“ವಿಷವಟ್ಟಿ ಸುಡುವಲ್ಲಿ” – ಶಿಕ್ಷಣದಲ್ಲಿನ ವಿಷಪಾಷಾಣದ ನಿಜದರ್ಶನ

-ಎಚ್.ಆರ್. ನವೀನ್ ಕುಮಾರ್
ಇತಿಹಾಸವನ್ನು ತಿರುಚುವ, ಸಂವಿಧಾನವನ್ನು ಬದಲಾಯಿಸುವ, ರಾಷ್ಟೀಯತೆ ಮತ್ತು ಸಂಸ್ಕೃತಿಗಳ ಕುರಿತು ಹೊಸ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ಪ್ರಸ್ತುತ ಚರ್ಚೆಯ ವಿಷಯ. ಇವೆಲ್ಲವುಗಳ ಮೂಲ ಪ್ರರಂಭವಾಗಿದ್ದು ಎಲ್ಲಿಂದ, ಇದರ ಹಿಂದಿರುವ ಸಿದ್ಧಾಂತ ಯಾವುದು, ಆ ಸಿದ್ಧಾಂತವನ್ನು ಜಾರಿಮಾಡಲು ಕೆಲಸ ಮಾಡುತ್ತಿರುವ ಸಂಘಟನೆಗಳು ಯಾವುವು, ಈ ಸಿದ್ಧಾಂತವನ್ನು ಪ್ರತಿಪಾದಿಸುವವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತ ಯಂತ್ರಾಂಗವನ್ನು ಬಳಸಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಹೇಗೆ ಇಡೀ ವಾತಾವರಣವನ್ನೇ ಕಲುಷಿತಗೊಳಿಸುತ್ತಾರೆ. ಮತ್ತು ಅದರ ಮೂಲಕ ನಾವೆಲ್ಲರೂ ಒಪ್ಪಿ ಜೀವಿಸುತ್ತಿರುವ ಜಾತ್ಯಾತೀತ, ಧರ್ಮನಿರಪೇಕ್ಷ ತತ್ವಗಳಿಗೆ ಹೇಗೆ ತಿಲಾಂಜಲಿ ಇಡುತ್ತಾರೆ, ಎಂಬ ಅಂಶಗಳನ್ನು ಎಳೆ ಎಳೆಯಾಗಿ ಸಾಕ್ಷಾಧಾರಗಳ ಸಮೇತ ಸಾಬೀತುಪಡಿಸುವ ಸಂಶೋಧನಾ ಕೃತಿಯಾಗಿ “ವಿಷವಟ್ಟಿ ಸುಡವಲ್ಲಿ” ಪಠ್ಯಪುಸ್ತಕ ಮತೀಯವಾದೀಕರಣ ಮತ್ತು ಇತಿಹಾಸ ತಿರುಚುವಿಕೆ ಪುಸ್ತಕವನ್ನು ನೀಡಿದ ಬಿ.ಶ್ರೀಪಾದ ಭಟ್ ರವರನ್ನು ಮೊದಲಿಗೆ ಅಭಿನಂದಿಸುತ್ತೇನೆ. ಶಿಕ್ಷಣ

ಪ್ರಮುಖವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ತನ್ನ ಶಾಲಾ ಕಾಲೇಜುಗಳ ಮೂಲಕ ಎಂತಹ ವಿಷವನ್ನು ಮಕ್ಕಳಿಗೆ ಉಣಿಸುತ್ತಿದೆ ಎಂಬುದನ್ನು ಈ ಪುಸ್ತಕದಲ್ಲಿ ವಿವರವಾಗಿ ಹೇಳಲಾಗಿದೆ.

ದೇಶಾದ್ಯಂತ ಆರ್‌ಎಸ್‌ಎಸ್‌ನ ವಿದ್ಯಾಭಾರತಿಯ ಸುಮಾರು 12,828  ಔಪಚಾರಿಕ ಶಾಲೆಗಳು, 1.5 ಲಕ್ಷ ಶಿಕ್ಷಕರು,  34.6 ಲಕ್ಷ ವಿದ್ಯಾರ್ಥಿಗಳಿದ್ದಾರೆ. 6 ಪದವಿ ಸಂಸ್ಥೆಗಳಿವೆ, 4,975 ಏಕಲ ವಿದ್ಯಾಲಯ, 6,418 ಸಂಸ್ಕಾರ ಕೇಂದ್ರದಂತಹ ಅನೌಪಚಾರಿಕ ಶಾಲೆಗಳಿವೆ. ಇಲ್ಲಿ1,52,935 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಾತ್ರವಲ್ಲ ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸಿದ ಮತ್ತು ಪ್ರಸ್ತುತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ತಮ್ಮ ಅಧಿಕಾರವಧಿಯಲ್ಲಿ ಶೈಕ್ಷಣಿಕ ಪಠ್ಯಪುಸ್ತಕಗಳನ್ನು ರಚಿಸುವ ಎನ್‌ಸಿಆರ್‌ಟಿಯನ್ನೇ ಪುನರ್ ರಚಿಸಿ ತಮಗೆ ಬೇಕಾದವನ್ನು ನೇಮಕಮಾಡಿ, ಇಡೀ ಪಠ್ಯಪುಸ್ತಕಗಳನ್ನು ಸಂಪೂರ್ಣವಾಗಿ ತಮ್ಮ ಹಿಂದುತ್ವದ ಸಿದ್ಧಾಂತಕ್ಕೆ ಪೂರಕವಾಗಿ, ದೇಶದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ, ದೇಶದ ತಳಸಮುದಾಯಗಳ ಸಂಸ್ಕೃತಿಗಳಿಗೆ ಪರ್ಯಾಯವಾಗಿ ಹೊಸ ರೀತಿಯ ಪರಿಭಾಷೆಯೊಂದನ್ನು ಕಟ್ಟಲು ಪ್ರಯತ್ನಿಸುವುದರಲ್ಲಿ ಸಂಘಪರಿವಾರ ಹೇಗೆ ಯಶಸ್ವಿಯನ್ನು ಪಡೆದಿದೆ. ಎಂಬುದರ ಕುರಿತು ಹಲವು ವಿಧ್ವಾಂಸರ ವಿಶ್ಲೇಷಣೆಗಳನ್ನು ಪ್ರಸ್ತಾಪಿಸುವ ಮೂಲಕ ಸರಳವಾಗಿ ಅರ್ಥ ಮಾಡಿಸಲು ಪ್ರಯತ್ನಿಸಲಾಗಿದೆ.

ವಾಜಪೇಯಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಮುರಳಿ ಮನೋಹರ ಜೋಷಿಯವರ ಮೂಲಕ ವಿಶ್ವವಿದ್ಯಾಲಯಗಳಲ್ಲೂ ಹಸ್ತಸಾಮುದ್ತಿಕಾ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಭಗವದ್ಗೀತೆಗಳನ್ನು ಭೋಧನೆ ಮಾಡುವ ಕೆಲಸ ಆರಂಭವಾಗಿತ್ತು. ಆದರೆ 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸಂಘಪರಿವಾರದ ಸಂಪೂರ್ಣ ಹಿಡಿತವಿರುವ ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಬದಲಾವಣೆಗಳು, ಪಠ್ಯಗಳ ಪುನರಚನೆ ಐಕ್ಯ ಭಾರತಕ್ಕೆ ಅತ್ಯಂತ ಹೆಚ್ಚು ಅಪಾಯವನ್ನು ತಂದೊಡ್ಡಿದೆ. ಇದನ್ನು ಈ ಕೃತಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಇಷ್ಟು ಮಾತ್ರವಲ್ಲದೆ ಕಾಂಗ್ರೇಸ್ ಹೇಗೆ ಹಂತ ಹಂತವಾಗಿ ತನ್ನ ಆಲೋಚನೆ ಮತ್ತು ನೀತಿಗಳಲ್ಲಿ ಮೃದು ಹಿಂದುತ್ವ ದೋರಣೆಯನ್ನು ಅನುಸರಿಸಿದೆ, ಅದು ಕೂಡ ಇಂದಿನ ಪ್ರಸ್ತುತ ಸ್ಥಿತಿಗೆ ಹೇಗೆ ಕೊಡುಗೆ ನೀಡಿದೆ ಎಂಬುದನ್ನು ವಿವರಿಸಲಾಗಿದೆ. ಶಿಕ್ಷಣ

ಇದನ್ನು ಓದಿ : ಬಂಧನದ ಊಹಾಪೋಹ | ಕೇಜ್ರಿವಾಲ್ ನಿವಾಸದ ಹೊರಗೆ ಪೊಲೀಸ್ ಭದ್ರತೆ ಹೆಚ್ಚಳ

ಪಠ್ಯಪುಸ್ತಕಗಳ ಪುನರಚನೆಯಲ್ಲಿನ ಕೋಮುವಾದಿ ಅಂಶಗಳನ್ನು ಬಯಲಿಗೆಳೆಯುವ ಮೂಲಕ ಆರಂಭವಾಗುವ ಈ ಕೃತಿ ಅಲ್ಲಿಯೇ ನಿಲ್ಲದೆ ಸಮಾಜದ ಒಟ್ಟಾರೆ ಸೆಕ್ಯುಲರಿಸಂ ಪರಿಕಲ್ಪನೆಯನ್ನು ಹೊಡೆಯಲು ಹಿಂದುತ್ವ ಶಕ್ತಿಗಳು ಏನೆನೆಲ್ಲಾ ಪರಿಭಾಷೆಗಳನ್ನು ಬಳಸಿ ಹೊಸ ಇತಿಹಾಸವನ್ನು ಕಟ್ಟಲು ಹೊರಟಿದ್ದಾರೆ ಮತ್ತು ಅದರಿಂದಾಗುವ ಸಾಮಾಜಿಕ ಪರಿಣಾಮ ಹಾಗೂ ಬದಲಾವಣೆಗಳನ್ನು ಇಲ್ಲಿ ಗುರುತಿಸಲಾಗಿದೆ. ಪುಸ್ತಕದ ಕೊನೆಯ ಭಾಗದ ಅಧ್ಯಾಯಗಳು ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ನಮ್ಮ ಮುಂದಿರುವ ದಾರಿಗಳು ಯಾವುವು ಎಂಬ ಕುರಿತು ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತದೆ. ಕೇವಲ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ವಿಶ್ಲೇಷಿಸಿ ವಿಮರ್ಶಿಸುವುದು ಮಾತ್ರವಲ್ಲದೆ, ಅವುಗಳಿಗೆ ಪರಿಹಾರವನ್ನು ಸೂಚಿಸುವ ಮಹತ್ತರ ಕೃತಿ ಇದಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಗಳ ಕುರಿತು ಆಸಕ್ತಿ ಇರುವವರೆಲ್ಲಾ ಈ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಮಾತ್ರವಲ್ಲ, ಈ ಸಮಾಜದ ಬಗ್ಗೆ ನೈಜ ಕಳಕಳಿ ಇರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಿ ನಾವು ಎಂತಹ ವಿಷ ವರ್ತೃಲದಲ್ಲಿ ಸಿಲುಕಿಕೊಂಡಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವಿಷವಟ್ಟಿ ಸುಡುವಲ್ಲಿ

ಪುಸ್ತಕಕ್ಕೆ ಮುನ್ನುಡಿ ಬರೆದಿರುವ ನಾಡಿನ ಹಿರಿಯ ಚಿಂತಕರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ರವರ ಮಾತುಗಳು ಪ್ರಸ್ತುತವೆನಿಸುತ್ತವೆ. “ಶಿಕ್ಷಣ  ತಜ್ಞರು ಕೇವಲ ಅಕಾಡೆಮಿಕ್ ಶಿಸ್ತಿನಲ್ಲಿ ಶಿಕ್ಷಣದ ಬಗ್ಗೆ ಮಾತನಾಡಿದರೆ ಸಾಲದು, ಅದು ಬಹುಮುಖೀ ಸಮಾಜಗಳನ್ನು ಒಳಗೊಂಡ ಭಾರತದ ಅನಕ್ಷರತೆ ಮತ್ತು ಹಸಿವುಗಳ ಪರಿಜ್ಞಾನದಲ್ಲಿ ಶಿಕ್ಷಣದ ಅನುಷ್ಠಾನದ ಬಗ್ಗೆ ಯೋಚಿಸಬೇಕು ಎಂಬ ಹೊಣೆಗಾರಿಕೆಯಲ್ಲಿ ಶ್ರೀಪಾದರವರು ಬರಹಕ್ಕೆ ತೊಡಗಿದ್ದಾರೆ. ಆದ್ದರಿಂದಲೇ ಇದು ಕೇವಲ ಶೈಕ್ಷಣಿಕ ಅಧ್ಯಯನ ಮಾತ್ರವಾಗದೆ ನಮ್ಮ ಸಾಮಾಜಿಕ ಬದುಕಿನ ಕಟ್ಟಕಡೆಯ ಮನುಷ್ಯನನ್ನು ಕೇಂದ್ರ ಕಕ್ಷೆಗೆ ತಂದುಕೊಂಡು ನೀತಿ ನಿರೂಪಣೆಗಳ ಪ್ರಸ್ತುತತೆಯನ್ನು ಅಗತ್ಯತೆ ಅನಿವಾರ್ಯತೆಗಳ ಕಳಕಳಿಯಲ್ಲಿ ವಿಶ್ಲೇಷಣೆ ನಡೆಸಿದ್ದಾಗಿದೆ. ಹೀಗಾಗಿ ಇಡೀ ಪುಸ್ತಕ ಮಾಹಿತಿಗಳ ವರದಿ ನಿರೂಪಣೆಯಾಗಿಲ್ಲ; ಯಾವುದೇ ಆಡಳಿತಗಾರರಿಗೆ, ಆಳುವ ಪಕ್ಷಗಳಿಗೆ ಒಂದು ಮಾರ್ಗದರ್ಶಿ ಕೈಪಿಡಿಯಂತಿದೆ”. ಶಿಕ್ಷಣ

“ವಿಷವಟ್ಟಿ ಸುಡುವಲ್ಲಿ” ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಪುಸ್ತಕ 160 ಪುಟಗಳು, ಬೆಲೆ 180 ರೂ.

 

ಈ ವಿಡಿಯೋ ನೋಡಿವಿಷವಟ್ಟಿ ಸುಡುವಲ್ಲಿ ಪುಸ್ತಕ ಬಿಡುಗಡೆ ಸಮಾರಂಭ @ ಸರ್ಕಾರಿ ಕಲಾ ಕಾಲೇಜು, ಬೆಂಗಳೂರು

 

 

Donate Janashakthi Media

Leave a Reply

Your email address will not be published. Required fields are marked *