ಬೆಂಗಳೂರು : ಬರೋಬ್ಬರಿ 22 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾಗಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.
ಕರ್ನಾಟಕ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮತ್ತೊಬ್ಬ ಸಂಸದ ಶಶಿ ತರೂರು ವಿರುದ್ದ ನೇರ ಹಣಾಹಣಿ ಏರ್ಪಟ್ಟಿದೆ.
ದೇಶಾದ್ಯಂತ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಕರ್ನಾಟಕದವರೇ ಆದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಧಾರದ ಬಳಿಕ ಚುನಾವಣೆ ಸ್ವರೂಪವೇ ಬದಲಾಗಿದೆ.
ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
22 ವರ್ಷಗಳ ನಂತರ ಚುನಾವಣೆ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ 2000ರಲ್ಲಿ ಸ್ಪರ್ಧೆ ನಡೆದಿತ್ತು. ಅದಾದ ನಂತರ ಅವಿರೋಧ ಆಯ್ಕೆಗಳೇ ನಡೆದುಕೊಂಡು ಬಂದಿವೆ. 2000ರಲ್ಲಿ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶದ ಹಿರಿಯ ನಾಯಕ ಜಿತೇಂದ್ರ ಪ್ರಸಾದ್ ಸ್ಪರ್ಧಿಸಿದ್ದರು. ಅರ್ಹ 7,542 ಮತಗಳ ಪೈಕಿ ಜಿತೇಂದ್ರ ಪ್ರಸಾದ್ ಕೇವಲ 94 ಮತ ಪಡೆದರೆ ಸೋನಿಯಾ ಗಾಂಧಿ 7,448 ಮತ (ಶೇ.98.75ರಷ್ಟು) ಪಡೆದು ಗೆಲ್ಲುವ ಮೂಲಕ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವಿರೋಧವಾಗಿಯೇ ಅಧ್ಯಕ್ಷರಾಗುತ್ತಿದ್ದರು. ಆದ್ರೆ, ಇದೀಗ ಪಕ್ಷದಲ್ಲಿ ಸ್ಫೋಟಗೊಂಡಿರುವ ಅಸಮಾಧಾನದಿಂದ ಈಗ 22 ವರ್ಷ ಬಳಿಕ ಮತ್ತೆ ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾಗಿದೆ.
ಹೇಗಿರುತ್ತೆ ಚುನಾವಣೆ ಪ್ರಕ್ರಿಯೆ?
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಗಮನಿಸುತ್ತಾ ಸಾಗಿದರೆ, ಕಾಂಗ್ರೆಸ್ ಸಂವಿಧಾನದ 18ನೇ ವಿಧಿ ಮೂಲಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದ ವಿವಿಧ ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕುತ್ತಾರೆ. ಅದರ ಜೊತೆಗೆ ಎಐಸಿಸಿ ಸದಸ್ಯರು, ವರ್ಷಕ್ಕೂ ಹೆಚ್ಚು ಕಾಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪಕ್ಷದ ಸದಸ್ಯರಾಗಿ ಮುಂದುವರಿದವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಸುಮಾರು 9,100 ಮತದಾನದ ಹಕ್ಕು ಹೊಂದಿದ್ದು, ಇವರೆಲ್ಲಾ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಕಾಂಗ್ರೆಸ್ ಸಮಿತಿಗಳನ್ನು ಹೊಂದಿರುವ 28 ರಾಜ್ಯಗಳು ಮತ್ತು ಒಂಬತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಪ್ರತಿನಿಧಿಗಳಿಗೆ QR ಕೋಡ್ ಆಧಾರಿತ ಗುರುತಿನ ಕಾರ್ಡ್‌ಗಳನ್ನು ಸಹ ನೀಡಲಾಗಿದ್ದು, ಮತದಾನದ ಹಕ್ಕು ಹೊಂದಿರುವವರು ಬ್ಯಾಲೆಟ್ ಪೇಪರ್ನಲ್ಲಿ ಮತದಾನ ಚಲಾವಣೆ ಮಾಡಬೇಕು. ಒಂದು ಮತಕ್ಕೆ ಒಂದೇ ಮೌಲ್ಯ ಇದ್ದು, ಅತಿಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಯು ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಎಲ್ಲೆಲ್ಲಿ ನಡೆಯುತ್ತೆ ಚುನಾವಣೆ?
ಪ್ರತಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ಕಚೇರಿಯಲ್ಲಿ ಚುನಾವಣೆ ನಡೆಯಲಿದ್ದು, 200 ಮತಗಳಿಗೆ ಒಂದು ಮತಗಟ್ಟೆಯಂತೆ ಒಟ್ಟು 67 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗುಪ್ತ ಮತದಾನ ನಡೆಯಲಿದ್ದು, ಬಳಿಕ ಕೇಂದ್ರಗಳಿಂದ ಮತಪೆಟ್ಟಿಗೆಗಳನ್ನು ದೆಹಲಿಯ ಸ್ಟ್ರಾಂಗ್ ರೂಂಗೆ ರವಾನೆ ಮಾಡಲಾಗುತ್ತದೆ. ಅ.19ರಂದು ಮತ ಎಣಿಕೆಯೂ ದೆಹಲಿಯ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ನಡೆಯುತ್ತದೆ.
ರಾಜ್ಯದಲ್ಲಿ ಎರಡು ಕಡೆ ಮತದಾನ: ಕರ್ನಾಟಕದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 494 ಮಂದಿ ಪ್ರತಿನಿಧಿಗಳು ಹಕ್ಕು ಚಲಾಯಿಸಲಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, 479 ಪ್ರದೇಶ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು, 15 ಮಂದಿ ಶಾಸಕಾಂಗ ಪಕ್ಷದ ಸದಸ್ಯರು ಮತದಾನ ಮಾಡಲಿದ್ದಾರೆ.
ರಾಜ್ಯಕ್ಕೆ ಕೆಪಿಸಿಸಿ ಕಚೇರಿ ಮಾತ್ರವೆ ಏಕೈಕ ಮತಗಟ್ಟೆಯಾಗಿರಲಿದೆ. ಇಲ್ಲಿಗೆ ಆಗಮಿಸಿ ಶಾಸಕಾಂಗ ಪಕ್ಷದ(ಸಿಎಲ್‍ಪಿ) ಸದಸ್ಯರುಹಾಗೂಪಿಸಿಸಿಪ್ರತಿನಿಧಿಗಳು ಮತ ಚಲಾಯಿಸಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆಯಿಂದ ಮತದಾರರು ಬೆಂಗಳೂರಿಗೆ ಆಗಮಿಸಿ ಮತ ಚಲಾವಣೆ ಮಾಡಬೇಕೆಂದು ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ.
ಸಂಗನಕಲ್ಲು ಕ್ಯಾಂಪ್‍ನಲ್ಲಿ ರಾಹುಲ್ ಮತ: ಎಐಸಿಸಿ ನಾಯಕ ರಾಹುಲ್ ಗಾಂಧಿ’ಭಾರತ್ ಜೋಡೊ ಯಾತ್ರೆ’ ಕೈಗೊಂಡಿದ್ದು, ಮತದಾನ ಹಿನ್ನೆಲೆ ಯಾತ್ರೆ ಮೊಟಕುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ರಾಹುಲ್ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ 40 ಮಂದಿ ಸದಸ್ಯರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ.
ಬಳ್ಳಾರಿಯ ಸಂಗನಕಲ್ಲು ಕ್ಯಾಂಪ್‍ನಲ್ಲಿ ಸ್ಥಾಪಿಸಿರುವ ವಿಶೇಷ ಮತಗಟ್ಟೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರರು ಮತ ಚಲಾವಣೆ ಮಾಡಲಿದ್ದಾರೆ.
ತುಂಬಾ ಧನ್ಯವಾದಗಳು
ಧನ್ಯವಾದಗಳು