ಮಮತಾ ಬ್ಯಾನರ್ಜಿ ಮೋದಿಯ ಸೇವೆಯಲ್ಲಿ ನಿರತರಾಗಿದ್ದಾರೆ ಎಂದ ಕಾಂಗ್ರೆಸ್ | ಇಂಡಿಯಾ ಒಕ್ಕೂಟದಲ್ಲಿ ಬಿರುಕು?

ನವದೆಹಲಿ: ಸೀಟು ಹಂಚಿಕೆ ವಿಚಾರವಾಗಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಬಯಸುತ್ತಿಲ್ಲ ಎಂದು ಅಧೀರ್ ರಂಜನ್ ಅವರು ಹೇಳಿದ್ದು, ಕಾಂಗ್ರೆಸ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ನೀಡುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹೇಳಿದ್ದಾಗಿ ವರದಿಯಾಗಿದ್ದು, ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಧೀರ್ ರಂಜನ್ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: ಮುಸ್ಲಿಮರ ಹೆಸರು ಬಳಸಿ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ | ಇಬ್ಬರು ಯುವಕರ ಬಂಧನ

ಸುದ್ದಿಗಾರರ ಜೊತೆಗೆ ಮಾತನಾಡಿದ ಅಧೀರ್ ರಂಜನ್ ಅವರು, “ನಾವು ಭಿಕ್ಷೆ ಕೇಳಿಲ್ಲ. ಸ್ವತಃ ಮಮತಾ ಬ್ಯಾನರ್ಜಿ ಅವರು ಮೈತ್ರಿ ಬೇಕು ಎಂದು ಹೇಳಿದ್ದಾರೆ. ನಮಗೆ ಮಮತಾ ಬ್ಯಾನರ್ಜಿಯ ಕರುಣೆ ಅಗತ್ಯವಿಲ್ಲ. ನಾವು ಸ್ವಂತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಯವರ ಸೇವೆಯಲ್ಲಿ ನಿರತರಾಗಿರುವ ಕಾರಣ ಮೈತ್ರಿಯನ್ನು ಬಯಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಬಲ ಪಕ್ಷಕ್ಕೆ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಟಿಎಂಸಿ ಪ್ರತಿಪಾದಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಈ ಸೀಟು ಹಂಚಿಕೆ ಸಂಖ್ಯೆಯು ಮುಂಬರುವ ಸಂಸತ್ತಿನ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳ ನೋಟವನ್ನು ಒಳಗೊಂಡಿರುವ ಸ್ಪಷ್ಟ ಸೂತ್ರವನ್ನು ಆಧರಿಸಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಬಂಧನದ ಊಹಾಪೋಹ | ಕೇಜ್ರಿವಾಲ್ ನಿವಾಸದ ಹೊರಗೆ ಪೊಲೀಸ್ ಭದ್ರತೆ ಹೆಚ್ಚಳ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಒಕ್ಕೂಟದ ಸಂಚಾಲಕರಾಗಿ ಆಗಿ ಆಯ್ಕೆ ಆಗಬೇಕು ಎಂಬುವುದನ್ನು ಟಿಎಂಸಿ ಪುನರುಚ್ಚರಿಸಿದೆ. ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್ ವಿರುದ್ಧ ಪಕ್ಷಕ್ಕೆ ಯಾವ ವಿರೋಧವಿಲ್ಲದಿದ್ದರೂ, ಖರ್ಗೆ ಅವರು ವಿರೋಧ ಪಕ್ಷದ ಮೈತ್ರಿಕೂಟದ ಸಂಚಾಲಕರಾಗಿ ಆಯ್ಕೆಯಾದರೆ ಉತ್ತಮ ಪರಿಣಾಮ ಬೀರುತ್ತಾರೆ. ದಲಿತ ಸಮುದಾಯದಿಂದ ಬಂದಿರುವ ಖರ್ಗೆ ಅವರು 58 ಸ್ಥಾನಗಳಲ್ಲಿ ಪ್ರಭಾವ ಬೀರಲು ಉತ್ತಮ ಆಯ್ಕೆ ಎಂದು ಟಿಎಂಸಿ ನಂಬಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ, 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆಯನ್ನು ಶೀಘ್ರವಾಗಿ ಅಂತಿಮಗೊಳಿಸಬೇಕು ಎಂದು ನಿರ್ಧರಿಸಲಾಗಿದೆ. 2023ರ ಡಿಸೆಂಬರ್ 31ರೊಳಗೆ ಸೀಟು ಹಂಚಿಕೆಯ ವಿವರಗಳನ್ನು ಅಂತಿಮಗೊಳಿಸುವಂತೆ ಟಿಎಂಸಿ ಕೋರಿತ್ತು. ಆದರೆ ಈ ಗಡುವು ಮುಗಿದಿದ್ದು, ಒಕ್ಕೂಟವು ಸೀಟು ಹಂಚಿಕೆಯ ಕುರಿತು ಇನ್ನೂ ಒಮ್ಮತಕ್ಕೆ ಬಂದಿಲ್ಲ.

ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *