ಬಿಜೆಪಿ-ಕಾಂಗ್ರೆಸ್‌ ಪಕ್ಷಗಳೆರಡೂ ಅವ್ಯವಹಾರದಲ್ಲಿ ಪರಿಣಿತಿ ಹೊಂದಿರುವವರು: ಹೆಚ್‌.ಡಿ.ಕುಮಾರಸ್ವಾಮಿ ಆರೋಪ

ಕಲಬುರಗಿ: ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರೀಯ ಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಕೆಲಸಗಳು ಆದರೂ ಅದರಲ್ಲಿ ಸ್ವಲ್ಪಪಾಲು ಪಡೆದುಕೊಂಡೇ ಕಾರ್ಯನಿರ್ವಹಿಸುವವರು, ಆದರೂ ಸ್ವತಃ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೇ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಈ ಮೂಲಕ ಆ ಪಕ್ಷಗಳ ಭ್ರಷ್ಟ ಮುಖ ಜನರ ಮುಂದೆ ಅನಾವರಣಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಆರೋಪಿಸಿದರು.

ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಗೆ ಆಗಮಿಸಿದ ಹೆಚ್‌.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಜನರ ಹಣ ಲೂಟಿ ಹೊಡೆಯುವುದರಲ್ಲಿ ಹಾಗೂ ಪರ್ಸೆಂಟೇಜ್‌ ತೆಗೆದುಕೊಳ್ಳುವುದರಲ್ಲಿ ಎರಡೂ ಪಕ್ಷಗಳ ನಡುವೆ ದೊಡ್ಡ ಪೈಪೋಟಿಯೇ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ನರೇಂದ್ರ ಮೋದಿ 10% ಸರಕಾರ ಎಂದು ಕರೆಯುತ್ತಿದ್ದರು. ಈಗ ಅವರದ್ದೇ ಪಕ್ಷದವರು 20% ಸರಕಾರ ಎಂದು ಕರೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಇದ್ದಾಗ ಬೆಂಗಳೂರಿನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪೊಲೀಸ್‌ ವಸತಿ ಕಟ್ಟಡ ಈಗ ಬೀಳುವ ಹಂತದಲ್ಲಿದೆ. ಕಳಪೆ ಕಾಮಗಾರಿ, ಪರ್ಸಂಟೇಜ್‌ ವ್ಯವಹಾರವೇ ಕಾರಣವಾಗಿದ್ದು, ರಾಜ್ಯವನ್ನು ರಕ್ಷಣೆ ಮಾಡುವ ಪೊಲೀಸ್‌ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ನಿರ್ಮಾಣದಲ್ಲಿ ಕಳಪೆ, ಅವ್ಯವಹಾರ ನಡೆದಿದೆ ಎಂದರೆ ಉಳಿದ ಯೋಜನೆಗಳ ಕಥೆ ಏನು? ಎಷ್ಟು ಅಕ್ರಮ ನಡೆದಿದೆ? ಎಷ್ಟು ಪರ್ಸೆಂಟೇಜ್‌ ವ್ಯವಹಾರವಾಗಿದೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಕುಮಾರಸ್ವಾಮಿ ಆರೋಪಿಸಿದರು.

ಮುಸ್ಲಿಂ ಅಭ್ಯರ್ಥಿ ವಿವಾದ ಸಿದ್ದರಾಮಯ್ಯ ಅವರಿಂದಲೇ ಆರಂಭವಾಗಿದ್ದು

ಉಪಚುನಾವಣೆ ನಡೆಯಲಿರುವ ಸಿಂದಗಿ ಹಾಗೂ ಹಾನಗಲ್‌ ಕ್ಷೇತ್ರಕ್ಕೆ ನಮ್ಮ ಪಕ್ಷದ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಯಾರು? ಮುಸ್ಲಿಂ ಅಭ್ಯರ್ಥಿ ವಿಚಾರವಾಗಿ ಮೊದಲು ವಿವಾದ ಹುಟ್ಟುಹಾಕಿದ್ದು ಸಿದ್ದರಾಮಯ್ಯ ಅವರೇ, ಅವರ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ಜೆಡಿಎಸ್ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ, ಜೆಡಿಎಸ್ ಜಾತ್ಯತೀತ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದರು. ಅನಗತ್ಯ ವಿವಾದವನ್ನು ಸೃಷ್ಟಿಸಿ ಗೊಂದಲ ಆರಂಭ ಮಾಡಿದ್ದಾರೆ. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ. ಅಂಥ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದರು.

ನಾನು ಯಾವುದೇ ಕಾರಣಕ್ಕೂ ಅವರ ತಂಟೆಗೆ ಹೋಗುವುದಿಲ್ಲ. ಜನರ ಬಳಿ ಮತ ಕೇಳಲು ನಮ್ಮಲ್ಲಿ ಜನರಿಗಾಗಿ ಮಾಡಿದ ಸೇವೆ ಇದೆ. ಕಾಂಗ್ರೆಸ್‌ ಪಕ್ಷದ ಹೆಸರು ಹೇಳಿಕೊಂಡು ಮತ ಕೇಳಬೇಕಾದ ಕರ್ಮ ನಮಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *