ವನ್ಯಜೀವಿಧಾಮದಲ್ಲಿ ಕಾನೂನು ಬಾಹಿರ ಚಟುವಟಿಕೆ: ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆ

ಕಾರ್ಕಳ: ಸೋಮೇಶ್ವರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಕ್ಟೋಬರ್‌ 8ರಂದು ಪರಿಸರ ಸೂಕ್ಷ್ಮ ಪ್ರದೇಶ-ಮೇಲ್ವಿಚಾರಣಾ ಸಮಿತಿಗೆ ದೂರು ಸಲ್ಲಿಕೆಯಾಗಿದೆ.

ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಮೂಲಕ, ಪರಿಸರ ಕಾರ್ಯಕರ್ತ ನಾಗರಾಜ ಕೂವೆ ಮತ್ತು ತಂಡ ಎರಡು ಪ್ರತ್ಯೇಕ ದೂರುಗಳನ್ನು ನೀಡಿದೆ.

‘2020ರ ಆಗಸ್ಟ್ 28ರಂದು ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಆಗಿದ್ದು, ಅದರಲ್ಲಿನ ಸೆಕ್ಷನ್ 4ರ ಪ್ರಕಾರ ಹೊಸತಾಗಿ ರೆಸಾರ್ಟ್ ಮಾಡಲು ಅವಕಾಶವಿಲ್ಲ. ಆದರೂ ಎರಡು ಸಂಸ್ಥೆಗಳು ವಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದು ಪರಿಸರ ಸಂರಕ್ಷಣಾ ಕಾಯ್ದೆ- 1986 ರ ಸ್ಪಷ್ಟ ಉಲ್ಲಂಘನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವಿದ್ಯುತ್‌ ಅಸಮರ್ಪಕ: ಬೆಸ್ಕಾಂ ವಿರುದ್ದ ರೈತ ಸಂಘ ಪ್ರತಿಭಟನೆ

ಯಾವುದೇ ಅನುಮತಿ ಇಲ್ಲದಿದ್ದರೂ ವ್ಯಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಕಾಳಿಂಗ ಸರ್ಪವನ್ನು ಸರಕಿನಂತೆ ಬಳಸಿಕೊಳ್ಳುತ್ತಿದ್ದಾರೆ. ಅವರ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ಬಹಿರಂಗವಾಗಿಯೇ ಕಂಡುಬರುತ್ತಿದೆ. ಅರಣ್ಯ ಮಂತ್ರಿಗಳಿಗೆ ಈ ಕುರಿತು ದೂರು ನೀಡಿದ ನಂತರ, ವೆಬ್‌ಸೈಟ್‌ ನಲ್ಲಿನ ಫೋಟೋ, ವಿಡಿಯೋಗಳನ್ನು ತೆಗೆದು ಹಾಕಿ ಸಾಕ್ಷಿ ನಾಶದ ಪ್ರಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂಸ್ಥೆಯು ಕಟ್ಟಿರುವ ಕಾನೂನು ಬಾಹಿರ ಕಟ್ಟಡ ನಿರ್ಮಾಣಗಳನ್ನು ತೆರವುಗೊಳಿಸಲು ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪರಿಸರ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿರುವ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಪರಿಸರ ಸಂರಕ್ಷಣೆ ಮತ್ತು ಪರಿಸರ ಸೂಕ್ಷ್ಮ ವಲಯದ ಪಾವಿತ್ರ್ಯದ ರಕ್ಷಣೆಗಾಗಿ ನಾವು ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಪರಿಸರ ಮತ್ತು ಸಾಮಾಜಿಕ ಕಾರ್ಯಕರ್ತರಾದ ನಾದ ಮಣಿನಾಲ್ಕೂರು, ಸಂಚಿತ್ ಜೈನ್, ಆತೀಶ್ ಎಚ್.ವೈ., ನಿಖಿಲ್, ಸಂದೀಪ್ ಉಪಸ್ಥಿತರಿದ್ದರು.

ಇದನ್ನೂ ನೋಡಿ: ವಕೀಲ ಶೂ ಎಸೆದಿರುವುದು ಆಕಸ್ಮಿಕವಲ್ಲ, ಅದರ ಹಿಂದೆ ವ್ಯವಸ್ಥಿತವಾದ ಪಿತೂರಿಯಿದೆ – ಇಂದೂಧರ ಹೊನ್ನಾಪುರ

Donate Janashakthi Media

Leave a Reply

Your email address will not be published. Required fields are marked *