ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭಾ
ಚನ್ನಪಟ್ಟಣ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್, ಸಂಡೂರು ಕ್ಷೇತ್ರದಿಂದ ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಹಾಗೂ ಶಿಗ್ಗಾವಿ ಕ್ಷೇತ್ರದಿಂದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಹೆಸರನ್ನು ಅಂತಿಮಗೊಳಿಸಿದೆ. ವಿಧಾನಸಭಾ
ಮೂರು ಕ್ಷೇತ್ರಗಳಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿ ಸೂಕ್ತ ಅಭ್ಯರ್ಥಿಗಳನ್ನು ಅಂತಿಮ ಮಾಡಿದೆ. ಮೂರು ಕ್ಷೇತ್ರಗಳ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ಗೆ ಕಳುಹಿಸಿದ್ದು, ಸಂಜೆಯೊಳಗೆ ಘೋಷಣೆಯಾಗಲಿದೆ ಎಂದು ಕಾಂಗ್ರೆಸ್ ಕಚೇರಿ ಮೂಲಗಳು ತಿಳಿಸಿವೆ. ವಿಧಾನಸಭಾ
ಇದನ್ನೂ ಓದಿ: ಭ್ರಷ್ಟ ರಾಜಕೀಯ ಹಾಗೂ ಅಧಿಕಾರಶಾಹಿಗೆ ಅಮಾಯಕ ಕಟ್ಟಡ ಕಾರ್ಮಿಕರು ಬಲಿ – ಕಾರ್ಮಿಕ ಸಂಘಟನೆಗಳ ಆರೋಪ
ಡಿ.ಕೆ. ಸಹೋದರರ ಅಚ್ಚರಿ ಅಭ್ಯರ್ಥಿ ಹೇಳಿಕೆಯಂತೆ ಬುಧವಾರ ಸಿ.ಪಿ. ಯೋಗೇಶ್ವರ್ ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಮೈತ್ರಿ ಪಕ್ಷಗಳು ಹಾಗೂ ಕಾಂಗ್ರೆಸ್ ನಡೆಸಿದ ಕ್ಷೇತ್ರ ಸಮೀಕ್ಷೆಯಲ್ಲಿ ಸಿ.ಪಿ. ಯೋಗೇಶ್ವರ್ ಗೆಲ್ಲುವ ಅಭ್ಯರ್ಥಿ ಎಂಬ ವರದಿ ಆಧರಿಸಿ ರನ್ನು ಪಕ್ಷದತ್ತ ಸೆಳೆಯುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಇನ್ನು ಮೈತ್ರಿ ಪಕ್ಷಗಳು ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ರನ್ನು ಸಿ.ಪಿ. ಯೋಗೇಶ್ವರ್ ವಿರುದ್ಧ ಕಣಕ್ಕಿಳಿಸಲಿವೆ. ಒಟ್ಟಾರೆ ಚನ್ನಪಟ್ಟಣ ಕ್ಷೇತ್ರದಲ್ಲಿ ೨೫ ವರ್ಷಗಳಿಂದ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಮಧ್ಯೆ ನೇರ ಹಣಾಹಣೆ ನಡೆಯಲಿದೆ. ಹಾಗಾಗಿ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕದನ ತೀವ್ರ ಕುತೂಹಲ ಕೆರಳಿಸಿದೆ.
ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಅವರ ಹೆಸರನ್ನು ಘೋಷಣೆ ಮಾಡಿದ್ದು, ಟಿಕೆಟ್ ಆಕಾಂಕ್ಷಿ ಶ್ರೀರಾಮುಲು ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ. ಇನ್ನು ನಿರೀಕ್ಷಿಸಿದಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ರನ್ನು ಕಣಕ್ಕಿಳಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಘೋಷಿಸಿದ್ದಾರೆ. ವಿಧಾನಸಭಾ
ಶಿಗ್ಗಾವಿ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ರನ್ನು ಕಣಕ್ಕಿಳಿಸಲಾಗುತ್ತಿದೆ. ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಳೆದು ತೂಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಪಂಚಮ ಸಾಲಿ ಹಾಗೂ ಸಾದರ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಭರತ್ ಬೊಮ್ಮಾಯಿ ಸಾದರ ಲಿಂಗಾಯತರಾದರೆ, ವೈಶಾಲಿ ಕುಲಕರ್ಣಿ ಪಂಚಮ ಸಾಲಿ ಸಮುದಾಯಕ್ಕೆ ಸೇರಿದವರು. ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿಯ ಮತಗಳೊಟ್ಟಿಗೆ ಪಂಚಮಸಾಲಿ ಮತಗಳನ್ನು ಸೆಳೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭವಾಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.
ಬಿಜೆಪಿಯಲ್ಲಿ ಬಂಡಾಯದ ಬಿಸಿ
ತಮ್ಮ ಪುತ್ರ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳುತ್ತಲೇ ಟಿಕೆಟ್ ಗಿಟ್ಟಿಸಿಕೊಂಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪಕ್ಷದ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಂಚಮಸಾಲಿ ಸಮುದಾಯದಿಂದ ಮುರುಗೇಶ್ ನಿರಾಣಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರು ಸ್ಥಳೀಯರಲ್ಲ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಸ್ಥಳೀಯ ನಾಯಕರಲ್ಲಿ ಸುಮಾರು 60 ಮಂದಿ ಆಕಾಂಕ್ಷಿಗಳಿದ್ದರೂ ಮಾಜಿ ಸಿಎಂ ಪುತ್ರನಿಗೆ ಟಿಕೆಟ್ ನೀಡಿರುವುದು ಸರಿಯಲ್ಲ ಎಂದು ಸ್ಥಳೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಶ್ರೀಕಾಂತ್ ದುಂಡಿಗೌಡರ ಪ್ರಬಲ ಆಕಾಂಕ್ಷಿಯಾಗಿದದ್ದರು. ಭರತ್ ಬೊಮ್ಮಾಯಿ ಗೆ ಯಾವುದೇ ರಾಜಕೀಯ ಅನುಭವವಿಲ್ಲ. ಮಾಜಿ ಸಿಎಂ ಅವರ ಕ್ಷೇತ್ರ ಎಂಬ ಒಂದೇ ಕಾರಣಕ್ಕೆ ತಮ್ಮ ಕುಟುಂಬದವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಮುಖಂಡ ರಾಘವೇಂದ್ರ ದೊಡ್ಡಮನಿ ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಕೋರಿ ಒಟ್ಟು 60 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಭರತ್ ಬೊಮ್ಮಾಯಿ ಗೆ ಟಿಕೆಟ್ ನೀಡುವ ಕುರಿತಂತೆ ಶೇ 40 ನಾಯಕರು ವಿರೋಧಿಸಿದ್ದರು. ಟಿಕೆಟ್ ಘೋಷಣೆಯಾದ ಬಳಿಕ ಬಿಜೆಪಿ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ಪ್ರತಿಭಟನೆ ಕೂಡ ನಡೆಸಿದ್ದರು.
ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ
ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ವಿರುದ್ಧ ಪ್ರತಿಭಟನೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳು ಸಹಜ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಯಾರೇ ನಿಂತರೂ ಕೂಡ ನಾವು ಚುನಾವಣೆಯನ್ನು ಅತ್ಯಂತ ಸ್ಪರ್ಧಾತ್ಮಕವಾಗಿ ಮಾಡುತ್ತೇವೆ. ಮತ್ತು ಸೌಹಾರ್ದಯುತವಾಗಿ ಚುನಾವಣೆ ಮಾಡುತ್ತೇವೆ. ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯ ದಿನ ಬಿಜೆಪಿ ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ನೋಡಿ: ಹುಟ್ಟುಹಬ್ಬದ ವಿಶೇಷ: ಸ್ವಾತಂತ್ರ್ಯ ಹೋರಾಟಗಾರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ನೆನಪು Janashakthi Media