‘ಹೆಡ್ಡಾಫೀಸು ಬಿಜೆಪಿ ಕಚೇರಿಯೇ?’ | ಸುವರ್ಣ ನ್ಯೂಸ್‌ ವಿರುದ್ಧ ಕಾಂಗ್ರೆಸ್ ಆಕ್ರೋಶ

ಸುವರ್ಣ ನ್ಯೂಸ್‌ ಮಾಜಿ ಕಾರ್ಪೋರೇಟರ್ ಪುತ್ರನ ಸಾವಿನ ಪ್ರಕರಣದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು

ಬೆಂಗಳೂರು: ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಆಡಳಿತರೂಢ ಕಾಂಗ್ರೆಸ್ ಪಕ್ಷ ನೇರವಾಗಿ ಕನ್ನಡದ ಸುದ್ದಿ ವಾಹಿನಿ ಸುವರ್ಣ ನ್ಯೂಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಕೆಲ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದೆ ನಿಂತಿವೆ ಮತ್ತು ಅವುಗಳ ಹೆಡ್ಡಾಫೀಸು ಬಿಜೆಪಿ ಕಚೇರಿಯೇ?!” ಎಂದು ಗುರುವಾರ ಹೇಳಿದೆ. ಸುವರ್ಣ ನ್ಯೂಸ್‌ ಮಾಜಿ ಕಾರ್ಪೋರೇಟರ್ ಪುತ್ರನ ಸಾವಿನ ಪ್ರಕರಣಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು.

ಬೆಂಗಳೂರಿನ ಅತ್ತಿಗುಪ್ಪೆ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಕೆ. ದೊಡ್ಡಣ್ಣ ಅವರ ಪುತ್ರ ಗೌತಮ್ ಅವರು ಇತ್ತೀಚೆಗೆ ನೇಣು ಬಿಗಿದು ಸಾವಿಗೀಡಾಗಿದ್ದರು. ಈ ವೇಳೆ ಸುವರ್ಣ ನ್ಯೂಸ್‌ ಸೇರಿದಂತೆ ಕನ್ನಡದ ಹಲವು ಮಾಧ್ಯಮಗಳು, ಕಾಮಗಾರಿಯ ಬಿಲ್ ಪಾವತಿಸದಿದ್ದಕ್ಕೆ ಬಿಬಿಎಂಪಿ ಗುತ್ತೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಬಿತ್ತರಿಸಿತ್ತು.

ಇದನ್ನೂ ಓದಿ: ಗೌತಮ ಗುತ್ತಿಗೆದಾರ ಅಲ್ಲ ; ಇದು ಬಿಜೆಪಿ ಪಿತೂರಿ – ಪೋಷಕರಿಂದ ಸ್ಪಷ್ಟನೆ

ಈ ಸುದ್ದಿ ಪ್ರಸಾರದ ನಂತರ ಗೌತಮ್ ಅವರ ತಂದೆ ಕೆ. ದೊಡ್ಡಣ್ಣ ಸ್ಪಷ್ಟನೆ ನೀಡಿದ್ದು, ತಮ್ಮ ಮಗ ಗುತ್ತಿಗೆದಾರನೇ ಅಲ್ಲ. ತನ್ನ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. “ಗುರುವಾರ ಮಧ್ಯಾಹ್ನ ಊಟಕ್ಕೆ ಕರೆಯಲು ಹೋದಾಗ ನಮಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂದಿದೆ. ರೂಮ್ ಲಾಕ್ ಆಗಿದ್ದರಿಂದ ಗೌತಮ್‌ ಫೋನ್‌ಗೆ ಕರೆ ಮಾಡಲಾಗಿತ್ತು. ಆದರೆ ತೆರೆಯದೆ ಇದ್ದಾಗ ಅನುಮಾನ ಬಂತು. ಬಾಗಿಲಿಂದ ವಾಸನೆ ಬರುತ್ತಿತ್ತು. ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ವಿರುದ್ಧ ‘ಗುರಿಯಿಟ್ಟು’ ಅಭಿಯಾನ ನಡೆಸುತ್ತಿರುವುದು ಕಳವಳಕಾರಿ

“ಆತ ನಾಲ್ಕು ಐದು ತಿಂಗಳಿನಿಂದ ಡಿಪ್ರೆಷನ್‌ನಲ್ಲಿದ್ದನು. ಸಮಸ್ಯೆ ಏನು ಎಂದು ಕೇಳಿದರೂ ಅವನು ಏನು ಹೇಳುತ್ತಿರಲಿಲ್ಲ. ಅವನೇ ಮದುವೆ ಮಾಡಿ ಎಂದು ಹೇಳಿದ್ದನು. ಹೀಗಾಗಿ ಆರು ತಿಂಗಳಿನಿಂದ ಅವನಿಗೆ ಹುಡುಗಿ ಹುಡುಕುತ್ತಿದ್ದೆವು. ಕೆಲವು ಹುಡುಗಿಯರ ಫೋಟೊವನ್ನು ತೋರಿಸಿದ್ದೇವೆ. ಅವನು ಯಾವುದೇ ಗುತ್ತಿಗೆದಾರನಲ್ಲ ಯಾವುದೇ ಲೈಸೆನ್ಸ್ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿನೇ ಇದೆ. ನಾವು ನೋವಿನಲ್ಲಿದ್ದೇವೆ, ನಮಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ತಿಳಿದಿಲ್ಲ. ಆತನ ರೂಮಿನಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುವರ್ಣ ನ್ಯೂಸ್‌ನ ಸ್ಕ್ರೀನ್ ಶಾರ್ಟ್‌ ಅನ್ನು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್,”ಕೆಲ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದೆ ನಿಂತಿವೆ! ರಚನಾತ್ಮಕ ಟೀಕೆ, ಪ್ರಶ್ನೆ, ವರದಿಗಳಿಂದ ಸರ್ಕಾರವೊಂದನ್ನು ನೇರ ದಾರಿಯಲ್ಲಿ ಸಾಗುವಂತೆ ಮಾಡುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿರುತ್ತದೆ. ಆದರೆ ಅಪ್ರಬುದ್ಧ ಹಾಗೂ ಅಧ್ಯಯನಶೂನ್ಯ ಸುದ್ದಿಗಳು, ತಿರುಚಿದ ವರದಿಗಳಿಂದ ಪ್ರಪಂಗಂಡಾ ಮಾಡಬಹುದೇ ಹೊರತು ಮಾಧ್ಯಮ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುವುದಿಲ್ಲ” ಎಂದು ಹೇಳಿದೆ.

“ವಯುಕ್ತಿಕ ಕಾರಣಗಳಿಗಾಗಿ ಮಾಡಿಕೊಂಡ ಆತ್ಮಹತ್ಯೆಯನ್ನು ಸರ್ಕಾರದ ತಲೆಗೆ ಕಟ್ಟಲು ಪ್ರಯತ್ನಿಸುತ್ತಿರುವ ಕೆಲ ಮಾಧ್ಯಮಗಳಿಗೆ ವಾಸ್ತವದ ಅರಿವಿಲ್ಲವೇ? ಗುತ್ತಿಗೆದಾರನಲ್ಲದಿದ್ದರೂ, ಗುತ್ತಿಗೆ ಲೈಸೆನ್ಸ್ ಇಲ್ಲದಿದ್ದರೂ ಗುತ್ತಿಗೆದಾರ ಎಂದು ಬಿಂಬಿಸಲು ಹೊರಟಿರುವುದೇಕೆ? ಕೆಲ ಮಾಧ್ಯಮಗಳ ಹೆಡ್ಡಾಫೀಸು ಬಿಜೆಪಿ ಕಚೇರಿಯೇ? ರಾಜಕೀಯ ಪಕ್ಷ ಒಂದರಿಂದ ಮಾಧ್ಯಮಗಳು ಪತ್ರಿಕೋಧ್ಯಮದ ಹೊಣೆಗಾರಿಕೆಯ ಪಾಠ ಹೇಳಿಸಿಕೊಳ್ಳುವ ಸ್ಥಿತಿ ಬರಬಾರದು ಎನ್ನುವುದು ನಮ್ಮ ಕಳಕಳಿ” ಎಂದು ಕಾಂಗ್ರೆಸ್ ಹೇಳಿದೆ.

ವಿಡಿಯೊ ನೋಡಿ: ಸೌಜನ್ಯ ಕೊಲೆ ಪ್ರಕರಣ : ಧರ್ಮಾಧಿಕಾರಿಗಳೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಿರಾ? ಪತ್ರಕರ್ತ ಅಗ್ನಿ ಶ್ರೀಧರ ಪ್ರಶ್ನೆ

Donate Janashakthi Media

Leave a Reply

Your email address will not be published. Required fields are marked *