ಎಲ್ಲಿ ನೋಡಿದರೂ ಫಲವತ್ತಾದ ಕೆಂಪು ಭೂಮಿ, ಕಣ್ಣಾಯಿಸಿದ ಕಡೆಗಳಲ್ಲೆಲ್ಲಾ ಅಚ್ಚ ಹಸಿರಿನಿಂದ ಕಂಗೊಳಿಸುವ ವಿವಿಧ ರೀತಿಯ ಬೆಳೆಗಳು, ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನಿಸುವಂತಹ ವಾತಾವರಣ. ಮೇಲ್ನೋಟಕ್ಕೆ ಇಷ್ಟು ಶಾಂತವಾಗಿ ಕಾಣುವ ಈ ಪ್ರದೇಶ ಕಳೆದ ಮೂರುವರೆ ವರ್ಷಗಳಿಂದ ಹೋರಾಟದ ಕಸುವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಜೋಪಾನ ಮಾಡಿದ ಚಾರಿತ್ರಿಕ ನೆಲ. ಭೂಸ್ವಾಧೀನ
– ಹೆಚ್.ಆರ್. ನವೀನ್‌ಕುಮಾರ್ ಹಾಸನ
ಹೌದು ಇದು ಐಕ್ಯತೆ ಮತ್ತು ಬದ್ಧತೆಯ ಮೂಲಕ ಒಂದು ಐತಿಹಾಸಿಕ ಹೋರಾಟವನ್ನು ಗೆದ್ದ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಕಥೆ. ಇಂತಹ ಹಲವು ಚಳುವಳಿಗಳಿಗೆ ನಾಯಕತ್ವ ನೀಡಿದ್ದ ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರ ಅಧ್ಯಕ್ಷರಾದ ಕಾಮ್ರೇಡ್ ಅಶೋಕ್ ದವಳೆಯವರು ರೈತರನ್ನು ಅಭಿನಂದಿಸಲು ಈ ಹಳ್ಳಿಗಳಿಗೆ ಆಗಸ್ಟ್ 11 ರಂದು ಭೇಟಿ ನೀಡಿದ್ದರು. ಭೂಸ್ವಾಧೀನ
ಚನ್ನರಾಯಪಟ್ಟಣಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಸತತವಾಗಿ 1198 ದಿನಗಳ ಕಾಲ ಚಳುವಳಿಯನ್ನು ಮುನ್ನಡೆಸಿದ ಧರಣಿ ಸ್ಥಳಿಕ್ಕೆ ಭೇಟಿ ಕೊಟ್ಟರು. ಅಷ್ಟರಲ್ಲಾಗಲೇ ರೈತರು ಇದೇ ಜಾಗದಲ್ಲಿ ಮಧ್ಯಾಹ್ನ ನಡೆಯುವ ರೈತರ ಸಮಾವೇಶಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅಲ್ಲಿಂದ ರೈತ ದಂಡೊಂದು ಅಶೋಕ್ ದವಳೆಯವರನ್ನು ತಮ್ಮ ಊರುಗಳಿಗೆ, ಭೂಮಿಗಳಿಗೆ ಕರೆದೊಯ್ದರು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ: 33 ಜನರು ಸಾವು
ದ್ರಾಕ್ಷಿ ಅದರಲ್ಲೂ ಈ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದಾದ ಬೆಂಗಳೂರು ಬ್ಲೂ, ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ಹೂವುಗಳು ಇವುಗಳನ್ನು ಇಲ್ಲಿಯ ರೈತರು ಒಂದಡೆ ಪ್ರಕೃತಿ ವಿಕೋಪ ಮತ್ತೊಂದೆಡೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಕಾರ್ಪೋರೇಟ್ ಕಂಪನಿಗಳ ದಾಳಿಗಳನ್ನು ಎದುರಿಸಿ ಎಲ್ಲಾ ಬೆಳೆಗಳನ್ನು ಮಕ್ಕಳಂತೆ ಬೆಳೆಸಿದ್ದಾರೆ. ತಮ್ಮ ಬೆವರು ರಕ್ತ ಬಸಿದು ಬೆಳೆ ಬೆಳೆದಿದ್ದಾರೆ. ಇಂತಹ ಬೆಳೆ ಬೆಳೆಯುವ ಫಲವತ್ತಾದ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳಲು ಮುಂದಾಗಿತ್ತಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭೂಸ್ವಾಧೀನ
ಈ ಭಾಗದ ಭೂಮಿ ಕೇವಲ ಫಲವತ್ತಾಗಿರುವುದು ಮಾತ್ರವಲ್ಲ ಇಲ್ಲಿಯ ರೈತರು ಕೃಷಿಯನ್ನೇ ನಂಬಿ ಬದುಕುತ್ತಿರುವುದರಿಂದ ಅದಕ್ಕೆ ಬೇಕಾದ ರೀತಿಯಲ್ಲಿ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ. ಇವುಗಳಿಂದಾಗಿ ಉತ್ತಮ ಇಳುವಳಿಯನ್ನು ಕಾಣುತ್ತಿದ್ದರೂ ಅವುಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬುದು ಇವರನ್ನು ಸದಾ ಕಾಡುತ್ತಿದೆ. ಭೂಸ್ವಾಧೀನ
ಹೋರಾಟನಿರತ ಹಳ್ಳಿಗಳಿಗೆ ಭೇಟಿ, ರೈತರೊಂದಿಗೆ ಸಂವಾದ ನಡೆಸಿದ ನಂತರ ಮತ್ತೆ ಚನ್ನರಾಯಪಟ್ಟಣದ ಧರಣಿ ಸ್ಥಳಕ್ಕೆ ಆಗಮಿಸಿ ಅಲ್ಲಿ ಆಯೋಜಿಸಲಾಗಿದ್ದ ರೈತರ ಸಭೆಯನ್ನು ಉದ್ದೇಶಿಸಿ ಕಾಮ್ರೇಡ್ ಅಶೋಕ್ ದವಳೆಯವರು ಮಾತನಾಡಿದರು. ಅವರ ಮಾತಿನ ಪೂರ್ಣ ಪಾಠ ಇಲ್ಲಿದೆ. ಭೂಸ್ವಾಧೀನ
ಪ್ರೀತಿಯ ರೈತ ಬಂದುಗಳೆ ನಿರಂತರವಾಗಿ 1198 ದಿನಗಳ ಕಾಲ ಐತಿಹಾಸಿ ಕೋರಾಟವನ್ನು ನಡೆಸಿದ 13 ಗ್ರಾಮದ ರೈತರಿಗೂ ಹಾಗೂ ಸಂಘಟನೆಗಳಿಗೂ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾದಿಂದ ಹೃದಯ ತುಂಬಿದ ಅಭಿನಂದನೆಗಳು. ಬಲವಂತವಾಗಿ 1777 ಎಕ್ಕರೆ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದು ನಿಮ್ಮೆಲ್ಲರ ಐಕ್ಯತೆ ಮತ್ತು ದೃಡವಾದ ಹೋರಾಟಕ್ಕೆ ಸಂದ ಜಯ. ಈ ಗೆಲುವು ಕೇವಲ ದೇವನಹಳ್ಳಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಗೆಲುವಲ್ಲ, ಇದು ಇಡೀ ಕರ್ನಾಟಕದ ರೈತರಿಗೆ ಸಿಕ್ಕ ಗೆಲುವು, ಅಷ್ಟು ಮಾತ್ರವಲ್ಲದೆ ಇದು ದೇಶದ ರೈತರಿಗೆ ಸಿಕ್ಕ ಗೆಲುವು. ಹಾಗಾಗಿ ದೇಶದ ರೈತರ ಪರವಾಗಿ ನಿಮಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ.
ಜುಲೈ 15 ರಂದು ಮಾನ್ಯ ಮುಖ್ಯಮಂತ್ರಿಗಳು ಭೂಸ್ವಾಧೀನವನ್ನು ಕೈಬಿಡುವುದಾಗಿ ಘೋಷಿಸಿದ ನಂತರದ ಒಂದು ವಾರದಲ್ಲಿ ದೆಹಲಿಯಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಹೋರಾಟದ ಗೆಲುವಿನ ಬಗ್ಗೆ ಪ್ರಸ್ತಾಪ ಮಾಡಿ ಸಭೆಯಲ್ಲಿದ್ದವರೆಲ್ಲಾ ಎದ್ದುನಿಂತು ಕರತಾಡನ ಮಾಡುವ ಮೂಲಕ ನಿಮ್ಮನ್ನು ಅಭಿನಂದಿಸಿದರು.

ಇಂದು ಬೆಳಗ್ಗಿನಿಂದ ಚನ್ನರಾಯಪಟ್ಟಣ ಹೋಬಳಿಯ ಹಲವು ಹಳ್ಳಿಗಳಿಗೆ ನಾನು ಭೇಟಿ ನೀಡಿದ್ದೇನೆ, ಇಲ್ಲಿಯ ರೈತರು ಅತ್ಯುತ್ತಮ ಕೃಷಿಕರು ತನ್ನ ಫಲವತ್ತಾದ ಭೂಮಿಯಲ್ಲಿ ವಿಶಿಷ್ಟ ತಳಿಯಾದ ಬೆಂಗಳೂರು ಬ್ಲೂ ದ್ರಾಕ್ಷಿ, ವಿವಿಧಿ ರೀತಿಯ, ಹಣ್ಣುಗಳು ತರಕಾರಿ ಬೆಳೆಗಳನ್ನು ಅತ್ಯುತ್ತಮವಾಗಿ ಬೆಳೆಯಲಾಗಿದೆ. ಇಂತಹ ಉತ್ಕೃಷ್ಟ ಭೂಮಿಯನ್ನು ನಿಮ್ಮೆಲ್ಲರ ಒಗ್ಗಟ್ಟಿನ ಹೋರಾಟದಿಂದ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಈ ಹಿಂದೆ ಅಂದರೆ 2022 ಜೂನ್ 22 ರಂದು ನಿಮ್ಮ ಧರಣಿ 84 ನೇ ದಿನಕ್ಕೆ ಬಂದಿದ್ದಾಗ ನಾನು ಇದೇ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ್ದು ಈಗ ನನಗೆ ನೆನಪಾಗುತ್ತಿದೆ.
ಐತಿಹಾಸಿಕ ಹೋರಾಟದ ಪ್ರತಿಫಲವಾಗಿ ರಾಜ್ಯದ ಮುಖ್ಯಮಂತ್ರಿಗಳು ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಇದು ಇನ್ನೂ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ, ಸರ್ಕಾರದ ಅಧಿಕೃತ ಆದೇಶವಾಗಿ ಲಿಖಿತರೂಪದಲ್ಲಿ ನಮ್ಮ ಕೈ ಸೇರಿಲ್ಲ. ಅದು ನಮ್ಮ ಕೈಸೇರಿದಾಗ ಮಾತ್ರ ನಾವು ವಿಜಯೋತ್ಸವವನ್ನು ಆಚರಿಸಬಹುದು. ರಾಜ್ಯ ಸರ್ಕಾರದಲ್ಲಿರುವ ಕೆಲವರು ಮತ್ತು ಕೆಲವು ಕಾರ್ಪೋರೇಟ್ ಕಂಪನಿಗಳು ಇಂತಹ ಆದೇಶ ಹೊರಬಿದ್ದರೆ ಮುಂದೆ ಎಲ್ಲಿಯೂ ನಾವುಗಳು ಭೂಸ್ವಾಧೀನ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ರಾಜ್ಯದ ರೈತರು ಎಲ್ಲೆಡೆ ಭೂಸ್ವಾಧೀನದ ವಿರುದ್ಧ ನಿರಂತರವಾಗಿ ಹೋರಾಟಕ್ಕಿಳಿಯುತ್ತಾರೆ ಎಂದು ಪ್ರಚಾರಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಒಂದು ಐತಿಹಾಸಿಕ ಹೋರಾಟದ ಅನುಭವದ ಕುರಿತು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕಂಪನಿಗೆ ರಾಜ್ಯದ ರಾಯಘಡ ಜಿಲ್ಲೆಯ (ದಕ್ಷಿಣ ಮುಂಬೈ) ಸುಮಾರು 10 ಸಾವಿರ ಹೆಕ್ಟೇರ್ ಅಂದರೆ ಸುಮಾರು 25 ಸಾವಿರ ಎಕ್ಕರೆಯಷ್ಟು ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವುದಾಗಿ, 3 ತಾಲ್ಲೂಕುಗಳ 45 ಹಳ್ಳಿಗಳ ಸುಮಾರು 2.5 ಲಕ್ಷ ಜನಸಂಖ್ಯೆಯಿರುವ 50 ಸಾವಿರ ಕುಟುಂಬಕ್ಕೆ ಅಲ್ಲಿನ ಕಾಂಗ್ರೇಸ್ ರಾಜ್ಯ ಸರ್ಕಾರ ನೋಟೀಸ್ ನೀಡಿತು.
ಇದರ ವಿರುದ್ಧ ಎಐಕೆಎಸ್ ನೃತೃತ್ವದಲ್ಲಿ ಇತರೆ ಕಾರ್ಮಿಕ, ಮಹಿಳಾ, ಯುವಜನ ಸಂಘಟನೆಗಳ ಬೆಂಬಲವನ್ನು ಪಡೆದು ಹೋರಾಟ ಆರಂಭಿಸಲಾಯಿತು. ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತ ಮೋಹನ್ ಅವರ ಜಮೀನಿನಲ್ಲಿ 15-20 ಜನ ಮೊದಲ ಸಭೆ ಸೇರಿದಂತೆ ಮಹಾರಾಷ್ಟçದಲ್ಲಿಯೂ ಒಂದು ಗ್ರಾಮದಿಂದ ಆರಂಭವಾಯಿತು. ಕ್ರಮೇಣ ಇದು ಬೆಳೆಯುತ್ತಾ ಹೋಯಿತು. ಅಂತಿಮವಾಗಿ ಒಂದು ಲಕ್ಷ ರೈತರ ಮೆರವಣಿಗೆ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿತು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಸಿಪಿಐಎಂನ ಮುಖಂಡರಾದ ಸೀತಾರಾಂ ಯೆಚೂರಿಯವರು ಭಾಗವಹಿಸಿ ರೈತರಿಗೆ ಬೆಂಬಲ ನೀಡಿ, ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಮಾಡುವುದಾಗಿ ಘೋಷಿಸಿದರು. ಹೋರಾಟಕ್ಕೆ ಮಣಿದ ಸರ್ಕಾರ ಭೂಸ್ವಾಧೀನವನ್ನು ಸಂಪೂರ್ಣ ಕೈಬಿಟ್ಟಿತು. ನಾವು ಈ ಹೋರಾಟವನ್ನು 2007 ರಲ್ಲಿ ಆರಂಭಿಸಿ 2011 ರಲ್ಲಿ ಮುಗಿಸಿದೆವು ನೀವು ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರು ನಿಮ್ಮ ಹೋರಾಟವನ್ನು 2022 ರಿಂದ ಆರಂಭಿಸಿ 2025 ರಲ್ಲಿ ಜಯ ಕಾಣುತ್ತಿದ್ದೀರಿ ಎಂದರು.
ಭೂಮಿ ನಮ್ಮ ತಾಯಿ ಇದ್ದಂತೆ, ನಮ್ಮ ತಾಯಿಯನ್ನು ಹೇಗೆ ಮಾರಾಟ ಮಾಡುವುದಿಲ್ಲವೋ ಹಾಗೇ ತಾಯಿ ಸಮಾನವಾದ ಫಲವತ್ತಾದ ಭೂಮಿಯನ್ನು ಮಾರಾಟಮಾಡುವುದಿರಲ್ಲಿ ಆದಿಕ್ಕಿನಲ್ಲಿ ಯೋಜಿಸುವುದು ಸಾಧ್ಯವಿಲ್ಲ. ಸರ್ಕಾರ ಭೂಮಿಗೆ ಪರಿಹಾರವಾಗಿ ಎಷ್ಟೇ ಹಣವನ್ನು ಕೊಡಬಹುದು, ಅದು ಆರು ತಿಂಗಳಲ್ಲಿ ಇಲ್ಲವಾಗುತ್ತದೆ. ಒಂದು ಕಡೆ ಭೂಮಿಯೂ ಇಲ್ಲದೆ ಮತ್ತೊಂದು ಕಡೆ ಕೈಯಲ್ಲಿ ಕಾಸೂ ಇಲ್ಲದೆ ಅತಂತ್ರರಾಗಿ ನರಳಾಡುತ್ತಿರುವ ಸಾವಿರಾರು ಪ್ರಕರಣಗಳು ದೇಶದಾದ್ಯಂತ ಇವೆ. ಈ ಪ್ರದೇಶದ ಯುವಕ ಯುವತಿಯರು ಎಂಜಿನಿಯರಿಂಗ್ ಪದವೀದರರಿದ್ದಾರೆ, 10-15 ಸಾವಿರ ರೂಪಾಯಿಗಳಿಗೆ ಯಾವುದೋ ಕಂಪನಿಗಳಲ್ಲಿ ಗುಲಾಮರಂತೆ ಕೆಲಸ ಮಾಡುವ ಬದಲಾಗಿ ನಮ್ಮ ಸ್ವಂತ ಭೂಮಿಯಲ್ಲಿ ಸ್ವಾವಲಂಬಿಯಾಗಿ ಕೃಷಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆ.
ಮಹಾರಾಷ್ಟ್ರದಲ್ಲಿ 45 ಗ್ರಾಮಗಳಲ್ಲಿ ಸರ್ಕಾರ ಭೂಮಿಯನ್ನು ಬಿಟ್ಟು ಕೊಡುವವರು ಮತ್ತು ಕೊಡದವರ ಜನಮತಗಣನೆಯೊಂದನ್ನು ನಡೆಸಿತು. ಇದರಲ್ಲಿ ಶೇಖಡ 98 ರಷ್ಟು ರೈತರು ನಾವು ಯಾವುದೇ ಕಾರಣಕ್ಕೂ ಈ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖೆಶ್ ಅಂಬಾನಿ ತಮ್ಮ ದಲ್ಲಾಳಿಗಳನ್ನು ರೈತರ ವಿರುದ್ಧ ಚೂಬಿಟ್ಟರು, ಆದರೂ ಇವೆಲ್ಲವಕ್ಕೂ ಜಗ್ಗದ ರೈತರು ಐಕ್ಯತೆಯನ್ನು ಪ್ರದರ್ಶಿಸಿ ನಾಲ್ಕು ವರ್ಷಗಳ ನಂತರ ಭೂಮಿಯನ್ನು ಉಳಿಸಿಕೊಂಡರು. ಚನ್ನರಾಯಪಟ್ಟಣದ ಎಲ್ಲಾ ರೈತರಿಗೆ ನನ್ನ ಮನವಿ ಏನೆಂದರೆ ಇದುವರೆಗೂ ಉಳಿಸಿಕೊಂಡು ಬಂದಿರುವ ನಿಮ್ಮ ಐಕ್ಯತೆಯನ್ನು ಹೀಗೇ ಮತ್ತೊಷ್ಟು ಗಟ್ಟಿಯಾಗಿ ಮುಂದುವರೆಸಿ, ಭೂಸ್ವಾಧೀನವನ್ನು ಸಂಪೂರ್ಣ ಕೈಬಿಟ್ಟಿರುವ ಆಧೇಶವನ್ನು ಪಡೆಯಲು ಸಾಧ್ಯವಾಗಬೇಕು. ಅದಕ್ಕಾಗಿ ಈ ಧರಣಿ ಸ್ಥಳವನ್ನೂ ಇನ್ನೂ ಉಳಿಸಿಕೊಂಡಿರುವ ನೀವು ಅಭಿನಂದನಾರ್ಹರು.
ರೈತ ಮುಕುಂದ ಅವರ ಮಾವಿನ ತೋಟಕ್ಕೆ ಭೇಟಿ ನೀಡಿದಾಗ ಅವರು ಈ ವರ್ಷ ಮಾವಿನ ಹಣ್ಣಿನ ಬೆಲೆ ಸಂಪೂರ್ಣ ಕುಸಿದಿರುವುದು ಮತ್ತು ಅಮೇರಿಕಾದಿಂದ ತಿರಸ್ಕರಿಸಲ್ಪಟ್ಟು ವಾಪಸ್ ಬಂದ ವಿಷಯವನ್ನು ತಿಳಿಸಿದರು. ನಾನು ಕಳೆದ ಮೂರು ದಿನಗಳ ಹಿಂದೆ ತಮಿಳುನಾಡು ಪ್ರವಾಸದಲ್ಲಿದ್ದೆ. ಇಲ್ಲಿಯೂ ಇಂತಹದ್ದೇ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಗಿರಿ ಜಿಲ್ಲೆಯ ತೋತಾಪುರಿ ಮಾವಿನ ಹಣ್ಣಿನ ಒಂದು ಟನ್ ಬೆಲೆ 16 ಸಾವಿರ ರೂ ಇತ್ತು. ಈಗ ಅದು ಒಂದು ಟನ್‌ಗೆ 4 ಸಾವಿರ ರೂಗೆ ಬಂದಿದೆ ಕರ್ನಾಟಕದಲ್ಲಿ 2500 ರೂಗೆ ಕುಸಿದಿದೆ. ರೈತರು ಎಷ್ಟೇ ಕಷ್ಟಪಟ್ಟರು ಅವರು ಬೆಳೆದ ಬೆಳೆಗಳಿಗೆ ಮಾತ್ರ ಸರಿಯಾದ ಬೆಲೆ ಸಿಗುತ್ತಿಲ್ಲ. ಮಹಾರಾಷ್ಟçದಲ್ಲಿಯೂ ಟೊಮೊಟೋ, ಈರುಳ್ಳಿಗಳನ್ನು ಬೆಲೆಯಿಲ್ಲದೆ ರಸ್ತೆಗೆ ಸುರಿಯುವಂತಹ ಪರಿಸ್ಥಿತಿ ಹಲವು ಬಾರಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಗಳು ರೈತರ ನೆರವಿಗೆ ದಾವಿಸುತ್ತಿಲ್ಲ.
ಒಂದೆಡೆ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು ಮತ್ತು ಯಂತ್ರೋಪಕರಣಗಳ ಬೆಲೆಗಳು ಗಗನಕ್ಕೇರಿವೆ. ವಿದ್ಯುತ್ ಡಿಜಿಟಲ್ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದಾಗಿ ರೈತರಿಗೆ ವಿದ್ಯುತ್ ಬೆಲೆಯೂ ವಿಪರೀತ ಹೆಚ್ಚಾಗಿದೆ. ಮೊದಲು ಇಂದು ಸಾವಿರ ರೂ ಬಿಲ್ ಬರುತ್ತಿದ್ದ ಮನೆಗೆ ಈಗ ನಾಲ್ಕು ಸಾವಿರ ರೂಗಳು ಬರುತ್ತಿದೆ. ಹೀಗಾಗಿ ಕೃಷಿ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಗುತ್ತಿದ್ದು ಅದಕ್ಕೆ ತಕ್ಕಂತೆ ರೈತರ ಬೆಳೆಗಳಿಗೆ ಬೆಲೆ ನಿಗದಿಯಾಗುತ್ತಿಲ್ಲ. ಇದರಿದ ರೈತರು ಸಂಘಷ್ಟವನ್ನು ಅನುಭವಿಸುತ್ತಿದ್ದಾರೆ.

ಆದ್ದರಿಂದಲೇ ಅಖಿಲ ಭಾರತ ಕಿಸಾನ್ ಸಭಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕಾದರೆ ರೈತರು ಬೆಳೆದ ಬೆಳೆಗಳಿಗೆ ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷರಾಗಿದ್ದ, ಕೃಷಿ ತಜ್ಞ ಡಾ.ಎಂ.ಎಸ್. ಸ್ವಾಮಿನಾಥನ್ ಅವರ ಆಯೋಗದ ಶಿಫಾರಸ್ಸಿನಂತೆ ಸಿ2+50% ಸೂತ್ರದ ಆಧಾರದಲ್ಲಿ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇಕಡ 50 ರಷ್ಟು ಲಾಬಾಂಶವನ್ನು ಸೇರ್ಪಡೆ ಮಾಡಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ಇದಕ್ಕೆ ಕಾನೂನಿನ ಗ್ಯಾರೆಂಟಿ ನೀಡಬೇಕೆಂದು ಒತ್ತಾಯಿಸಿ ಚಳುವಳಿ ನಡೆಸುತ್ತಿದ್ದೇವೆ.
2006 ರಲ್ಲಿ ಸ್ವಾಮಿನಾಥನ್ ಅವರ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೇಸ್ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ 2013 ರವರೆಗೂ ಅಧಿಕಾರದಲ್ಲಿದ್ದರೂ ಇದರ ಕುರಿತು ಒಂದು ದಿನವೂ ಸಂಸತ್ತಿನಲ್ಲಿ ಚರ್ಚಿಸಲಿಲ್ಲ. ಆನಂತರ ಈ ವರದಿಯನ್ನು ಜಾರಿಗೊಳಿಸುತ್ತೇನೆಂದು ಚುನಾವಣೆಯಲ್ಲಿ ಭರವಸೆ ನೀಡಿ 2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 11 ವರ್ಷಗಳಿಂದ ಸತತವಾಗಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದರೂ ಈ ಕುರಿತು ಮಾತನಾಡಲು ತಯಾರಿಲ್ಲ. ಮಾತ್ರವಲ್ಲ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಡಾ.ಸ್ವಾಮಿನಾಥನ್ ಅವರ ವರದಿಯನ್ನು ಜಾರಿಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋಟ್‌ಗೆ ಪ್ರಮಾಣಪತ್ರ ಸಲ್ಲಿಸಿದರು. ಅಂದರೆ ಇದುವರೆಗೂ ಅಧಿಕಾರವನ್ನ ನಡೆಸಿದ ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಸರ್ಕಾರಗಳು ತಮ್ಮ ಅಧಿಕಾರವನ್ನು ರೈತರ ಪರವಾಗಿ ಬಳಕೆ ಮಾಡಲಿಲ್ಲ ಎಂಬುದು ಸ್ಪಷ್ಟವಾಗಿದೆ.
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕ್ಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ, ಆನಂತರದ ಚುನಾವಣೆಯಲ್ಲಿ ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂತು. ಆದರೂ ಇರ‍್ಯಾರೂ ಅಧಿಕಾರ ಬಂದ ಕೂಡಲೇ ನಮ್ಮ ವಿಚಾರವನ್ನು ಗಮನಿಸಲಿಲ್ಲ, ಈಗ ಸಿಕ್ಕಿರುವ ಜಯ ಸಿದ್ದರಾಮಯ್ಯನವರ ಅಥವಾ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷದಿಂದ ಸಿಕ್ಕಿರುವುದಲ್ಲಾ ಬದಲಾಗಿ ನಮ್ಮ ಅಚಲ ಹೋರಾಟದಿಂದ ನಾವು ನಮ್ಮ ಹಕ್ಕನ್ನು ಕಿತ್ತುಕೊಂಡಿದ್ದೇವೆ.
ಈಗ ನಮ್ಮ ಮುಂದೆ ಮತ್ತೊಂದು ದೊಡ್ಡ ವಿಷಯವಿದೆ. ಅದೇನೆಂದರೆ ಅಮೇರಿಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ವಿಧಿಸುತ್ತಿರುವ ಶೇ 25 ರಿಂದ 50 ರಷ್ಟು ಸುಂಕ ಹೇರಿಕೆ. ಇದರಿಂದ ಭಾರತದ ಎಲ್ಲಾ ರೀತಿಯ ಬೆಳೆಗಾರರು ಮತ್ತು ಬಹಳ ಮುಖ್ಯವಾಗಿ ಹೈನುಗಾರಿಕೆಯ ರೈತರು ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ. ದೇಶದಲ್ಲಿ ಸುಮಾರು 8 ಕೋಟಿ ಹೈನುಗಾರಿಕಾ ರೈತರಿದ್ದಾರೆ. ಅಮೇರಿಕಾ ನಮ್ಮ ಕೃಷಿ ಉತ್ಪನ್ನಗಳ ಮೇಲೆ ದೊಡ್ಡಪ್ರಮಾಣದಲ್ಲಿ ಸುಂಕವನ್ನು ವಿಧಿಸುತ್ತಿರುವಾಗಲೇ ವಿದೇಶಗಳಿಂದ ನಮ್ಮ ದೇಶಕ್ಕೆ ಅತ್ಯಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಮಾನ್ಯ ಪ್ರದಾನಿ ಮೋದಿಯವರು ಸುಂಕದ ವಿಷಯದ ಕುರಿತು ಮಾತನಾಡಲು ಸ್ವಲ್ಪ ಬಾಯಿ ತೆರೆದಿದ್ದಾರೆ ಆದರೆ ಅವರು ಇದಕ್ಕೆ ಕಾರಣವಾಗಿರುವ ಟ್ರಂಪ್ ಬಗ್ಗೆ ಮಾತನಾಡುತ್ತಿಲ್ಲ ಮತ್ತು ಈ ನೀತಿಗಳನ್ನು ಖಂಡಿಸುತ್ತಿಲ್ಲ. ಇದರಿಂದ ದೇಶದ ರೈತರ ಹಿತವನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ಹಿಂದೆ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನಡೆದ ಸಂದರ್ಭದಲ್ಲಿ ಭಾರತದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಟ್ರಂಪ್ ಗೆಲ್ಲಬೇಕೆಂದು ಯಾಗ ಯಜ್ಞಗಳನ್ನು ನಡೆಸಿದ್ದನ್ನು ನಾವು ಮರೆಯಲು ಸಾಧ್ಯವಿಲ್ಲ. ಸ್ವತಹಾ ಮೋದಿಯವೇ ಅಮೇರಿಕಾಕ್ಕೆ ಹೋಗಿ “ಆಬ್ ಕಿ ಬಾರ್, ಟ್ರಂಪ್ ಸರ್ಕಾರ್” ಎಂದು ಚುನಾವಣಾ ಪ್ರಚಾರ ಮಾಡಿ ಬಂದಿದ್ದರು.
ಈಗ ದೇಶದ ಪ್ರಜಾಪ್ರಭುತ್ವ ಅತ್ಯಂತ ಅಪಾಯದಲ್ಲಿದೆ. ಚುನಾವಣಾ ಆಯೋಗದ ಕೆಲಸದಿಂದಾಗಿ ಬೆಂಗಳೂರಿನ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷದಷ್ಟು ಮತಗಳು ನಕಲಿಯಾಗಿವೆ. ಚುನಾವಣಾ ಆಯೋಗವು ಬಿಜೆಪಿಯ ಬಿ ಟೀಮ್ ಆಗಿ ಕೆಲಸ ನಿರ್ವಹಿಸುತ್ತಿದೆ. ಧರ್ಮದ ಹೆಸರಿನಲ್ಲಿ ಹಿಂದು ಮುಸ್ಲೀಂ ಎಂದು, ಜಾತಿಯ ಹೆಸರಿನಲ್ಲಿ ಜನಸಾಮಾನ್ಯರ ರೈತರ ಐಕ್ಯತೆಯನ್ನು ಬಿಜೆಪಿ ಒಡೆಯುತ್ತಿದೆ.
ಇಂತಹ ಎಲ್ಲಾ ಜನವಿರೋಧಿ ನೀತಿಗಳ ವಿರುದ್ಧ ರೈತ ಸಮುದಾಯ ಒಗ್ಗಟ್ಟಿನಿಂದ ಹೊಸ ದಾರಿ ಹುಡುಕಬೇಕಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಹುತಾತ್ಮರಾಗಿದ್ದಾರೆ. ಅದರಲ್ಲಿ ಅತ್ಯಂತ ಚಿಕ್ಕವಯಸ್ಸಿನಲ್ಲೇ ಹುತಾತ್ಮರಾದ ಭಗತ್‌ಸಿಂಗ್ ಸ್ವಾತಂತ್ರ್ಯದ ಕುರಿತು ಹೀಗೆ ಹೇಳುತ್ತಾನೆ “ಸ್ವಾತಂತ್ರ್ಯಎಂದರೆ ಕೇವಲ ಯಜಮಾನರ ಬದಲಾವಣೆ ಮಾತ್ರ ಎಂದಾದರೆ, ಪುರಾತನ ಶೋಷಣಾ ವ್ಯವಸ್ಥೆ ಹಾಗೆ ಉಳಿಯುತ್ತದೆ, ಈ ವ್ಯವಸ್ಥೆಯನ್ನು ನಾಶ ಮಾಡದೆ ಹೊಸ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ”. ಇಂದು ಎಲ್ಲರ ಸಮಸ್ಯೆಗಳಿಗೂ ಲಾಭಕೋರ, ಶೋಷಕ ಬಂಡವಾಳಶಾಹಿ ಮತ್ತು ಭೂಮಾಲಕ ವ್ಯವಸ್ಥೆಯೇ ನೇರ ಕಾರಣವಾಗಿದೆ. ಮುಂದುವರೆದು ಭಗತ್ ಸಿಂಗ್ 1931 ಫೆಬ್ರವರಿ 2 ರಲ್ಲಿ ‘ಯುವ ರಾಜಕೀಯ ಕಾರ್ಯಕರ್ತರಿಗಾಗಿ’ ಎಂಬ ದೀರ್ಘ ಲೇಖನದಲ್ಲಿ ನಮ್ಮೆಲ್ಲಾ ಸಮಸ್ಯೆಗಳಗೆ “ಸಮಾಜವಾದ”ವೇ ಪರಿಹಾರ ಎಂದಿದ್ದಾರೆ. ಅಂತಹ ಹೊಸ ದಾರಿಗಾಗಿ ನಾವೆಲ್ಲರೂ ಐಕ್ಯತೆಯಿಂದ ಚಳುವಳಿಯನ್ನು ಮುಂದುವರೆಸಬೇಕಾಗಿದೆ.
ಇಂಕ್ವಿಲಾಬ್ ಜಿಂದಾಬಾದ್…
ಅಶೋಕ್ ದವಳೆಯವರ ಪ್ರವಾಸದ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್.ಆರ್.ನವೀನ್‌ಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಪ್ರಭಾ ಎನ್.ಬೆಳವಂಗಲ, ರಾಜ್ಯ ಸಮಿತಿ ಸದಸ್ಯರಾದ ಎರ್.ಚಂದ್ರತೇಜಸ್ವಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಪಿಐಎಂ ಕಾರ್ಯದರ್ಶಿ ನರಸಿಂಹ ಮೂರ್ತಿ, ನಂಜಪ್ಪ, ಕಾರಳ್ಳಿ ಶ್ರೀನಿವಾಸ್, ಪಿ.ಎ.ವೆಂಕಟೇಶ್, ರುದ್ರಾರಾದ್ಯ, ನಟರಾಜ್ ವೆಂಕಟರಾಜ್, ಮೋಹನ್ ಬಾಬು, ಸಿ.ಎಚ್.ರಾಮಕೃಷ್ಣ, ರಾಜಮ್ಮ, ಮಾರೇಗೌಡ, ಅಶ್ವತಪ್ಪ, ಮುಕುಂದ, ಮೋಹನ್, ವೆಂಕಟಮ್ಮ, ಮುನಿಯಮ್ಮ, ಪಿಳ್ಳಣ್ಣ, ನಂಜೇಗೌಡ, ಮಂಜುನಾಥ್, ಮುನಿಶಾಮಣ್ಣ, ಮಾರಣ್ಣಗೌಡ ಮತ್ತಿತರರು ಇದ್ದರು.
ಇದನ್ನೂ ನೋಡಿ: ಪುಷ್ಪಗಳಲ್ಲಿ ಅರಳಿದ ‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ’Janashakthi Media
