಯದ ಗೌರವಾನ್ವಿತ ಉಚ್ಛನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಛೀಮಾರಿ ಹಾಕಿದ ಮೇಲೆ 12 ನೂರು ಟನ್ ಆಕ್ಸಿಜನ್ ಅನ್ನು ರಾಜ್ಯಕ್ಕೆ ನೀಡಲಾಯಿತು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಬೆಂಗಳೂರು ನಿರ್ಲಕ್ಷ್ಯ : ಬೆಂಗಳೂರಿನ ಅಭಿವೃದ್ಧಿಗೆಂದು ತೆರಿಗೆ ವಸೂಲಿ, ತೆರಿಗೆ ಏರಿಕೆ ಪ್ರಕ್ರಿಯೆಗಳು ನಡೆಯುತ್ತಲೆ ಇವೆ. ಮೆಟ್ರೋ ಹೆಸರಲ್ಲಿ ಸಾವಿರಾರು ಮರಗಳನ್ನು ಕಡಿದುರುಳಿಸಲಾಗುತ್ತಿದೆ. ತುರಹಳ್ಳಿ ಅರಣ್ಯಕ್ಕೂ ಗರಗಸ ಹಾಕಿದ್ದಾರೆ. ಆದರೂ ನಮ್ಮ ಸರ್ಕಾರದ ಅವಧಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಅನೇಕರು ಮೌನವಾಗಿದ್ದಾರೆ. ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿತು. ಇದಕ್ಕೆ ರಾಜ್ಯದ ಬಿಜೆಪಿ ಶೂರರೆಲ್ಲ ಸಂಭ್ರಮಿಸಿದ್ದು ಬಿಟ್ಟರೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಟ್ಟಿದ್ದನ್ನೂ ಕಾಣೆವು. ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಬೇಕಾದ ಭೂಮಿಯ ಸ್ವಾಧೀನ ಕೆಲಸಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ. ಒಟ್ಟಾರೆ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರಗಳು ರಾಹು-ಕೇತುಗಳಂತೆ ರಾಜ್ಯವನ್ನು ಬಾಧಿಸುತ್ತಿವೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರು ಅಭಿವೃದ್ಧಿ ಕುರಿತು ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *