ʼಗ್ಯಾರಂಟಿʼಯಲ್ಲಿ ನೂರು ದಿನ ! ಐದು ವರ್ಷ ಕಳೆದರೂ ಅಚ್ಚರಿಯಿಲ್ಲ!!

ಗುರುರಾಜ ದೇಸಾಯಿ

ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದು ಸರಕಾರಿ ಶಾಲೆಗಳನ್ನು ಮುಚ್ಚಲಿಕ್ಕಾಗಿಯೇ? ಗ್ಯಾರಂಟಿ

ಆಗಸ್ಟ್ 30ರ ದಿನ ಪತ್ರಿಕೆಯ ಮುಖಪುಟದ ತುಂಬ “ ಕರ್ನಾಟಕ ಮಾದರಿ ನೂರು ದಿನ” ಎಂಬ ಜಾಹೀರಾತನ್ನು ಎಲ್ಲರೂ ಗಮನಿಸಿದ್ದಿರಿ! ವಿಷಯ ಜಾಹೀರಾತಿನ ಕುರಿತಲ್ಲ, ಕಾಂಗ್ರೆಸ್‌ ಸರ್ಕಾರ ಬಂದು ನೂರು ದಿನ ಆಯ್ತು, ಗ್ಯಾರಂಟಿ ಹೊರತು ಪಡಿಸಿದರೆ ಬೇರೆನೂ ಸಾಧನೆಗಳು ಕಾಣುತ್ತಿಲ್ಲ, ಗ್ಯಾರಂಟಿ ಇಲ್ಲದಿದ್ದರೆ ಸರ್ಕಾರದ ಸಾಧನೆ ಶೂನ್ಯವಾಗಿರುತ್ತಿತ್ತು ಎಂಬ ಚರ್ಚೆಗಳು ಆರಂಭವಾಗಿವೆ. ಈಗಲೂ ಸದ್ದಿಲ್ಲದೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪರವಾಗಿ ಕೆಲಸಗಳು ನಡೆದಿದೆ.

ಹೌದು, ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದ  ಜನರಿಗೆ ಕಾಂಗ್ರೆಸ್‌ನ ಗ್ಯಾರಂಟಿಗಳು ಭರವಸೆ ಮೂಡಿಸಿದ್ದವು. ಬಿಜೆಪಿಯ ಭ್ರಷ್ಟಾಚಾರವನ್ನು ಜಗಜ್ಜಾಹೀರು ಮಾಡಿದ್ದ ಕಾಂಗ್ರೆಸ್‌,  ವರ್ಗಾವಣೆಯ ಮೂಲಕ ಹಣ ತಿನ್ನುವುದರಲ್ಲಿ ತಾನೇನೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ವರ್ಗಾವಣೆಗಾಗಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ ಎಂಬ ಮಾತುಗಳನ್ನು ನೌಕರರೆ ಉಗುಳು ನುಂಗಿ ಹೇಳುತ್ತಿದ್ದಾರೆ. ಗ್ಯಾರಂಟಿ

ಗ್ಯಾರಂಟಿಯಲ್ಲೆ ಗಿರಕಿ : ಮೊದಲ ದಿನದಿಂದ ಹಿಡಿದು ಇಂದಿನವರೆಗೆ “ನುಡಿದಂತೆ ನಡೆದಿದ್ದೇವೆ” ಎಂಬ ನಾಮ ಫಲಕ ಹಾಕಿಕೊಂಡು ಗ್ಯಾರಂಟಿಯ ಸುತ್ತ ಗಿರಕಿ ಹೊಡೆಯುತ್ತಲೇ ಇದ್ದಾರೆ. ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಮಹಿಳೆಯರಿಗೆ ಬಲ, ಸ್ಥೈರ್ಯ ತುಂಬಿದೆ. ಹೆಚ್ಚುವರಿ 5 ಕೆಜಿ ಅಕ್ಕಿ, ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಗೃಹಜ್ಯೋತಿಯಿಂದ ಉಳಿತಾಯವಾದ ಹಣ ಮನೆ ಖರ್ಚಿಗೆ ಜೀವ ತುಂಬಿದೆ. ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲಿದ್ದರೆ, ಯುವನಿಧಿಯ ಬಗ್ಗೆ ಕಾಂಗ್ರೆಸ್‌ ಉಸಿರೇ ಎತ್ತುತ್ತಿಲ್ಲ. 2022-23 ಎಂಬ ಷರತ್ತಿನ ಕಾರಣ ಯುವಜನತೆ ಅದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ. ಜನ ಕಟ್ಟುತ್ತಿದ್ದ ಟ್ಯಾಕ್ಸ್‌ನ ಹಣ ಇಲ್ಲಿಯವರಗೆ ಶ್ರೀಮಂತರಿಗೆ ಮಾತ್ರ ಸಿಗುತ್ತಿತ್ತು. ಈಗ ಅದು ಬಡ ಜನರಿಗೆ ಸಿಗುತ್ತಿದೆ. ಸಾಧ್ಯವಾಗಬಹುದಾದ ಯೋಜನೆಗಳನ್ನು ಸಾಧ್ಯವಾಗಿಸಿದ ಕಾರಣ ಕಾಂಗ್ರೆಸ್‌ ಸರ್ಕಾರ ‘ಗ್ಯಾರಂಟಿʼಯನ್ನು ಉಳಿಸಿಕೊಂಡಿದೆ.

ಗ್ಯಾರಂಟಿಯಲ್ಲಿನ ಕೆಲ ಷರತ್ತುಗಳು ಉದಾರೀಕರಣದ ವಾಸನೆಯನ್ನು ತೋರಿಸುತ್ತಿದೆ. ಶಕ್ತಿಯೋಜನೆಗೆ ಆಧಾರ್‌ಕಾರ್ಡ್‌ ಕಡ್ಡಾಯ ಮಾಡಿರುವುದು ಕೆಲ ಜನರನ್ನು ಹೊರಗುಳಿಯುವಂತೆ ಮಾಡಿದೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಹಾಗೂ ಉತ್ತರ ಭಾರತದಿಂದ ವಲಸೆಬಂದ ಕಾರ್ಮಿಕರನ್ನು ಈ ಯೋಜನೆಯಿಂದ ಹೊರಗಿಟ್ಟಂತಾಗಿದೆ. ದೆಹಲಿಯಲ್ಲಿ ಈ ರೀತಿಯ ಷರತ್ತುಗಳಿಲ್ಲ ಎಂಬುದನ್ನು ಗಮನಿಸಬೇಕು. ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳನ್ನು ನೀವೇ ನಿರ್ಧರಿಸಿ ಎಂದು ಕುಟುಂಬಗಳಿಗೆ ಬಿಟ್ಟಿದ್ದು ಅಪಾಯವನ್ನು ತಂದೊಡ್ಡಲಿದೆ. ಮನೆಯಲ್ಲಿ  ಮೂರ್ನಾಲ್ಕು ಜನ ಹೆಣ್ಣು ಮಕ್ಕಳಿದ್ದರೆ ಈ ಯೋಜನೆ ಯಾರಿಗೆ ಸಿಗಬೇಕು ಎಂಬ ಗೊಂದಲವನ್ನು ಸೃಷ್ಟಿಸಿದೆ.  ಗಂಡನ ಆಧಾರ್ ಕಾರ್ಡ್‌ ಕಡ್ಡಾಯ ಎಂದು ಹೇಳುವ ಮೂಲಕ ಗಂಡಿನ ಅನಿವಾರ್ಯತೆಯನ್ನು ಸೃಷ್ಟಿಸಿ ಪುರುಷ ಪ್ರಧಾನ ಮೌಲ್ಯಗಳನ್ನು ಹೇರಲು ಹೊರಟಿದೆ. ಗ್ಯಾರಂಟಿ

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಅಕ್ಕಿ ನಿರಾಕರಣೆ ನಿದ್ದೆಗೆಡಿಸಿತು. ಕೇಂದ್ರದ ಕುತಂತ್ರವನ್ನು ಹಣಿಯುವುದಕ್ಕಾಗಿ 5 ಕೆಜಿ ಅಕ್ಕಿ ಬದಲಿಗೆ ನಗದು ನೀಡುವ ನಿರ್ಧಾರ ಮಾಡಿತು. ಪ್ರತಿ ಕೆಜಿಗೆ 34 ರೂ ಅಂತೆ ಒಬ್ಬ ಸದಸ್ಯರಿಗೆ 170 ರೂ ನೀಡಲು ತೀರ್ಮಾನಿಸಿತು. ಈ ಹಣ ಬಹಳಷ್ಟು ಜನರ ಖಾತೆಗೆ ಜಮಾ ಆಗಿಲ್ಲ ಎಂಬ ಕಾರಣಗಳು ಕೇಳಿ ಬರುತ್ತಿವೆ.

ಯುವನಿಧಿ ಯೋಜನೆಯಂತೂ ಮೂಗಿಗೆ ತುಪ್ಪ ಸವರುವ ಯೋಜನೆಯಾಗಿದೆ. ನಿರುದ್ಯೋಗವನ್ನು ತಡೆಗಟ್ಟಲು ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯ ಎನ್ನುವಂತದ್ದನ್ನು ಮರೆತಿದೆ. ಉದ್ಯೋಗ ಸೃಷ್ಠಿ ಮಾಡಬೇಕು ಇಲ್ಲವೇ ಉದ್ಯೋಗ ಭತ್ಯೆಯನ್ನು ನೀಡಬೇಕು. ಆದರೆ ಸರ್ಕಾರ ಯುವನಿಧಿ ಎಂಬ ಗಾಳಿ ತುಂಬಿದ ಬಲೂನು ತೋರಿಸಿ ‘ಯುವ ಸಬಲೀಕರಣ’ ಎಂದು ಹೇಳುತ್ತಿದೆ. 2022-23 ರ ಹಿಂದಿನ ವರ್ಷದಲ್ಲಿ ಶಿಕ್ಷಣ ಪಡೆದವರನ್ನು, ಹತ್ತಾರು ವರ್ಷಗಳಿಂದ ಉದ್ಯೋಗ ಸಿಗದೆ ಇರುವವರನ್ನು ಈ ಯೋಜನೆಯಿಂದ ದೂರ ತಳ್ಳಿರುವುದು ಎಷ್ಟು ಸರಿ?

ಈ ಎಲ್ಲಾ ಕೊರೆತೆಗಳ ನಡುವೆಯೂ ಗ್ಯಾರಂಟಿ ಒಂದಿಷ್ಟು ನಿಟ್ಟುಸಿರು ಬಿಡಲು ಕಾರಣವಾಗಿದೆ. ಆದರೆ ಕಾಂಗ್ರೆಸ್‌ ಗ್ಯಾರಂಟಿಯ ಹೆಸರಿನಲ್ಲಿಯೇ 5 ವರ್ಷ ಗಿರಕಿ ಹೊಡೆಯುವಂತೆ ಕಾಣುತ್ತಿದೆ.

ದಮನಿತರಿಗೆ ಧ್ವನಿಯಾಗಲೇ ಇಲ್ಲ : ನಾವು ಶೋಷಿತ ಸಮುದಾಯಗಳ ಪರವಾಗಿ ಇದ್ದೇವೆ. ದಮನಿತರ ನೋವುಗಳನ್ನು ದೂರವಾಗಿಸಿ ಅವರ ಮುಖದಲ್ಲಿ ನಗು ಅರಳಿಸುವುದೇ ನಮ್ಮ ಕೆಲಸ ಎಂದು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಹೇಳಿತ್ತು. ಆದರೆ ದಮನಿತರ ಕಡೆ ಕಾಂಗ್ರೆಸ್‌ ಇಲ್ಲಿವರೆಗೆ ತಿರುಗಿಯೂ ನೋಡಿಲ್ಲ.

ದಲಿತರ ಕಲ್ಯಾಣಕ್ಕೆ ಕಾಂಗ್ರೆಸ್‌ ಸರ್ಕಾರ ಜೀವ ತುಂಬಬಹುದು ಎಂದು ಚುನಾವಣೆಯಲ್ಲಿ ದಲಿತ ಸಮುದಾಯ ದೊಡ್ಡ ಬೆಂಬಲವಾಗಿ ನಿಂತಿತ್ತು. ಆದರೆ, ದಲಿತರ ಅಭಿವೃದ್ಧಿಗಾಗಿ ಇಟ್ಟಿದ್ದ ಹಣವನ್ನು ಗ್ಯಾರಂಟಿಗೆ ಬಳಸುವ ಮೂಲಕ ಅವರ ಹಕ್ಕನ್ನು ಕಸಿದುಕೊಂಡಿದೆ. ಗ್ಯಾರಂಟಿಗಳಲ್ಲಿ ದಲಿತರಿಲ್ಲವೆ? ಎಂಬ ಉಡಾಫೆಯ ಮಾತುಗಳ ಮೂಲಕ ಕೆಲ ಸಚಿವರು ಸಮರ್ಥಿಸಿಕೊಂಡಿದ್ದು ದಲಿತ ಸಮುದಾಯಕ್ಕೆ ಮಾಡಿದ ಮೋಸವಾಗಿದೆ. 48,000 ಕ್ಕೂ ಹೆಚ್ಚು ಗಂಗಾ ಕಲ್ಯಾಣ ಯೋಜನೆಯ ಅರ್ಜಿಗಳು ನಿಗಮಗಳಲ್ಲಿ ಕೊಳೆಯುತ್ತಿವೆ. ಅದೇ ರೀತಿ ಎರಡು ಎಕರೆ ಭೂಮಿಗಾಗಿ ಭೂ ಒಡೆತನ ಯೋಜನೆಯಲ್ಲಿ 11,000 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಗೆ ಹೆಚ್ಚಿನ ಹಣ ನೀಡದೆ ವಂಚನೆ ಮಾಡಿತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಇತರೆ ನಿಗಮಗಳಲ್ಲಿ ಅರ್ಜಿದಾರರು ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಬಿಜೆಪಿ ಮಾಡಿದ ಕೆಲಸವನ್ನೆ ಕಾಂಗ್ರೆಸ್‌ ಮಾಡುತ್ತಿದೆ ಎಂಬ ಆತಂಕ ಈಗ ಎದುರಾಗಿದೆ. ಗ್ಯಾರಂಟಿ

ಬಿಜೆಪಿ ಅವಧಿಯಲ್ಲಿ ನಡೆದ ಕೋಮುಗಲಭೆಗಳು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದವು. ರಾಜಕೀಯ ಲಾಭ ಪಡೆಯುವುದಕ್ಕಾಗಿ ಹಿಂದೂ – ಮುಸ್ಲಿಂರನ್ನು ವಿಭಜಿಸುವ ಮತ್ತು ಮುಸ್ಲಿಂರನ್ನು ಕೀಳಾಗಿ ಕಾಣುವಂತೆ ಬಿಂಬಿಸುವಲ್ಲಿ ಬಿಜೆಪಿ ಸಾಕಷ್ಟು ಹುನ್ನಾರ ನಡೆಸಿತ್ತು.  ಕಾಂಗ್ರೆಸ್‌ ಬಂದರೆ ಕೋಮುಗಲಭೆಗಳು ನಡೆಯುದಿಲ್ಲ ಎಂಬ ಕಾರಣಕ್ಕಾಗಿ ಬಹಳಷ್ಟು ಜನ ಕಾಂಗ್ರೆಸ್‌ಗೆ ಮತ ನೀಡಿದ್ದರು.  ಆದರೆ  ಕೋಮು ಧೃವೀಕರಣವನ್ನು ತಡೆಯಲು ಕಾಂಗ್ರೆಸ್‌ ವಿಫಲವಾಗಿದೆ. ಕರಾವಳಿಯಲ್ಲಿ ಈಗಲೂ ನಿತ್ಯ ಗಲಾಟೆಗಳು ನಡೆಯುತ್ತಿವೆ.  ರಾಜಕೀಯ-ಸಾಮಾಜಿಕ – ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೋಮು ಧೃವೀಕರಣದ ಮೂಲಕ ಹಿಂದುತ್ವದ ಅಜೆಂಡವನ್ನೂ ಬಿಜೆಪಿ ನಡೆಸುತ್ತಲೇ ಇದೆ.  ಉಡುಪಿಯ ಖಾಸಗೀ ಕಾಲೇಜೊಂದರಲ್ಲಿ ವಿಡಿಯೋ ತೆಗೆದಿದ್ದಾರೆ ಎಂಬ ಕಾರಣವನ್ನು ಮುಂದೆ ಮಾಡಿ ಮುಸ್ಲೀಂ ಸಮುದಾಯದ ಬಗ್ಗೆ ಅಪಪ್ರಚಾರ ಮಾಡಿದ ಉದಾಹರಣೆ ಕಣ್ಮುಂದೆಯೇ ಇದೆ.

ಶ್ರಮಿಕ ವರ್ಗವನ್ನು ನಿರ್ಲಕ್ಷಿಸುವ ಹಳೆ ಚಾಳಿಯನ್ನು ಕಾಂಗ್ರೆಸ್‌ ಈಗಲೂ ಮುಂದುವರೆಸಿದೆ. ಬಿಜೆಪಿ ಸರ್ಕಾರ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸಿತ್ತು. ಅದರ ಬಗ್ಗೆ ಏನನ್ನೂ ಮಾತನಾಡಲು ಸಿದ್ದರಿಲ್ಲ. ಮತ್ತು ರಾತ್ರಿಪಾಳೆಯದ ದುಡಿಮೆಯನ್ನು ಮಹಿಳೆಯರಿಗೆ ಕಡ್ಡಾಯಗೊಳಿಸಿದ್ದನ್ನು ರದ್ದು ಮಾಡಲು ಹಿಂದೇಟು ಹಾಕಿದೆ.  ಕನಿಷ್ಠ ವೇತನ ಪರಿಷ್ಕರಣೆ ವಿಷಯದಲ್ಲೂ ಸರ್ಕಾರ ಯಾವುದೇ ಬದ್ದತೆಯನ್ನು ಪ್ರದರ್ಶನ ಮಾಡದೇ ಮಾಲೀಕರ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ.

ಸೌಜನ್ಯ ಪ್ರಕರಣವನ್ನು ಎಸ್‌ಐಟಿ ಮೂಲಕ ಮರು ತನಿಖೆ ಮಾಡಬೇಕು ಎಂದು ಜನಪರ ಸಂಘಟನೆಗಳು, ಇತರೆ ಸಂಘಟನೆಗಳು ನಡೆಸುತ್ತಿರುವ ಹೋರಾಟ ಜೋರಾಗಿದೆ. ಬಹಳಷ್ಟು ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ನೀಡುತ್ತಿದ್ದಾರೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ‘ನಾನು ಸ್ವತಃ ವಕೀಲನಾಗಿ ಅಧ್ಯಯನ ನಡೆಸುತ್ತೇನೆ’ ಎಂದಿದ್ದು ಬಿಟ್ಟರೆ ಬೇರಾವ ಸ್ಪಂದನೆಯೂ ದೊರೆಯುತ್ತಿಲ್ಲ. ಇನ್ನೂ ಗೃಹಸಚಿವ ಜಿ. ಪರಮೇಶ್ವರ್‌ “ ಸೌಜನ್ಯ ಪ್ರಕರಣ” ಮುಗಿದ ಅಧ್ಯಾಯ ಎಂದು ಕಡ್ಡಿ ತುಂಡಾಗಿಸಿ ಹೇಳಿದ್ದಾರೆ. ಧರ್ಮಸ್ಥಳ, ಉಜಿರೆ ಸುತ್ತಮುತ್ತ ನಡೆದಿರುವ ಅಸಹಜ ಸಾವುಗಳನ್ನು ತನಿಖೆ ಮಾಡಿಸಿ ನ್ಯಾಯ ಕೊಡಿಸುವ ಧೈರ್ಯ ಹಾಗೂ ಇಚ್ಚೆ ಕಾಂಗ್ರೆಸ್ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಎಪಿಎಂಸಿ ತಿದ್ದುಪಡಿಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆದ ಸರ್ಕಾರ ಜಾನುವಾರು ಹತ್ಯೆಕಾಯ್ದೆಯನ್ನು ವಾಪಸ್ಸು ಪಡೆದಿಲ್ಲ, ಆ ಮೂಲಕ ತಾನೊಂದು ಮೃದು ಹಿಂದುತ್ವ ಧೋರಣೆ ಹೊಂದಿದ ಪಕ್ಷ ಎಂಬುದನ್ನು ಕಾಂಗ್ರೆಸ್ ಸಾಬೀತು ಪಡಿಸಿದೆ. ರಾಜ್ಯ ಶಿಕ್ಷಣ ನೀತಿ ತರುವುದಾಗಿ ಹೇಳುವ ಸರ್ಕಾರ ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು ನೀಡುವ ಕಾರ್ಯಕ್ಕೆ ಮುಂದಾಗುತ್ತಿವೆ. ಸರ್ಕಾರಿ ಶಾಲೆಗಳನ್ನು ನಡೆಸಲು ನಮಗೆ ಆಸಕ್ತಿ ಇಲ್ಲ ಎಂಬುದನ್ನು ಬಹಿರಂಗವಾಗಿ ತೋರಿಸಿದ್ದಲ್ಲದೆ, ಶಿಕ್ಷಣದ ಖಾಸಗೀರಣಕ್ಕೆ ರತ್ನಗಂಬಳಿ ಹಾಸುತ್ತಿದೆ.

ಇದನ್ನೂ ಓದಿಕೆರೆಯ ಮಣ್ಣನ್ನು ನುಂಗಿದ “ಸರ್ಕಾರಿ ನೌಕರರ ಸಂಘದ ಅಧ್ಯಕ್ಷ”! 71 ಲಕ್ಷರೂ ವಂಚನೆ!!

ಕಾಂಗ್ರೆಸ್‌ ಸರ್ಕಾರದ ನೂರುದಿನಗಳ ಕುರಿತು ಜನಶಕ್ತಿ ಮೀಡಿಯಾ  ಕೆಲವರ ಜೊತೆ ಮಾತನಾಡಿಸಿದಾ ಅವರು ನೀಡಿದ ಪ್ರತಿಕ್ರಿಯೆಗಳು ಹೀಗಿವೆ……..

ಹಳಸಲು ನೀತಿಗಳಾಗಿವೆ : ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ “ಸರ್ಕಾರದ ನೂರು ದಿನಕ್ಕೆ” ಪ್ರತಿಕ್ರಿಯಿಸಿದ್ದು, ಈ ಅವಧಿಯಲ್ಲಿ ಕೆಲ ಅಂಶಗಳು ಸಕಾರಾತ್ಮಕವಾಗಿದ್ದರೂ, ಅದರ ನಡೆ ಅದೆ ಹಳಸಲು ನೀತಿಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಜಾರಿಯು ಈ ನೂರು ದಿನಗಳ ಸಾಧನೆಯಾಗಿದೆ ! ಏಪಿಎಂಸಿ ತಿದ್ದುಪಡಿ ಕಾಯ್ದೆ , ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಾಪಾಸಾತಿಗೆ ಕ್ರಮ, ದಲಿತ ಪರ ಪಿಟಿಸಿಎಲ್ ಕಾಯ್ದೆ, ಅಲ್ಪ ಸಂಖ್ಯಾತರಿಗೆ ಸಂಬಂದಿಸಿದ ಹಿಂದಿನ ಸರಕಾರದ ತಾರತಮ್ಯ ನಿವಾರಣೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ.  ಇದೆಲ್ಲಾ ಏನೇ ಇದ್ದರೂ ರಾಜ್ಯ ಸರಕಾರದ ದಿಕ್ಕು ಈಗಲೂ ಜಾಗತೀಕರಣ ಉದಾರೀಕರಣ ಖಾಸಗೀಕರಣದ ಪರವಾಗಿ ನಡೆದಿದೆ. ವಿದ್ಯುತ್ ರಂಗದ ಖಾಸಗೀಕರಣ ಮತ್ತು ಸ್ಮಾರ್ಟ ಮೀಟರ್ ಅಳವಡಿಕೆ, ಆಧಾರ ಜೋಡಣೆ ಕುರಿತ ಮೌನವೇ ಸಾಕ್ಷಿಯಾಗಿದೆ.  ಬಲವಂತದ ಹಾಗೂ ವಂಚಕ ಬೆಲೆಯ ಭೂ ಸ್ವಾಧೀನದ ವಿಚಾರದಲ್ಲಿ ಮೌನ ವಹಿಸಿರುವುದು. ಬಗರ್ ಹುಕುಂ ಸಾಗುವಳಿ ಹಕ್ಕುಪತ್ರದ ಕುರಿತು, ಭೂ ಸ್ವಾದೀನ ತಿದ್ದುಪಡಿ ಕಾಯ್ದೆ ವಾಪಾಸಾತಿ ಕುರಿತು ಸರ್ಕಾರದ ನಿಲುವು ಬಿಜೆಪಿಯಂತೆ ಇದೆ ಎಂದರು.

ವಿಧಾನ ಸೌಧದ ಸುತ್ತ ಗೋ ಮೂತ್ರ ಸಿಂಪಡಣೆ, ನವ ಶಾಸಕರಿಗೆ ತರಬೇತಿ ಹೆಸರಿನಲ್ಲಿ ಸ್ಪೀಕರ್‌ರವರು ಹಿಂದುತ್ವವಾದಿಗಳನ್ನು ಆಹ್ವಾನಿಸಲು ಕ್ರಮವಹಿಸಿದ್ದು, ಕೆಲವು ಮಠಾಧೀಶರು ಪತ್ರಿಕಾ ಗೋಷ್ಠಿ ನಡೆಸಿ ಬೆದರಿಸಿದರೆಂಬ ಕಾರಣಕ್ಕೆ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ವಾಪಾಸು ಪಡೆಯಲಾಗದೆಂದು ವಿಧಾನ ಸಭೆಯಲ್ಲ ಪ್ರಕಟಿಸಿದ್ದು ಎಲ್ಲವೂ ಹಿಂದುತ್ವದ ಕೋಮುವಾದಿಗಳ ಕುರಿತಂತೆ ಮೆದು ನೀತಿಯಾಗಿದೆ. ಕಾರ್ಪೋರೇಟ್ ಲೂಟಿಗೆ ರಾಜ್ಯದ ಮೇಲೆ 85 ಸಾವಿರ ಕೋಟಿ ಸಾಲವನ್ನು ಹೇರಿದೆ ಎಂದು ಯು ಬಸವರಾಜ ತಿಳಿಸಿದರು.

 

ಎಲ್ಲವೂ ಮೊದಲಿನಂತೆ ಮುಂದುವರಿದಿದೆ : ಎಎಪಿ ಉಪಾಧ್ಯಕ್ಷ ಮೋಹನ್‌ ದಾಸರಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕೇವಲ ಸರ್ಕಾರ ಬದಲಾಗಿದೆ ಆದರೆ ಭ್ರಷ್ಟಾಚಾರ, ಕಮಿಷನ್‌ ದಂಧೆ, ವರ್ಗಾವಣೆ ದಂಧೆ ಎಲ್ಲವೂ ಮೊದಲಿನಂತೆ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ಏಕೆ ಏನು ಮಾತನಾಡುತ್ತಿಲ್ಲ?. ಬೆಂಗಳೂರಿಗೆ ಅಗತ್ಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೇನು? ಎಂದು ಪ್ರಶ್ನಿಸಿರುವ ಅವರು, ರಾಜ್ಯದ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುತ್ತಿಲ್ಲ. ಬೆಂಗಳೂರಲ್ಲಿ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಡಿಸಿಎಂ ಡಿ ಕೆ ಶಿವಕುಮಾರ್‌ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದು ಸುತ್ತಾಡುತ್ತಿದ್ದಾರೆ.

ಅವರೇನು ವಿರೋಧ ಪಕ್ಷದಲ್ಲಿಲ್ಲ. ತಮ್ಮದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಬ್ರಾಂಡ್‌ ಬೆಂಗಳೂರು ಮಾಡುತ್ತೇನೆಂದು ಹೇಳಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸಮಸ್ಯೆಗಳೇನು ಎಂಬ ಅರಿವಿದ್ದುಕೊಂಡು ಪುನಃ ಆಲಿಸುವ ನಾಟಕ ಏಕೆ ಮಾಡುತ್ತಿದ್ದೀರಿ?. ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದಿದ್ದಾರೆ.  ರಾಜ್ಯದಲ್ಲಿ ಮಳೆಯೇ ಇಲ್ಲದ ಪರಿಸ್ಥಿತಿ ಇದೆ. ರಾಜ್ಯದ ರೈತರ ಸಂಕಷ್ಟದ ದಿನಗಳನ್ನು ಲೆಕ್ಕಿಸದೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲಾಗುತ್ತಿದೆ. ನಾಡು, ನುಡಿ, ಜಲಕ್ಕೆ ಬದ್ಧ ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಸರ್ಕಾರದ 40% ಕಮಿಷನ್‌, ಪೇಸಿಎಂ ವಿರುದ್ಧ ಸಿಎಂ ಸಿದ್ದರಾಮಯ್ಯ ರಾಜ್ಯಾದ್ಯಂತ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗುತ್ತಿಗೆದಾರರ ಬಾಕಿ ಪಾವತಿಗೆ 20% ಕಮಿಷನ್‌ ಕೇಳುತ್ತಿರುವ ಆರೋಪ ಕೇಳಿಬಂದಿದೆ. ಡಿ ಕೆ ಶಿವಕುಮಾರ್‌ ವಿರುದ್ಧವೇ ದೂರುಗಳು ವ್ಯಕ್ತವಾಗಿವೆ. ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ತಿಂಗಳಿಗೆ ತಲಾ 6 ರಿಂದ 8 ಲಕ್ಷ ರೂ. ಕಮಿಷನ್ ಅನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ಆಯ್ಕೆ ಮಾಡಿದ್ದು ಸರಕಾರಿ ಶಾಲೆಗಳನ್ನು ಮುಚ್ಚಲಿಕ್ಕಾಗಿಯೇ? :  ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಶಿಕ್ಷಣ ತಜ್ಞ ಬಿ. ಶ್ರೀಪಾದ್‌ ಭಟ್‌ ಆರೋಪಿಸಿದ್ದಾರೆ.

ಎನ್‌ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಿದ ತಕ್ಷಣವೆ ಕ್ಯಾಂಪಸ್ ಡೆಮಾಕ್ರಸಿ ಬರುವುದಿಲ್ಲ, ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುವುದಿಲ್ಲ ಎಂಬುದು ನೂರಕ್ಕೆ ನೂರು ಸತ್ಯ. “ರಾಜ್ಯ ಶಿಕ್ಷಣ ನೀತಿಯ ಹೆಸರಿನಲ್ಲಿ ವಿದ್ಯಾರ್ಥಿಗಳು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡುವ ಹುನ್ನಾರವಿದೆ.  ಯಾವುದೆ ಮುಂದಾಲೋಚನೆ ಇಲ್ಲದೆ ಶಿಕ್ಷಣವನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುತ್ತೇವೆ ಎಂದು ಹೊರಟಿದ್ದರೆ ಅದೊಂದು ದೊಡ್ಡ ದುರಂತಕ್ಕೆ ಮುನ್ನುಡಿ ಬರೆದಂತೆ” ಎಂದು ಎಚ್ಚರಿಸಿದರು.

ಹಿಂದಿನ ಸರಕಾರಗಳು ಅಧಿಕಾರದಲ್ಲಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲಿಕೆಯ ಸಂಬಂಧ ಸರ್ಕಾರೇತರ ಖಾಸಗಿ ಸಂಘ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಅನುಸಾರ ಅಜೀಮ್ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಶಿಕ್ಷಕರಿಗೆ, ಅಧಿಕಾರಿಗಳಿಗೆ ತರಬೇತಿ, ಬಿಸಿಯೂಟದ ಗುಣಮಟ್ಟ ಕಾಪಾಡುವುದು ಪ್ರಥಮ್ ಪ್ರತಿಷ್ಠಾನಕ್ಕೆ ಪ್ರಥಮ ಭಾಷೆ ಮತ್ತು ಗಣಿತ ವಿಷಯಗಳ ಕಲಿಕ ಮಟ್ಟ ಹೆಚ್ಚಿಸುವುದು, ಶಿಕ್ಷಣ ಪ್ರತಿಷ್ಠಾನಕ್ಕೆ ಮಕ್ಕಳ ಶಿಕ್ಷಣ ಕಲಿಕೆ, ಅಭ್ಯಾಸ ಪುಸ್ತಕಗಳ ಮೂಲಕ ಕಲಿಕಾ ಮಟ್ಟ ಹೆಚ್ಚಿಸುವುದು, ಖಾನ್ ಅಕಾಡೆಮಿಗೆ ವಿಡಿಯೋ ಲೇಖನಗಳು ಮತ್ತು ಇತರ ಡಿಜಿಟಲ್ ತರಬೇತಿ ಹೀಗೆ ಅನೇಕ ವಿಷಯಗಳ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲಿನ ನಾಲ್ಕು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಮುಂದುವರಿದ ಭಾಗವಾಗಿ ಈಗ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್ ಸರಕಾರವು ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡಲು ನಿರ್ಧರಿಸಿದೆ. ಅದರೆ ಕರ್ನಾಟಕದ ಜನತೆ ಶಿಕ್ಷಣದ ಖಾಸಗೀಕರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಲಿಲ್ಲ ಎನ್ನುವ ಸತ್ಯವನ್ನು ಆ ಪಕ್ಷದವರು ಆದಷ್ಟು ಬೇಗ ಅರಿತುಕೊಳ್ಳಬೇಕಾಗಿದೆ ಎಂದರು.

ಈ ಎಲ್ಲಾ ಬೆಳವಣೆಗೆಗಳನ್ನು ಗಮನಿಸುತ್ತಿದ್ದರೆ ಕಾಂಗ್ರೆಸ್‌ ಗ್ಯಾರಂಟಿಯ ಹೆಸರಲ್ಲಿ ಐದು ವರ್ಷ ಕಾಲಹರಣ ಮಾಡುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಇಲ್ಲಿಯವರಿಗೆ ರಾಜ್ಯದ ಅಭಿವೃದ್ಧಿ, ಸಬಲೀಕರಣದ ಕುರಿತು ಯೋಜನೆ ರೂಪಿಸುವ ಪ್ರಸ್ತಾಪ ಕಾಣುತ್ತಲೆ ಇಲ್ಲ. ಶಿಕ್ಷಣ, ಆರೋಗ್ಯ, ಜನಸಾಮಾನ್ಯರ ಸಂಕಷ್ಟಗಳ ನಿವಾರಣೆ, ಸಾರ್ವಜನಿಕ ವ್ಯವಸ್ಥಯನ್ನು ನಿರ್ಲಕ್ಷಿಸಿದರೆ ರಾಜ್ಯ ಇನ್ನಷ್ಟು ದಿವಾಳಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಹಾಗೂ ಕಾಂಗ್ರೆಸ್‌ ಪಕ್ಷದ ಮೇಲೆ ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚುನಾವಣಾ ಲಾಭಕ್ಕಾಗಿ ಕೆಲಸ ಮಾಡದೆ ರಾಜ್ಯದ ಅಭಿವೃದ್ಧಿ, ಜನರ ಸಂಕಟ, ನೋವುಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತಾಗಲಿ.

 

 

ಗ್ರಂಟಿ

Donate Janashakthi Media

Leave a Reply

Your email address will not be published. Required fields are marked *