ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಆರೋಪ ಪ್ರತ್ಯಾರೋಪಗಳು ತಾರಕ್ಕೇರಿರುವ ಈ ವೇಳೆ ಬಿಜೆಪಿ ನಾಯಕ ಎನ್.ಆರ್. ರಮೇಶ್ ಹಗರಣಗಳಿಗೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದು, ದೂರು ಸಲ್ಲಿಸಿದ 10ರಲ್ಲಿ 7 ಸಿದ್ದರಾಮಯ್ಯ ವಿರುದ್ಧ ದಾಖಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್, 10 ಬೃಹತ್ ಹಗರಣಗಳ ಬಗ್ಗೆ ದೂರು ದಾಖಲಿಸಿದ್ದಾರೆ. ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂ ಕಬಳಿಕೆ ಪ್ರಕರಣಗಳು ಸಹ ಒಳಗೊಂಡಿವೆ.
ಇದನ್ನು ಓದಿ: ಭೂ ದುರ್ಬಳಕೆ ಆರೋಪ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಾಯುಕ್ತಕ್ಕೆ ದೂರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ. ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.
ಮಾಜಿ ಸಚಿವರುಗಳು ಹಾಗೂ ಕಾಂಗ್ರೆಸ್ ನಾಯಕರಾದ ಯು. ಟಿ. ಖಾದರ್, ಎಂ. ಬಿ. ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಎನ್. ಎ. ಹ್ಯಾರೀಸ್ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ, 09 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 05 ಮಂದಿ ಕೆಎಎಸ್ ಅಧಿಕಾರಿಗಳು ಸೇರಿದಂತೆ 21 ಮಂದಿ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ.
ಇದನ್ನು ಓದಿ: ಪತ್ರಕರ್ತರಿಗೆ ಲಂಚ; ಸಿಎಂ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಲೋಕಾಯುಕ್ತಕ್ಕೆ 3728 ಪುಟಗಳಷ್ಟು ದಾಖಲೆಗಳ ಸಹಿತ ದೂರುಗಳನ್ನು ಸಲ್ಲಿಸಲಾಗಿದೆ. 62 ಗಂಟೆ ಅವಧಿಯ ವಿಡಿಯೋ ತುಣುಕುಗಳು ಮತ್ತು 900ಕ್ಕೂ ಹೆಚ್ಚು ಛಾಯಾಚಿತ್ರಗಳನ್ನೊಳಗೊಂಡ ಎರಡು ಡಿವಿಡಿ ಸಲ್ಲಿಸಲಾಗಿದೆ.
ವಂಚನೆ, ಭ್ರಷ್ಟಾಚಾರ, ಭೂ ಕಬಳಿಕೆ ಆಧಾರದ ಮೇಲೆ ದೂರು ಸಲ್ಲಿಕೆಯಾಗಿದ್ದು, ಕೃಷಿ ಭಾಗ್ಯ ಯೋಜನೆ ಅಡಿ ಮಾಡಿರುವ ಭ್ರಷ್ಟಾಚಾರದಲ್ಲಿ ಹಣ ಕಬಳಿಸಿದ್ದಾರೆ. ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಗೆ ನೀಡಲಾದ ಸರ್ಕಾರಿ ಸ್ವತ್ತುಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್, ಕಸ ವಿಲೇವಾರಿಗೆ ಸಂಬಂಧಿಸಿದಂತೆ ದೂರು ಸಲ್ಲಿಕೆಯಾಗಿವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ