ನವದೆಹಲಿ: ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ಬೆಂಬಲಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಅಷ್ಟೆ ಅಲ್ಲದೆ ಪಕ್ಷದ ಈ ನಡೆಯನ್ನು ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾದ ಹೆಚ್ಚಿನ ಪಕ್ಷಗಳು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ. “ರಾಜಸ್ಥಾನ, ಕರ್ನಾಟಕ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಲ್ಲಿರುವ ನಮ್ಮ ಪಕ್ಷದ ಮುಖ್ಯಮಂತ್ರಿಗಳು ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ” ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂಡಿಯಾದ ಬಹುತೇಕ ಪಕ್ಷಗಳು ಜಾತಿ ಗಣತಿಯ ಕಲ್ಪನೆಯನ್ನು ಬೆಂಬಲಿಸುತ್ತವೆ; ಒಂದು ವೇಳೆ ಯಾರಾದರೂ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದರೆ, ನಾವು ಅವರಿಗೆ ಹೊಂದಿಕೊಳ್ಳುತ್ತೇವೆ, ಯಾಕೆಂದರೆ ನಾವು ಫ್ಯಾಸಿಸ್ಟ್ ಅಲ್ಲ. ತಮ್ಮ ಪಕ್ಷವೂ ಆಡಳಿತ ನಡೆಸುತ್ತಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಬೆಂಬಲದೊಂದಿಗೆ ಆ ರಾಜ್ಯಗಳಲ್ಲಿ ಜಾತಿ ಸಮೀಕ್ಷೆ ನಡೆಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಚೀನಾದಿಂದ ಒಂದು ಪೈಸೆಯೂ ಪಡೆದಿಲ್ಲ’ ಎಂದ ನ್ಯೂಸ್ ಕ್ಲಿಕ್ ಸಂಸ್ಥಾಪಕ | ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಪರಿಶಿಷ್ಟ ಜಾತಿಗಳು (ಎಸ್‌ಸಿಗಳು), ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಮತ್ತು ಒಬಿಸಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳನ್ನು ಪೂರೈಸಲು ರಾಷ್ಟ್ರವ್ಯಾಪಿ ಜಾತಿ ಗಣತಿ ಮುಖ್ಯವಾಗಿದೆ. ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸರಿಯಾದ ಸಾಮಾಜಿಕ-ಆರ್ಥಿಕ ದತ್ತಾಂಶಗಳಿಲ್ಲದೆ ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಕಷ್ಟ” ಎಂದು ಪ್ರತಿಪಾದಿಸಿದ್ದಾರೆ.
“ಬಡ ಜನರ ವಿಮೋಚನೆಗಾಗಿ ಇದು ಅತ್ಯಂತ ಪ್ರಗತಿಪರ ಮತ್ತು ಶಕ್ತಿಯುತ ಹೆಜ್ಜೆಯಾಗಿದೆ. ಭಾರತದಾದ್ಯಂತ ಜಾತಿ ಗಣತಿ ಅತ್ಯಗತ್ಯವಾಗಿದ್ದು, ಇದು ದೇಶದ ಅಭಿವೃದ್ಧಿಯಲ್ಲಿ ಹೊಸ ಮಾದರಿಯನ್ನು ರೂಪಿಸಲು ಸಹಾಯ ಮಾಡುವ ಜನರ ‘ಎಕ್ಸ್-ರೇ’ಯನ್ನು ನೀಡುತ್ತದೆ. ಇಂದು, ಎರಡು ಭಾರತಗಳನ್ನು ರಚಿಸಲಾಗುತ್ತಿದೆ – ಒಂದು ಅದಾನಿಗಳಿಗೆ ಮತ್ತು ಇನ್ನೊಂದು ಎಲ್ಲರಿಗೂ. ಜಾತಿ ಗಣತಿಯು ಭಾರತದಲ್ಲಿ ಯಾವ ರೀತಿಯ ಜನರಿದ್ದಾರೆ ಮತ್ತು ಅವರ ಸಂಖ್ಯೆ ಎಷ್ಟಿದೆ ಎಂಬುವುದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಭಾರತದ ದಲಿತರು, ಒಬಿಸಿಗಳು ಮತ್ತು ಬಡವರ ಪರಿಸ್ಥಿತಿಯನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಆರ್ಥಿಕ ಸಮೀಕ್ಷೆಗಳನ್ನು ಕೈಗೊಳ್ಳಲು ರಾಹುಲ್ ಗಾಂಧಿ ಸಲಹೆ ನೀಡಿದ್ದು, “ಇದು ಕೇವಲ ಜಾತಿ ಅಥವಾ ಧರ್ಮದ ವಿಷಯವಲ್ಲ, ಇದು ಬಡತನದ ವಿಷಯವಾಗಿದೆ” ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ