ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ ನಾಥ್ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಹಿರಿಯ ನಾಯಕರಾದ ಅಶೋಕ್ ಗೆಹಲೋತ್ ಹಾಗೂ ಶಶಿ ತರೂರ್ ಕಾಂಗ್ರಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಇದರೊಂದಿಗೆ ಸುರೇಶ್ ಪಚೌರಿ, ಮುಕುಲ್ ವಾಸ್ನಿಕ್ ಹಾಗೂ ಪವನ್ ಬನ್ಸಾಲ್ ಹೆಸರುಗಳು ಸಹ ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಂದು(ಸೆಪ್ಟಂಬರ್ 22) ಅಧಿಸೂಚನೆ ಹೊರಡಿಸಲಾಗಿದುದ, ಸೆಪ್ಟೆಂಬರ್ 24ರಿಂದ 30ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಮತ್ತು ಅಕ್ಟೋಬರ್ 8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಅಂತಿಮವಾಗಿ, ಅದೇ ದಿನದಂದು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಬಳಿಕ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಹೊರಬೀಳಲಿದೆ.
ಮನೀಶ್ ತಿವಾರಿ ಹಾಗೂ ಕಮಲ ನಾಥ್ ಸ್ಪರ್ಧೆಯಿಂದಾಗಿ ಚುನಾವಣೆ ಪ್ರಕ್ರಿಯೆಗಳು ಬಿರುಸಿಕೊಳ್ಳುವ ಸಾಧ್ಯತೆಗಳಿವೆ. ಚುನಾವಣೆ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ. ಇದರಿಂದ ಕಠಿಣ ಸ್ಪರ್ಧೆ ಏರ್ಪಡುವ ನಿರೀಕ್ಷೆಗಳಿವೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆಗೆ ಪ್ರದೇಶ ಕಾಂಗ್ರೆಸ್ ಸಮಿತಿಯ 10 ಪ್ರತಿನಿಧಿಗಳ ಬೆಂಬಲದ ಅಗತ್ಯವಿದೆ.