ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ: ಐದು ಎಡಪಕ್ಷಗಳ ಖಂಡನೆ

ಇರಾನ್ ಪಶ್ಚಿಮ ಏಷ್ಯಾದ ಮೇಲೆ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಮತ್ತೆ ಸ್ಥಾಪಿಸುವುದು ನಿಜ ಉದ್ದೇಶ
ಅಮೆರಿಕ ಸಂಯುಕ್ತ ಸಂಸ್ಥಾನವು ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವುದನ್ನು ದೇಶದ ಐದು ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಇದು ಇರಾನಿನ ಸಾರ್ವಭೌಮತ್ವ ಮತ್ತು ವಿಶ್ವಸಂಸ್ಥೆಯ ಸನ್ನದಿನ(ಚಾರ್ಟರ್ ನ) ಗಂಭೀರ ಉಲ್ಲಂಘನೆಯಾಗಿದ್ದು, ಜಗತ್ತಿನಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ, ಪಶ್ಚಿಮ ಏಷ್ಯಾವನ್ನು ಅಸ್ಥಿರಗೊಳಿಸುತ್ತದೆ ಮತ್ತು ತೀವ್ರ ಆರ್ಥಿಕ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಅವು ಹೇಳಿವೆ. ಇರಾನ್

ಇರಾನ್ ಇನ್ನೇನು ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಲಿದೆ ಎನ್ನುತ್ತ ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿವೆ. ಆದರೆ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯ ಮಹಾನಿರ್ದೇಶಕ ರಾಫೆಲ್ ಗ್ರೋಸಿ ಜೂನ್ 19 ರಂದು “ಪರಮಾಣು ಶಸ್ತ್ರಾಸ್ತ್ರದತ್ತ ಚಲಿಸುವ ಒಂದು ವ್ಯವಸ್ಥಿತ ಪ್ರಯತ್ನದ ಬಗ್ಗೆ ನಮಗೆ ಯಾವುದೇ ಪುರಾವೆಯೂ ಇರಲಿಲ್ಲ” ಎಂದು ಹೇಳಿರುವುದನ್ನು ಗಮನಿಸುವುದು ಮುಖ್ಯ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸೂಚಿಸುವ ನಿರ್ಣಾಯಕ ಪುರಾವೆಗಳನ್ನು ತಾವು ಹೊಂದಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಹ ಒಪ್ಪಿಕೊಂಡಿವೆ. ಇದಲ್ಲದೆ, ಇರಾನ್ ಈಗಲೂ ಪರಮಾಣು ಅಪ್ರಸರಣ ಒಪ್ಪಂದಕ್ಕೆ (NPT) ಸಹಿದಾರನಾಗಿಯೇ ಇದೆ ಎಂಬ ಸಂಗತಿಯತ್ತ ಎಡಪಕ್ಷಗಳು ಗಮನ ಸೆಳೆದಿವೆ.

ಈ ಎಲ್ಲ ಸಂಗತಿಗಳ ಹೊರತಾಗಿಯೂ, ಇರಾನ್ ಮತ್ತು ಅಮೆರಿಕ ನಡುವಿನ ಯಾವುದೇ ಸಂಭಾವ್ಯ ಮಾತುಕತೆಗಳನ್ನು ಹಾಳುಮಾಡಲು ಇಸ್ರೇಲ್ ಜೂನ್ 12 ರಂದು ಇರಾನ್ ಮೇಲೆ ದಾಳಿ ನಡೆಸಿತು. ಈಗ, ಅಧ್ಯಕ್ಷ ಟ್ರಂಪ್ ಮಾತುಕತೆಗೆ ಎರಡು ವಾರಗಳ ಕಾಲಾವಕಾಶ ನೀಡಿದ್ದರೂ ಸಹ, ಯುಎಸ್‍ ಈ ಆಕ್ರಮಣಕಾರಿ ಕೃತ್ಯದಲ್ಲಿ ಇಸ್ರೇಲ್ ಜೊತೆ ಸೇರಿಕೊಂಡಿದೆ, ತಮ್ಮದೇ ಆದ ಗುಪ್ತಚರ ವಿಶ್ಲೇಷಣೆಗಳನ್ನು ಅಥವಾ ಯಾವುದೇ ರಾಜತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಗಮನವನ್ನೇ ಹರಿಸದೆ, ಇರಾನ್ ಮತ್ತು ಇಡೀ ಪಶ್ಚಿಮ ಏಷ್ಯಾ ಪ್ರದೇಶದ ಮೇಲೆ ಯುದ್ಧ ಹೇರುವುದೇ ಅಮೆರಿಕ-ಇಸ್ರೇಲ್ ಅಕ್ಷದ ಉದ್ದೇಶ ಎಂಬುದನ್ನು ಸ್ಪಷ್ಟವಾಗಿ ಇದು ತೋರಿಸುತ್ತದೆ. ಇರಾನನ್ನು ನಾಶಪಡಿಸುವುದು ಮತ್ತು ಪಶ್ಚಿಮ ಏಷ್ಯಾದ ಮೇಲೆ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಸ್ಥಾಪಿಸುವುದು ಮತ್ತು ಸಂಪನ್ಮೂಲಗಳ ಜಾಗತಿಕ ಹರಿವನ್ನು ನಿಯಂತ್ರಿಸುವುದೇ ನಿಜವಾದ ಉದ್ದೇಶವಾಗಿದೆ ಎಂಬುದು ಸ್ವಯಂವೇದ್ಯ. ಈ ದಾಳಿಯು ಮಿಲಿಟರಿ-ಕೈಗಾರಿಕಾ ಸಂಕೀರ್ಣದ ಹಿತಾಸಕ್ತಿಗಳನ್ನು ಪೂರೈಸುವ ಮತ್ತು ಅಂತರರಾಷ್ಟ್ರೀಯ ಬಂಡವಾಳವು ದೀರ್ಘಕಾಲದಿಂದಿರುವ ತನ್ನ ಬಿಕ್ಕಟ್ಟಿನಿಂದ ಹೊರಬರಲು ಅನುವು ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಎಡಪಕ್ಷಗಳು ಅಭಿಪ್ರಾಯ ಪಟ್ಟಿವೆ.

ಇದನ್ನೂ ಓದಿಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನ ಸೋದರಳಿಯ ಸೇರಿ ಇಬ್ಬರ ಬಂಧನ 

ಅಮೆರಿಕವು ಇರಾನ್ ಮೇಲೆ ಬಂಕರ್ಗಳನ್ನು ಧ್ವಂಸಗೊಳಿಸುವ ಬಾಂಬ್‌ಗಳನ್ನು ಬೀಳಿಸಲು ಬಿ -2 ಸ್ಟೆಲ್ತ್ ಬಾಂಬರ್‌ಗಳನ್ನು ನಿಯೋಜಿಸಿ ಇರಾಕ್‌ ಮೇಲೆ ಈ ಹಿಂದೆ ನಡೆಸಿದ ಆಕ್ರಮಣದ ಮರುಪ್ರದರ್ಶನ ಕೊಟ್ಟಿದೆ, ಇರಾಕ್‍ ಮೇಲೆಯೂ ಹೀಗೆಯೇ ಪರಿಶೀಲನೆಗೇ ಒಳಪಡಿಸದ ದಾವೆಗಳ ಮೇಲೆ ದಾಳಿ ನಡೆಸಲಾಗಿತ್ತು, ಈ ದಾವೆಗಳು ಸುಳ್ಳು ಎಂದು ನಂತರ ಸಾಬೀತಾಯಿತು. ಎರಡನೇ ಮಹಾಯುದ್ಧದ ಕೊನೆಯಲ್ಲಿ ಜಪಾನ್ ಮಾತುಕತೆಗೆ ಸಿದ್ಧವಾಗಿದ್ದರೂ ಸಹ, ಪರಮಾಣು ಶಸ್ತ್ರಾಸ್ತ್ರವನ್ನು ಬಳಸಿದ ಏಕೈಕ ದೇಶವಾದ ಅಮೆರಿಕವು ಈಗ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದಿರುವ ಎಡಪಕ್ಷಗಳು ಅಮೆರಿಕದ ದಾಳಿಯು ಸಂಘರ್ಷವನ್ನು ತೀವ್ರವಾಗಿ ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಭೀತಿಯನ್ನು ವ್ಯಕ್ತಪಡಿಸಿವೆ. ಇದು ಜಾಗತಿಕ ಶಾಂತಿ ಮತ್ತು ಜನಸಾಮಾನ್ಯರರ ಜೀವನೋಪಾಯಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ಅವು ಎಚ್ಚರಿಸಿವೆ. ವಿಶೇಷವಾಗಿ, ಇದು ತೈಲ ಆಮದು ಮತ್ತು ವಲಸೆ ಕಾರ್ಮಿಕರಿಗೆ ಅವಕಾಶಗಳಿಗಾಗಿ ಪಶ್ಚಿಮ ಏಷ್ಯಾವನ್ನು ಹೆಚ್ಚು ಅವಲಂಬಿಸಿರುವ ಭಾರತದಂತಹ ದೇಶಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಯುದ್ಧದ ಆರ್ಥಿಕ ಪರಿಣಾಮಗಳು ಬಹಳ ಹೆಚ್ಚು ತಟ್ಟುವುದು ಈಗಾಗಲೇ ಹೊರೆಹೊತ್ತಿರುವ ದುಡಿಯುವ ಜನಸಾಮಾನ್ಯರನ್ನು ಎಂದು ಹೇಳಿರುವ ಎಡಪಕ್ಷಗಳು ಭಾರತ ಸರ್ಕಾರವು ತನ್ನ ಅಮೆರಿಕ ಪರ, ಇಸ್ರೇಲ್ ಪರ ವಿದೇಶಾಂಗ ನೀತಿ ನಿಲುವನ್ನು ತಕ್ಷಣವೇ ತ್ಯಜಿಸಿ ಯುದ್ಧವನ್ನು ನಿಲ್ಲಿಸುವ ಜಾಗತಿಕ ಪ್ರಯತ್ನಗಳೊಂದಿಗೆ ಕೈಜೋಡಿಸಬೇಕು ಎಂದು ಆಗ್ರಹಿಸಿರುವ ಎಡಪಕ್ಷಗಳು ಈ ಸಾಮ್ರಾಜ್ಯಶಾಹಿ ಆಕ್ರಮಣದ ಕೃತ್ಯದ ವಿರುದ್ಧ ಪ್ರತಿಭಟನಾ ಕ್ರಮಗಳನ್ನು ತಕ್ಷಣವೇ ಸಂಘಟಿಸಲು ತಮ್ಮ ಎಲ್ಲಾ ಘಟಕಗಳಿಗೆ ಕರೆ ನೀಡಿವೆ ಮತ್ತು ನಮ್ಮ ದೇಶದ ಎಲ್ಲಾ ಶಾಂತಿಪ್ರಿಯ ಜನರು ಅಮೆರಿಕದ ದಾಳಿಯನ್ನು ಖಂಡಿಸಲು ಎಡಪಕ್ಷಗಳೊಂದಿಗೆ ಕೈಜೋಡಿಸಬೇಕು ಎಂದು ಬಹು ಕಳಕಳಿಯಿಂದ ಕೋರಿವೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಸಿಪಿಐ(ಎಂ-ಎಲ್ ಲಿಬರೇಶನ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಹಾಗೂ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೇವರಾಜನ್ ಈ ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ.

ಇದನ್ನೂ ನೋಡಿಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ

 

Donate Janashakthi Media

Leave a Reply

Your email address will not be published. Required fields are marked *