ಜೈಪುರ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪ್ರಬಲ ಆಕಾಂಕ್ಷಿಯಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ಇಂದು(ಸೆಪ್ಟಂಬರ್ 25) ಸಂಜೆ ಮಹತ್ವದ ಸಭೆ ಏರ್ಪಟ್ಟಿದೆ. ಗೆಹ್ಲೋಟ್ ತಮ್ಮ ನಿವಾಸದಲ್ಲಿ ತನ್ನ ಶಾಸಕಾಂಗ ಪಕ್ಷದ ನಿರ್ಣಾಯಕ ಸಭೆಯನ್ನು ಕರೆದಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮುಂಚಿತವಾಗಿ ಇಂದು ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಮಾಡಿರುವ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಇರಲಿದ್ದಾರೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ರಾಜ್ಯದಲ್ಲಿ ಸಂಭವನೀಯ ನಾಯಕತ್ವ ಬದಲಾವಣೆಯ ವಿಷಯವನ್ನು ಪ್ರಮುಖವಾಗಿ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಶೋಕ್ ಗೆಹ್ಲೋಟ್ ಆಯ್ಕೆಯಾದರೆ ರಾಜಸ್ಥಾನ ಸರ್ಕಾರದ ಮುಂದಾಳತ್ವ ಯಾರಿಗೆ ಎಂಬುದು ಸಭೆಯ ಅಜೆಂಡಾವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ರಾಹುಲ್ ಗಾಂಧಿ ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಸ್ಥಾನ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯಾಗಲಿದೆಯೇ ಎಂದು ಕಾದು ನೋಡಬೇಕು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಭವಿಸಿದ್ದಲ್ಲಿ, ಸಚಿನ್ ಪೈಲಟ್ ರಾಜಸ್ಥಾನದ ಮುಖ್ಯಮಂತ್ರಿಯಾಗಲು ಮುಂಚೂಣಿಯಲ್ಲಿದ್ದಾರೆ.
ಸಚಿನ್ ಪೈಲಟ್ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಸ್ಪರ್ಧಿಯಾಗಿದ್ದು, ಅವರು ಶುಕ್ರವಾರ ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿ ಪಿ ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಮತ್ತೊಂದೆಡೆ, ಮುಖ್ಯಮಂತ್ರಿ ಸ್ಥಾನಕ್ಕೆ ಜೋಶಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ.
ನಾಯಕತ್ವ ಬದಲಾವಣೆಯ ಪ್ರಶ್ನೆ ಇಂದಿನ ಸಭೆಯಲ್ಲಿ ಬಗೆಹರಿದ್ದಲ್ಲಿ, ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಾರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಕಾಂಗ್ರೆಸ್‌ನ ಉನ್ನತ ಸ್ಥಾನಕ್ಕಾಗಿ ಅಶೋಕ್ ಗೆಹ್ಲೋಟ್ ಮತ್ತು ಶಶಿ ತರೂರ್ ನಡುವೆ ಚುನಾವಣಾ ಕಣ ಏರ್ಪಡಲಿದೆ ಎನ್ನಲಾಗಿದೆ. ಈಗಾಗಲೇ ಶಶಿ ತರೂರ್ ಅವರ ಪ್ರತಿನಿಧಿ ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಂಗ್ರಹಿಸಿದ್ದಾರೆ. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ನೂತನ ಕಾಂಗ್ರೆಸ್ ಮುಖ್ಯಸ್ಥರ ಘೋಷಣೆಯಾಗಲಿದೆ.