ಬಾಗಲಕೋಟೆ: ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್‌ಗೆ ವಿದ್ಯಾರ್ಥಿ ಟೋಪಿ ಹಾಕಿಕೊಂಡು ಬಂದನೆಂದು ಆತನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕಾಲೇಜು ಪ್ರಾಂಶುಪಾಲ, ಪಿಎಸ್‍ಎ, ಕಾನ್ಸ್‍ಟೇಬಲ್ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 18 ರಂದು ತೇರದಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ನವೀದ್ ಥರಥರಿ ಮುಸ್ಲಿಂ ವಿದ್ಯಾರ್ಥಿ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದನು. ಅಂದು ಅವನ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆ ಮಾಡಿರುವುದನ್ನು ಖಂಡಿಸಿ ನವೀದ್ ಥರಥರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಕಾನೂನು ಬಾಹಿರವಾಗಿ ಹಿಂಸೆ ನೀಡಿದ್ದಲ್ಲದೆ ಆತನ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಪರಿಣಾಮ ಬನಹಟ್ಟಿಯ ಜೆಎಂಎಫ್‍ಸಿ ನ್ಯಾಯಾಲಯವು ತೇರದಾಳ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಆದೇಶಿಸಿದೆ.
ಇದನ್ನು ಓದಿ: ಹಿಜಾಬ್ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು : ಹಿಜಾಬ್‌ಗಿಂತ ಶಿಕ್ಷಣ ಮುಖ್ಯ
ಹಲ್ಲೆ ಮಾಡಿರುವ 7 ಮಂದಿ ವಿರುದ್ಧ ನವೀದ್ ಥರಥರಿ ಪ್ರಕರಣ ದಾಖಲಿಸುವಂತೆ ಬನಹಟ್ಟಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 2022 ರ ಮಾರ್ಚ್ 29 ರಂದು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಏಪ್ರಿಲ್ 4 ರಂದು ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಸ್ಥಳೀಯ ಠಾಣೆ ಹೆಚ್ಚುವರಿ ಪಿಎಸ್‌ಐ ಸಾಂಬಾಜಿ ಸೂರ್ಯವಂಶಿ ಮೇ 24 ರಂದು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಫೆಬ್ರವರಿ ತಿಂಗಳಲ್ಲಿ ಭಾರೀ ಚರ್ಚೆಗೆ ಒಳಪಟ್ಟಿತ್ತು. ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ ಮೂಲಕ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ದ್ವೇಷಹುಟ್ಟಿಸುವ ಕೆಲಸವನ್ನು ಕೈಗೊಳ್ಳಲಾಗಿತ್ತು. ಇದರಿಂದ ರಾಜ್ಯದಲ್ಲಿ ಹಲವು ಶಾಲಾ-ಕಾಲೇಜುಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನು ಓದಿ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ; ‘ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ’
ಇದೇ ಸಮಯದಲ್ಲಿ ಭಾಗಲಕೋಟೆಯಲ್ಲಿ ನವೀದ್ ಥರಥರಿ ಮುಸ್ಲಿಂ ವಿದ್ಯಾರ್ಥಿ ಟೋಪಿ ಧರಿಸಿ ಕಾಲೇಜಿಗೆ ಬಂದ ಎಂಬ ಕಾರಣಕ್ಕೆ ಕಾಲೇಜು ಪ್ರಾಂಶುಪಾಲ ತಕರಾರು ಮಾಡಿದ್ದಾರೆ. ತೇರದಾಳ ಪೊಲೀಸರಿಗೆ ಕರೆ ಮಾಡಿ ವಿದ್ಯಾರ್ಥಿಯನ್ನು ಹೊರ ಹಾಕಿದ್ದರು. ಆತನ ಮೇಲೆ ಪ್ರಾಂಶುಪಾಲ ಸೇರಿ 7 ಪೊಲೀಸ್ ಸಿಬ್ಬಂದಿಗಳೇ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ನವೀದ್ ಥರಥರಿಯನ್ನು ಜಮಖಂಡಿ ಆಸ್ಪತ್ರೆಗೆ ದಾಖಲಾಗಿತ್ತು.
ತನ್ನ ಮೇಲಿನ ಹಲ್ಲೆಯ ವಿರುದ್ಧ ನವೀದ್ ನ್ಯಾಯಾಲಯದ ಮೊರೆ ಹೋಗಿದ್ದ, ನ್ಯಾಯಾಲಾಯದ ಆದೇಶದನ್ವಯ ತೇರದಾಳ ಪಿಎಸ್‍ಐ ರಾಜು ಬೀಳಗಿ, ಪೊಲೀಸ್ ಕಾನಸ್ಟೇಬಲ್‍ಗಳಾದ ಗಣಿ ಪಿ.ಹೆಚ್.ಮಲ್ಲಿಕಾರ್ಜುನ್, ಕೆಂಚಣ್ಣವರ, ಎಸ್.ಬಿ.ಕಲಾಟೆ, ಎಸ್.ಸಿ.ಮದನಮಟ್ಟಿ, ಸನ್ನತ್ತಿ, ಪ್ರಾಂಶುಪಾಲ ಅಣ್ಣಪ್ಪಯ್ಯ ಪೂಜಾರಿ ಸೇರಿದಂತೆ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಜೂನ್ 30ರಂದು ನ್ಯಾಯಾಲದಲ್ಲಿ ವಿಚಾರಣೆ ನಡೆಯಲಿದ್ದು, ಘಟನೆಯ ತನಿಖೆಯನ್ನು ಜಮಖಂಡಿ ಡಿವೈಎಸ್‌ಪಿ ಅವರಿಗೆ ವಹಿಸಲಾಗಿದೆ.