ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ vs ಜಗದೀಶ್ ಶೆಟ್ಟರ್ ಅಂತ ಪೈಪೋಟಿ ಏರ್ಪಟ್ಟಿದೆ. ಇನ್ನು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿಯ ಹಿರಿಯ ತಲೆಗಳು ಕೆಡಸಿಕೊಂಡಿದ್ದು, ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ ಈಗ ಬಿಜೆಪಿ ಪಕ್ಷದ ಕರಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪೋಟೋ ಇದ್ದು, ಅದನ್ನೇ ಹಂಚಲಾಗುತ್ತಿದೆಯಂತೆ. ಹೌದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಅವರ ಕರಪತ್ರದಲ್ಲಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ರಾರಾಜಿಸುತ್ತಿದ್ದು, ಜನರು ಶಾಕ್ ಆಗಿದ್ದಾರೆ.
ಹೌದು, ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿ ಕಿರಣ್ ಅವರ ಚುನಾವಣೆಯ ಪ್ರಚಾರದ ಕರ ಪತ್ರದಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಹಾಕಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಜಗದೀಶ್ ಶೆಟ್ಟರ್ ಇನ್ನೂ ಬಿಜೆಪಿ ತೊರೆದೆ ಇಲ್ಲವಾ ಎಂಬ ಗೊಂದಲದಲ್ಲಿ ಜನತೆಯಿದ್ದಾರೆ. ಇತ್ತ ಬಿಜೆಪಿಗರಿಗೂ ತಲೆನೋವು ಆಗಿ ಈ ಪ್ರಚಾರದ ಕರಪತ್ರ ಪರಿಣಮಿಸಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಕರಪತ್ರದಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಫೋಟೋ ಇದ್ದು, ಇವರ ಬಳಿಕ ಜಗದೀಶ್ ಶೆಟ್ಟರ್ ಫೋಟೋ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ರಕ್ತದ ಮಾತಿಗೆ ಪತ್ರವೊಂದು ಸೇರಿಕೊಳ್ತು : ಜಗದೀಶ್ ಶೆಟ್ಟರ್ ಗೆಲ್ತಾರೆಂದು ರಕ್ತದಲ್ಲೇ ಪತ್ರ ಬರೆದು ಬಿಎಸ್‌ವೈಗೆ ತಿರುಗೇಟು!
ಇತ್ತಿಚಿಗಷ್ಟೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬೇಸರದಿಂದಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಬಳಿಕ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ ತಕ್ಷಣ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಬದಲಾಗಿದೆ. ಬಿಜೆಪಿಯ ಭದ್ರಕೋಟೆಯಾದ ಸೆಂಟ್ರಲ್ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಇನ್ನಿಲ್ಲದೆ ರಣತಂತ್ರ ರೂಪಿಸಿದೆ. ಅದಕ್ಕಾಗಿ ನಾಗಪುರದಿಂದ ದೊಡ್ಡತಂಡ ಬಂದಿಳಿದಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಈ ಬಾರಿ ಹುಬ್ಬಳ್ಳಿ-ಧಾರವಾಡದ ರಾಜಕೀಯ ಭಾರೀ ಬದಲಾವಣೆ ಕಂಡಿದೆ. ಬಿಜೆಪಿಯ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರಿದ್ದಾರೆ. ಚುನಾವಣಾ ಫಲಿತಾಂಶ ಏನಾಗಬಹುದು ಎಂಬುದಕ್ಕೆ ಮೇ 13 ರ ವರೆಗೆ ಕಾಯಬೇಕಿದೆ.