ಬೆಂಗಳೂರು: ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ದಾಖಲಾಗಿದೆ. ಯತ್ನಾಳ್ ವಿರುದ್ಧ ಪಾಲಿಕೆ ನಾಮನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಎಂಬುವವರು ದೂರು ಕೊಟ್ಟಿದ್ದಾರೆ.
ಶಾಸಕ ಯತ್ನಾಳ್ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಇತ್ತೀಚೆಗೆ ವಿಜಯಪುರದಲ್ಲಿ ನಡೆದಿದ್ದ ವಕ್ಫ್ ಹಠಾವೋ ದೇಶ ಬಚಾವೋ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಷಣ ಮಾಡಿದ್ದರು. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಜೊತೆಗೆ ಮುಸ್ಲಿಂ ಧರ್ಮದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರವಾಹದಿಂದ ಕೊಚ್ಚಿಹೋದ ನೂರಾರು ಕುರಿಗಳು; 3 ಜನರು
ಯತ್ನಾಳ್ ಅವರು ಸಮಾಜದ ಶಾಂತಿ ಸೌಹಾರ್ದವನ್ನು ಹಾಳು ಮಾಡುವ ಉದ್ದೇಶದೊಂದಿಗೆ ಈ ರೀತಿ ಸಾರ್ವಜನಿಕವಾಗಿ ಬೇರೆ ಧರ್ಮದವರನ್ನು ಹೀಯಾಳಿಸಿದ್ದಾರೆ. ಮಹಿಳೆಯರ ಬಗ್ಗೆಯೂ ಅವಹೇಳನ ಮಾಡಿದ್ದಾರೆ. ಯತ್ನಾಳ್ ಅವರ ಮಾತುಗಳಿಂದ ಎಲ್ಲರಿಗೂ ನೋವುಂಟಾಗಿದೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಸಚಿವ ಜಮೀರ್ ಅಹ್ಮದ್ ನಾನು ಮುಸ್ಲಿಮರ ಬಂಧು ಎಂದು ನಾಟಕ ಆಡ್ತಾರೆ. ಜಮೀರ್ ಸುಮಾರು 31 ಕೋಟಿ ರೂಪಾಯಿಯಷ್ಟು ಸಾಲವನ್ನು ಐಎಂಎಯಿಂದಲೇ ಪಡೆದಿದ್ದು, ಮುಸಲ್ಮಾನರ ಉದ್ಧಾರಕ್ಕೆ ನಾನು ಹುಟ್ಟಿರೋದು ಎನ್ನುವ ಜಮೀರ್ ಯಾವುದೇ ದಾಖಲೆ ಇಲ್ಲದೆ ಹಣ ಪಡೆದಿದ್ದು ಹೇಗೆ ಉತ್ತರಿಸಲಿ ಎಂದು ಯತ್ನಾಳ್ ಹೇಳಿದ್ದರು.
ಜಮೀರ್ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆ ಎಂದು ಲೋಕಾಯುಕ್ತವೇ ಹೇಳಿದೆ. ಈಗ ಆತ ಮುಸಲ್ಮಾನರ ಹಿತಾಸಕ್ತಿಗಳ ಬಗ್ಗೆ ಮಾತನಾಡುವುದು ಕಾಮಿಡಿ ಅನಿಸುತ್ತದೆ. ಇಂತವರನ್ನು ಸರ್ಕಾರ ರಕ್ಷಿಸಬಾರದು. ಹಗರಣದಲ್ಲಿ ಭಾಗಿಯಾಗಿರುವ ಜಮೀರ್ ಅವರನ್ನು ಕೂಡಲೇ ಬಂಧಿಸಬೇಕು ಎಂದಿದ್ದರು.
ಇತ್ತೀಚೆಗೆ ದಾವಣಗೆರೆಯಲ್ಲಿ ಮಾತನಾಡಿದ್ದ ಯತ್ನಾಳ್ ಕಾಂಗ್ರೆಸ್ ನಾಯಕರ ಬಗ್ಗೆ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಬೆಂಗಳೂರು ಹೈಗ್ರೌಂಡ್ಸ್ ಠಾಣೆಯಲ್ಲಿ ಕೆಪಿಸಿಸಿ ನಾಯಕರು ಕೇಸ್ ದಾಖಲಿಸಿದ್ದರು. ಬಳಿಕ ಇದೇ ಕೇಸ್ ಈಗ ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಹೊಸದಾಗಿ ಯತ್ನಾಳ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.
ಸರ್ಕಾರ ಉರುಳಿಸಲು ಸಾವಿರ ಕೋಟಿ ರೂಪಾಯಿ ರೆಡಿ ಮಾಡಿಟ್ಟುಕೊಂಡಿದ್ದಾರೆ. ಆದರೆ ಶಾಸಕರ ಖರೀದಿ, ಆಪರೇಷನ್ ಕಮಲಕ್ಕೆ ನಾವು ಚಾನ್ಸ್ ಕೊಡಲ್ಲ. ಕಾಂಗ್ರೆಸ್ ಸರ್ಕಾರ ತಾನಾಗಿಯೇ ಬಿದ್ದು ಹೋಗುತ್ತದೆ ಎಂದು ಯತ್ನಾಳ್ ಹೇಳಿದ್ದರು.
ಈ ಸಂಬಂಧ ಯತ್ನಾಳ್ ವಿರುದ್ಧ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ. ಅಲ್ಲದೆ ಜಾಮೀನುರಹಿತ ವಾರೆಂಟ್ ಕೂಡ ಜಾರಿಯಾಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕರು ಸೇರಿದಂತೆ ತಮ್ಮ ಪಕ್ಷದ ನಾಯಕರ ವಿರುದ್ಧವೂ ನಾಲಗೆ ಹರಿಬಿಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ನ್ಯಾಯಾಲಯ ಆದೇಶಿಸಿದರೆ ಅವರನ್ನು ಬಂಧಿಸುತ್ತೇವೆ ಎಂದಿದ್ದಾರೆ.
ಇದನ್ನೂ ನೋಡಿ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪ ಚುನಾವಣೆ: BJP JDS ಸಂಭಾವ್ಯ ಅಭ್ಯರ್ಥಿಗಳಾರು?