ಫೆಬ್ರವರಿ 27 ರಂದು ಪಶ್ಚಿಮ ಬಂಗಾಳದ 108 ಮುನ್ಸಿಪಲ್ ಸಂಸ್ಥೆಗಳಿಗೆ ಚುನಾವಣೆಯನ್ನು ಒಂದು ಪ್ರಹಸನದ ಮಟ್ಟಕ್ಕೆ ಇಳಿಸಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ತೃಣಮೂಲ ಕಾಂಗ್ರೆಸ್(ಟಿಎಂಸಿ) ಮತ್ತು ರಾಜ್ಯ ಆಡಳಿತದ ನಡುವಿನ ಶಾಮೀಲಿನ ಮೂಲಕ ಬಹುಪಾಲು ಮತದಾರರಿಗೆ ತಮ್ಮ ಮತ ಚಲಾಯಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಅದು ಹೇಳಿದೆ.
ಚುನಾವಣಾ ಮೋಸದ ಪ್ರಮಾಣವು ಎಷ್ಟು ತೀವ್ರವಾಗಿತ್ತು ಎಂದರೆ, ಮತದಾನದ ಕೊನೆ-ಕೊನೆಯ ಹಂತಗಳಲ್ಲಿ, ಪರಿಸ್ಥಿತಿಯು ತನ್ನು ನಿಯಂತ್ರಣದಿಂದ ಹೊರಹೋಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರತಿನಿಧಿ ಒಪ್ಪಿಕೊಂಡರು. ಮತಗಟ್ಟೆ ಏಜೆಂಟರು ಮತ್ತು ಅಭ್ಯರ್ಥಿಗಳ ಮೇಲೆ ನಿರ್ದಯವಾಗಿ ಹಿಂಸಾಚಾರ ನಡೆಸಿದ್ದನ್ನು ಮತ್ತು ಬೆದರಿಕೆಯನ್ನು ಸಮೂಹ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ. ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರದ ಅಡಿಯಲ್ಲಿ ಮತ್ತು ಪೊಲೀಸ್ ಪಡೆಯ ಸಂಪೂರ್ಣ ರಾಜಕೀಯಕರಣವಾಗಿರುವುದರಿಂದ ಯಾವುದೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.
ಟಿಎಂಸಿಯ ನಾಚಿಕೆಗೇಡಿನ ಮತ್ತು ಆಕ್ರಮಣಕಾರಿ ಕ್ರಮಗಳನ್ನು ಪ್ರಶ್ನಿಸಿ ಕೆಲವೆಡೆ ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು ಮತ್ತು ಪ್ರಜಾಪ್ರಭುತ್ವ ಮನೋಭಾವದ ನಾಗರಿಕರು ಪ್ರತಿರೋಧ ಒಡ್ಡಿದ್ದಾರೆ ಎನ್ನುತ್ತ ಸಿಪಿಐ(ಎಂ) ಅವರನ್ನು ಅಭಿನಂದಿಸಿದೆ.
ಟಿಎಂಸಿ ನೇತೃತ್ವದ ಸರ್ಕಾರದ ನಿರಂಕಶ ಅಧಿಕಾರದ ದಾಳಿಯನ್ನು ಪ್ರತಿಭಟಿಸಬೇಕು, ಇದಕ್ಕೆ ಎದುರಾಗಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಿರುವವರಿಗೆ ತಮ್ಮ ಸೌಹಾರ್ದ ಮತ್ತು ಬೆಂಬಲವನ್ನು ವ್ಯಕ್ತಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ದೇಶಾದ್ಯಂತದ ಪ್ರಜಾಸತ್ತಾತ್ಮಕ ಮನೋಭಾವದ ಜನರಿಗೆ ಮನವಿ ಮಾಡಿದೆ.