ರಾಯ್‌ಪುರ: ಛತ್ತೀಸ್‌ಗಢದ ರಾಯಪುರದಲ್ಲಿ ನಡೆಯುತ್ತಿರುವ 3 ದಿನಗಳ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) 85ನೇ ಮಹಾಧಿವೇಶನಕ್ಕೆ ಇಂದು(ಫೆಬ್ರವರಿ 26) ತೆರೆಬೀಳಲಿದೆ. ಈ ವೇಳೆ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ಪಕ್ಷಾಂತರ ನಿಷೇಧ ಕಾಯ್ದೆ ಜಾರಿ, ಪ್ರತಿಪಕ್ಷಗಳ ಮೈತ್ರಿ ಕುರಿತಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಜಾತ್ಯತೀತ, ಸಮಾಜವಾದಿ ಶಕ್ತಿಗಳ ಏಕತೆ ಕಾಂಗ್ರೆಸ್ ಪಕ್ಷದ ಭವಿಷ್ಯದ ಗುರಿಯಾಗಿದೆ. ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳೊಂದಿಗೆ ಗುರುತಿಸಿಕೊಳ್ಳಲು ಹಾಗೂ ಸಜ್ಜುಗೊಳಿಸಲು ಕಾಂಗ್ರೆಸ್ ಪಕ್ಷ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಕರೆ ನೀಡಲಾಗಿದೆ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪುವ ಜಾತ್ಯತೀತ ಪ್ರಾದೇಶಿಕ ಶಕ್ತಿಗಳನ್ನು ನಾವು ಸೇರಿಸಿಕೊಳ್ಳಬೇಕು. ಸಾಮಾನ್ಯ ಸೈದ್ಧಾಂತಿಕ ಆಧಾರದ ಮೇಲೆ ಎನ್‌ಡಿಎ ಎದುರಿಸಲು ಒಗ್ಗಟ್ಟಿನ ವಿರೋಧ ತುರ್ತು ಅಗತ್ಯವಿದೆ ಎಂದು ನಿರ್ಣಯಿಸಲಾಗಿದೆ.
ಇದನ್ನು ಓದಿ: ನಮ್ಮ ಹೋರಾಟ ನಿರಂತವಾಗಿದ್ದು, ಸೋಲು ಗೆಲುವು ಶಾಶ್ವತವಲ್ಲ: ಮಲ್ಲಿಕಾರ್ಜುನ ಖರ್ಗೆ
2014ರಿಂದ ಬಿಜೆಪಿ ಆಡಳಿತ ಆರಂಭವಾದ ನಂತರದಲ್ಲಿ ಸಾಮೂಹಿಕ ಪಕ್ಷಾಂತರಗಳು ನಡೆಯುತ್ತಿವೆ. ಬಿಜೆಪಿ ಪಕ್ಷವು ಶಾಸಕರನ್ನು ಖರೀದಿಸಿದೆ ಮತ್ತು ಆ ಮೂಲಕ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಉರುಳಿಸಿದೆ. ಅಂತಹ ಪದ್ಧತಿಗಳನ್ನು ತೊಡೆದುಹಾಕಲು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಲಿದ್ದೇವೆ. ಪ್ರತಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸರ್ವಸದಸ್ಯರ ಮಹಾಧಿವೇಶನದಲ್ಲಿ ಕಾಂಗ್ರೆಸ್ ನಿರ್ಣಯ ಅಂಗೀಕರಿಸಿದೆ.
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ವಿಶೇಷ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ವಿಧಿ 370 ಅನ್ನು ರದ್ದುಪಡಿಸುವುದರೊಂದಿಗೆ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಡಿಸಿದೆ. ಜಮ್ಮು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಕಾಂಗ್ರೆಸ್ ನಿರ್ಣಯಿಸಿದೆ.
ಬಡವರ ಸೇವೆ ಮತ್ತು ಶ್ರಮದಾನಗಳಲ್ಲಿ ತೊಡಗಬೇಕು. ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸೌಹಾರ್ದತೆಯನ್ನು ಪ್ರಚುರಪಡಿಸುವಂಥ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು. ನೆಲದ ಕಾನೂನುಗಳನ್ನು ಯಾರೂ ಉಲ್ಲಂಘಿಸಬಾರದು ಹಾಗೂ ಗಂಭೀರ ಅಪರಾಧ ಅಥವಾ ನೈತಿಕ ಅಪರಾಧ ಎಸಗಿ ಶಿಕ್ಷೆ ಅನುಭವಿಸಿರಕೂಡದು ಎಂಬ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಇದನ್ನು ಓದಿ: ಸಂಘಟನೆ ಬಲಿಷ್ಟವಾಗಿದ್ದರೆ, ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡರೆ ಮಾತ್ರ ಚುಣಾವಣೆ ಗೆಲ್ಲಲು ಸಾಧ್ಯ: ಖರ್ಗೆ
ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ 50 ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಮಹಾಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ.
ಈ ತಿದ್ದುಪಡಿಯ ಪ್ರಕಾರ ಕಾರ್ಯಕಾರಿ ಸಮಿತಿಗೆ ಮಾಜಿ ಪ್ರಧಾನಿಗಳು ಮತ್ತು ಮಾಜಿ ಎಐಸಿಸಿ ಅಧ್ಯಕ್ಷರುಗಳನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆಯನ್ನು 25ರಿಂದ 35ಕ್ಕೆ ಏರಿಕೆ ಮಾಡಲಾಗಿದೆ. ಎಲ್ಲಾ ಸದಸ್ಯರಿಗೂ ಇನ್ನು ಮುಂದೆ ಕೇವಲ ಡಿಜಿಟಲ್ ಸದಸ್ಯತ್ವ ಮತ್ತು ದಾಖಲೆಗಳನ್ನು ಒದಗಿಸಲಾಗುತ್ತದೆ.
ಮಹಾಧಿವೇಶನದ ನಿರ್ಣಯಗಳು
ಧರ್ಮ, ಜಾತಿ, ಭಾಷೆ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ದ್ವೇಷಾಪರಾಧ ನಿಗ್ರಹಕ್ಕೆ ಕಾನೂನು. ದೋಷಪೂರಿತ ಚುನಾವಣಾ ಬಾಂಡ್ ಬದಲಿಗೆ ರಾಷ್ಟ್ರೀಯ ಚುನಾವಣಾ ನಿಧಿ ಸ್ಥಾಪನೆ ಪ್ರಸ್ತಾವ. ಇವಿಎಂ ವಿಚಾರವಲ್ಲಿ ಸಮಾನ ಮನಸ್ಕ ಪಕ್ಷಗಳ ಜತೆ ಸಮಗ್ರ ಮಾತುಕತೆ; ಚುನಾವಣಾ ಆಯೋಗದ ಜತೆ ಚರ್ಚೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನು ರದ್ದುಪಡಿಸಲು ಪರಿಶೀಲನೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳ ಪರಿಶೀಲನೆ ಎಂಬ ನಿರ್ಣಯಗಳನ್ನು ಸಹ ಅಂಗೀಕರಿಸಲಾಗಿದೆ.
ರೈತರ ಸಮಸ್ಯೆಗಳನ್ನು ಆಲಿಸಿರುವೆ-ಅರಿತಿರುವೆ
ಭಾರತ್ ಐಕ್ಯತಾ ಯಾತ್ರಾದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ನಾನು ನನ್ನ ರಾಷ್ಟ್ರಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದೇನೆ. ಯಾತ್ರೆಯಲ್ಲಿ ಸಾವಿರಾರು ಮಂದಿ ನನಗೆ ಮತ್ತು ಪಕ್ಷದ ಸಂಪರ್ಕ ಹೊಂದಿದ್ದಾರೆ. ನಾನು ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದೇನೆ ಮತ್ತು ಅವರ ನೋವನ್ನು ಅರಿತುಕೊಂಡೆ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನು ಓದಿ: ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ನಾನು ಸಂಸತ್ತಿನಲ್ಲಿ ಗೌತಮ್ ಅದಾನಿ ಅವರನ್ನು ಟೀಕಿಸಿದ್ದೇನೆ, ಪ್ರಧಾನಿಯೊಂದಿಗೆ ಏನು ಸಂಬಂಧ ಎಂದು ಕೇಳಿದ್ದೇನೆ. ಸರ್ಕಾರ, ಅದರ ಮಂತ್ರಿಗಳು ಉದ್ಯಮಿಗಳ ರಕ್ಷಣೆಗೆ ಬಂದರು ಎಂದ ರಾಹುಲ್ ಗಾಂಧಿ,
ವಿರೋಧ ಪಕ್ಷಗಳು ಒಂದಾಗುವ ನಿರೀಕ್ಷೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಲೋಕಸಭೆ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳು ಒಂದಾಗುವ ನಿರೀಕ್ಷೆಗಳಿವೆ. ಆದರೆ, ಹೆಚ್ಚಿನ ನಿರೀಕ್ಷೆಗಳು ಕಾಂಗ್ರೆಸ್ ಪಕ್ಷದಿಂದ ಇವೆ ಎಂದ ಅವರು, ಪಕ್ಷದ ಸಂದೇಶ ಮತ್ತು ಸರ್ಕಾರದ ವೈಫಲ್ಯಗಳನ್ನು ಜನರ ಬಳಿಗೆ ಕಾರ್ಯಕರ್ತರು ಕೊಂಡೊಯ್ಯುವಂತೆ ಕರೆ ನೀಡಿದರು.
ಇದನ್ನು ಓದಿ: ನಿಲ್ಲದ ಅದಾನಿ ಷೇರು ಕುಸಿತ, 6 ದಿನಗಳಲ್ಲಿ ₹8.56 ಲಕ್ಷ ಕೋಟಿ ನಷ್ಟ : ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ – ವಿಪಕ್ಷಗಳ ಆರೋಪ
ಮಂಡಲ ಮಟ್ಟದಿಂದಲೇ ಕಾಂಗ್ರೆಸ್ ಸಂಘಟನೆ ಕಟ್ಟಬೇಕು ಮತ್ತು ಬಲಪಡಿಸಬೇಕು ಎಂದು ಕರೆ ನೀಡಿದ ಪ್ರಿಯಾಂಕಾ ಗಾಂಧಿ, ನಿಮಗೆ ಬಿಜೆಪಿ ವಿರುದ್ಧ ಹೋರಾಡುವ ಧೈರ್ಯವಿದೆ ಎಂದು ನಮಗೆ ತಿಳಿದಿದೆ. ದೇಶಕ್ಕಾಗಿ ಆ ಧೈರ್ಯವನ್ನು ಪ್ರದರ್ಶಿಸುವ ಸಮಯ ಬಂದಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ಪಿ.ಚಿದಂಬರಂ, ಪವನ್ ಖೇರಾ, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ