ಮುಂಬೈ: ತಮ್ಮ ಮೊಮ್ಮಗ ಪಾರ್ಥ್ ಪವಾರ್, ಅಜಿತ್ ಪವಾರ್ ಪುತ್ರನ ವಿರುದ್ಧ ಕೇಳಿ ಬಂದ ಭೂ ವ್ಯವಹಾರ ಆರೋಪದ ಬಗ್ಗೆ ಮೌನ ಮುರಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಈ ಆರೋಪದ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಂಪೂರ್ಣ ತನಿಖೆ ನಡೆಸಬೇಕು ಹಾಗೂ ಅದರ ಫಲಿತಾಂಶವನ್ನು ಸಾರ್ವಜನಿಕಗೊಳಿಸಬೇಕು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಆರೋಪವನ್ನು ಗಂಭೀರ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ಅದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಜನರ ಮುಂದೆ ಇಡಬೇಕು ಶರದ್ ಪವಾರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಇಂಡಿ ಬಂದ್ ಸಂಪೂರ್ಣ ಯಶಸ್ವಿ : ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ
ಪಾರ್ಥ್ ಮೇಲಿನ ಆರೋಪವೇನು?
ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ ಸುಮಾರು ₹1,800 ಕೋಟಿ ಮೌಲ್ಯದ 40 ಎಕರೆ ಜಮೀನನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ, ಪಾರ್ಥ್ ಪವಾರ್ ಒಡೆತನದ ಕಂಪನಿ ಕೇವಲ ₹300 ಕೋಟಿಗೆ, ಮುದ್ರಾಂಕ ಶುಲ್ಕವನ್ನೂ ಪಾವತಿಸದೆ ಅಕ್ರಮವಾಗಿ ಖರೀದಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
‘ಪಾರ್ಥ್ ತಪ್ಪು ಮಾಡುತ್ತಾನೆ ಎಂದು ನನಗೆ ಅನಿಸುತ್ತಿಲ್ಲ’ ಎಂಬ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪವಾರ್, ‘ಇದು ಅವರ ಅಭಿಪ್ರಾಯ’ ಎಂದರು.
ಭೂ ಕಬಳಿಕೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
₹21 ಕೋಟಿ ಮುದ್ರಾಂಕ ಶುಲ್ಕ ವಂಚನೆ
ಅಮೇಡಿಯಾ ಎಂಟರ್‌ಪ್ರೈಸಸ್ ಎಂಬ ಕಂಪನಿಯ ಮಾಲೀಕರಾದ ಪಾರ್ಥ್ ಪವಾರ್ ಮತ್ತು ಅವರ ಸಹೋದರ ದಿಗ್ವಿಜಯ್ ಪಾಟೀಲ್ ಅವರು ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ 40 ಎಕರೆ ಜಮೀನು ಖರೀದಿಸಲು ಶೀತಲ್ ತೇಜವಾನಿ ಎಂಬುವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಸುಮಾರು 272 ಭೂ ಮಾಲೀಕರ ‘ಪವರ್ ಆಫ್ ಅಟಾರ್ನಿ’ಯನ್ನು ಶೀತಲ್ ತೇಜವಾನಿ ಹೊಂದಿದ್ದರು. ಇವರ ಬಳಿಯಿಂದ 40 ಎಕರೆಯನ್ನು ₹300 ಕೋಟಿಗೆ ಖರೀದಿಸಿದ್ದರು. ₹300 ಕೋಟಿಗೆ ಶೇ. 7ರಷ್ಟು ಮುದ್ರಾಂಕ ಶುಲ್ಕವಾಗಿ ₹21 ಕೋಟಿ ಪಾವತಿಸಬೇಕು. ಇದನ್ನು ಪಾವತಿಸಿರಲಿಲ್ಲ. ತನಿಖೆಯ ನಂತರ ಈ ಖರೀದಿ ಒಪ್ಪಂದ ರದ್ದುಗೊಂಡರೆ ದುಪ್ಪಟ್ಟು ಮುದ್ರಾಂಕ ಶುಲ್ಕ ಅಂದರೆ ₹42 ಕೋಟಿ ಪಾವತಿಸಬೇಕಾಗುತ್ತದೆ.
ಇದನ್ನೂ ನೋಡಿ: ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ – ಎಂ.ಜಿ.ಹೆಗಡೆ Janashakthi Media
