ಮುಸ್ಲಿಂ ಮಹಿಳೆಯರ ಅವಹೇಳನ ಪ್ರಕರಣ | ಕಲ್ಲಡ್ಕ ಪ್ರಭಾಕರ ಭಟ್ ಪರವಾಗಿ ವಾದ ಮಾಡಿದ್ದು ಕಾಂಗ್ರೆಸ್ ನಾಯಕ!

ಮಂಡ್ಯ: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ಬುಧವಾರದಂದು ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದಲ್ಲಿ ಕಲ್ಲಡ್ಕ ಭಟ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿರುವ ವಕೀಲ ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದೀಗ ಪ್ರಕರಣವು ಮತ್ತಷ್ಟು ವಿವಾದಕ್ಕೆ ಈಡಾಗಿದೆ.

ಮಹಿಳೆಯರನ್ನು ಅವಹೇಳನ ಮಾಡಿದ್ದ ಕಲ್ಲಡ್ಕ ಪ್ರ ಭಟ್ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳು ಕೂಡಾ ದಾಖಲಾಗಿದ್ದವು. ಮಂಡ್ಯದ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಕಳೆದ ಡಿಸೆಂಬರ್ 26ರಂದು ಎಫ್‌ಐಆರ್ ದಾಖಲಾಗಿತ್ತು. ಯುವ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಲ್ಲಡ್ಕ ಭಟ್ ಮೇಲೆ ಎಫ್ಐಆರ್‌ ದಾಖಲು ಮಾಡಿದ್ದರು.

ಇದನ್ನೂ ಓದಿ: ಬರಪರಿಹಾರ : ಇನ್ನೊಂದು ವಾರದಲ್ಲಿ 1ನೇ ಕಂತಿನ ಮೊತ್ತ ರೈತರ ಖಾತೆಗೆ ಜಮಾ

ಪ್ರಭಾಕರ ಭಟ್‌ ವಿರುದ್ಧ ದಾಖಲಾದ ಪ್ರಕರಣದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜನವರಿ 10ರ ಬುಧವಾರ ಮುಗಿಸಿದ್ದ ನ್ಯಾಯಾಲಯ ಆದೇಶವನ್ನು ಜನವರಿ 17 ಕ್ಕೆ ಕಾಯ್ದಿರಿಸಿತ್ತು. ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಅವರ ಪರವಾಗಿ ಬೆಂಗಳೂರಿನ ಖ್ಯಾತ ವಕೀಲ ಎಸ್. ಬಾಲನ್ ವಿಸ್ತೃತವಾಗಿ ವಾದ ಮಂಡಿಸಿದ್ದರು. ಆದರೆ ಪ್ರಕರಣದಲ್ಲಿ ಆರೋಪಿ ಕಲ್ಲಡ್ಕ ಭಟ್ ಪರವಾಗಿ ವಕೀಲ ಡಿ. ಚಂದ್ರೇಗೌಡ ಅವರು ವಾದ ಮಂಡಿಸಿದ್ದಾರೆ ಎಂದು ವರದಿಯಾಗಿದೆ. ವಕೀಲ ಚಂದ್ರೇಗೌಡ ಅವರು ಶ್ರೀರಂಗಪಟ್ಟಣ ತಾಲೂಕು ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಲ್ಲಡ್ಕ ಭಟ್ ವಿರುದ್ದ IPC 354, 294, 509, 506, 153A, 295, 295A, 298 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಜ್ಮಾ ಅವರು ತಮ್ಮ ದೂರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ‘ವೃತ್ತಿಪರ ಕ್ರಿಮಿನಲ್ ಆರೋಪಿ’ ಎಂದು ಉಲ್ಲೇಖಿಸಿದ್ದಾರೆ. ಆತ ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನು ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿ ಸಾವು ನೋವುಗಳನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಭಾಕರ ಭಟ್‌ ವಿರುದ್ಧ ದಾಖಲಾದ ಪ್ರಕರಣದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜನವರಿ 10ರ ಬುಧವಾರ ಮುಗಿಸಿದ್ದ ನ್ಯಾಯಾಲಯ ಆದೇಶವನ್ನು ಜನವರಿ 17 ಕ್ಕೆ ಕಾಯ್ದಿರಿಸಿತ್ತು. ಬುಧವಾರ ನ್ಯಾಯಾಲಯವು ಸ್ಥಳೀಯರಿಬ್ಬರ ಶ್ಯೂರಿಟಿ ಸೇರಿ 2 ಲಕ್ಷ ರೂ ಮೌಲ್ಯದ ಬಾಂಡ್ ನೀಡುವಂತೆ ಹೇಳಿ ಭಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ | ರಾಹುಲ್ ಗಾಂಧಿ ಆಪ್ತರಿಗೆ ಬಲೆ ಬೀಸುವ ಸಮಿತಿಯಲ್ಲಿ ಬಿ.ಎಲ್. ಸಂತೋಷ್ ಮತ್ತು ಎಸ್‌.ಎಂ. ಕೃಷ್ಣ!

ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಿರಿಯ ವಕೀಲ ಬಾಲನ್ ಅವರು, ಸುಪ್ರಿಂ ಕೋರ್ಟ್ ಮತ್ತು ಹಲವು ಹೈಕೋರ್ಟ್ ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾರೆ ಎಂದು ವಾದಿಸಿದ್ದು, “ದೇಶದ ಭದ್ರತೆ, ಸೌಹಾರ್ದತೆಗೆ ಈ ಆರೋಪಿ ಕಂಟಕವಾಗಿದ್ದಾರೆ. ಈ ಹಿಂದಿನ ಐಪಿಸಿ ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾರೆ” ಎಂದು ಕಾನೂನು, ಕಾಯ್ದೆಗಳನ್ನು ಉಲ್ಲೇಖಿಸಿ ಅವರು ವಾದ ಮಂಡಿಸಿದ್ದರು.

ಆರೋಪಿ ಕಲ್ಲಡ್ಕ ಭಟ್ ದೇಶ ಒಡೆಯುವ ಸಂಘಟಿತ ಕೃತ್ಯ ಮಾಡಿದ್ದಾರೆ. ಆ ಕಾರಣಕ್ಕಾಗಿ ಅವರ ವಿರುದ್ದ ಹೆಚ್ಚುವರಿಯಾಗಿ ಕೋಕಾ ಅ್ಯಕ್ಟ್ ಮತ್ತು ಯುಎಪಿಎ ಅ್ಯಕ್ಟ್, ಟೆರರಿಸ್ಟ್ ಅ್ಯಕ್ಟ್ ಗಳನ್ನು ಸೇರಿಸಬೇಕಿದೆ ಎಂದು ಬಾಲನ್ ಅವರು ನ್ಯಾಯಾಲಯಕ್ಕೆ ಹೇಳಿದ್ದರು. ಈ ಎಲ್ಲಾ ಕಾರಣಕ್ಕೆ ಆರೋಪಿ ಪೊಲೀಸ್ ಕಸ್ಟಡಿಗೆ ಬೇಕಾಗಿದ್ದಾರೆ. ಆರೋಪಿ ಕಲ್ಲಡ್ಕ ಭಟ್ಟ ಹೇಳಿರುವ ಹೇಳಿಕೆಯನ್ನು ಅವರಿಂದ ದೃಢಪಡಿಸಿಕೊಂಡು, ಹೇಳಿಕೆಯ ಮಾದರಿ ಪಡೆದುಕೊಂಡು ಫಾರೆನ್ಸಿಕ್ ಲ್ಯಾಬ್ ಗೆ ಕಳಿಸಬೇಕಿದೆ. ಆರೋಪಿ ಮೇಲೆ ರೌಡಿ ಶೀಟ್‌ ತೆರೆಯಲು ಎಲ್ಲ ಆಧಾರಗಳಿದ್ದು, ಇವುಗಳ ಹಿನ್ನಲೆಯಲ್ಲಿ ಆರೋಪಿಯನ್ನು ತನಿಖೆಗೆ ಒಳಪಡಿಸಬೇಕಿದೆ. ಹಾಗಾಗಿ ಜಾಮೀನು ನಿರಾಕರಿಸಬೇಕು ಎಂದು ಬಾಲನ್ ನ್ಯಾಯಾಯವನ್ನು ಕೇಳಿಕೊಂಡಿದ್ದರು.

ವಿಡಿಯೊ ನೋಡಿ: ಜಾತಿವಾದಿ ವ್ಯವಸ್ಥೆಯ ಸಂಚಿನಿಂದ ಹತ್ಯೆಯಾದ ರೋಹಿತ್ ವೇಮುಲ Janashakthi Media

Donate Janashakthi Media

Leave a Reply

Your email address will not be published. Required fields are marked *