ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಜೆನೆಟ್ ಜಾರಾ ಚಿಲಿಯ ಪ್ರಸಕ್ತ ಆಳುವ ಪ್ರಗತಿಪರ ಕೂಟ ‘ಚಿಲಿಗಾಗಿ ಐಕ್ಯತೆ’ (ಯುನಿಟಿ ಫಾರ್ ಚಿಲಿ)ಯ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆಗೆ ನಡೆದ ಪ್ರಾಥಮಿಕ ಚುನಾವಣೆಗಳಲ್ಲಿ ಭಾರೀ ಜಯ ಗಳಿಸಿದ್ದಾರೆ. ಅವರು ನಾಲ್ಕು ಸ್ಪರ್ಧಿಗಳಿದ್ದ ಚುನಾವಣೆಯಲ್ಲಿ 60% ಮತ ಗಳಿಸಿದ್ದಾರೆ. ಚುನಾವಣಾ ಪೂರ್ವ ವಿಶ್ಲೇಷಣೆಗಳ ಪ್ರಕಾರ ಮೊದಲ ಸ್ಥಾನದಲ್ಲಿದ್ದ ಅವರ ಸಮೀಪದ ಪ್ರತಿಸ್ಪರ್ಧಿ ಸೋಶಲಿಸ್ಟ್ (ಡೆಮೊಕ್ರಾಟಿಕ್ ಸೋಶಲಿಸಂ) ಪಕ್ಷದ ಕೆರೊಲಿನಾ ತೊಹಾ 27.7% ಮತ ಗಳಿಸಿದರು. ಚಿಲಿ
ಎಡ-ನಡುಪಂಥೀಯ ಎಂದು ಪರಿಗಣಿಸಲಾದ ಸೋಶಲಿಸ್ಟ್ ಪಕ್ಷ ಚಿಲಿಯ ದೊಡ್ಡ ಪಕ್ಷವಾಗಿದ್ದು, ಸರ್ವಾಧಿಕಾರಿ ಪಿನೊಶೆ ಆಡಳಿತದ ಕೊನೆಯ ನಂತರ ಎರಡು ದಶಕಗಳ ಕಾಲ ಸರಕಾರ ನಡೆಸಿತ್ತು. ‘ಚಿಲಿಗಾಗಿ ಐಕ್ಯತೆ’ 2022ರಲ್ಲಿ ರಚಿತವಾದ ಹೆಚ್ಚು ಕಡಿಮೆ ಎಲ್ಲ ಎಡ ಪ್ರಗತಿಪರ ಪ್ರಜಾಸತ್ತಾತ್ಮಕ ಪಕ್ಷಗಳ ಕೂಟ. ಇದರಲ್ಲಿ ಎಡಪಂಥೀಯವಾದ ಎಲ್ಲ ಎಡಪಕ್ಷಗಳೂ ಇದ್ದು ಹಲವು ನಡುಪಂಥೀಯ ಪ್ರಗತಿಪರ ಪಕ್ಷಗಳೂ ಇವೆ. 1973ರಲ್ಲಿ ಚುನಾಯಿತ ಸೋಶಲಿಸ್ಟ್ ಅಧ್ಯಕ್ಷ ಅಲೆಂದೆ ಅವರ ಕೊಲೆ ಮಾಡಿ ಕುಖ್ಯಾತ ರಕ್ತಸಿಕ್ತ ಮಿಲಿಟರಿ ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರಕ್ಕೆ ಬಂದ ಸರ್ವಾಧಿಕಾರಿ ಪಿನೊಶೆ ಜತೆ ಸಹಕರಿಸಿದ್ದ, ಸಂಬಂಧ ಹೊಂದಿದ್ದ ಉಗ್ರ ಬಲಪಂಥೀಯ ಶಕ್ತಿಗಳನ್ನು ಸೋಲಿಸಲು ಈ ಕೂಟವನ್ನು ರಚಿಸಲಾಗಿತ್ತು.
ವಿಜಯದ ಘೋಷಣೆ ನಂತರ ನಡೆದ ರ್ಯಾಲಿಯಲ್ಲಿ “ಉಗ್ರ ಬಲಪಂಥದಿಂದ ಬಂದಿರುವ ಬೆದರಿಕೆಯನ್ನು ನಾವು ಐಕ್ಯತೆ, ಸಂವಾದ ಮತ್ತು ಆಶಾಭಾವನೆಯಿಂದ ಎದುರಾಗಬೇಕಿದೆ..ಎಲ್ಲರೂ ಕೈಜೋಡಿಸಿ ಯಾವುದೇ ಒಡಕಿಲ್ಲದೆ ಚಿಲಿಯ ಉಗ್ರಬಲಪಂಥದ ವಿರುದ್ಧ ಅತ್ಯಂತ ವಿಶಾಲ ರಂಗ ರಚಿಸಿ ಸೋಲಿಸಬೇಕಾಗಿದೆ” ಎಂದು ಜಾರಾ “ಚಿಲಿಗಾಗಿ ಐಕ್ಯತೆ” ರಂಗದ ಪಕ್ಷಗಳ ನಾಯಕರು, ಕಾರ್ಯಕರ್ತರು, ಬೆಂಬಲಿಗರಿಗೆ ಕರೆ ಕೊಟ್ಟರು. ಇದೇ ರಂಗದ ಅಭ್ಯರ್ಥಿಯಾಗಿದ್ದ ಅಧ್ಯಕ್ಷ ಬೊರಿಕ್, ಜಾರಾ ಅವರನ್ನು ಅಭಿನಂದಿಸುತ್ತಾ “ಜಾರಾ ಅವರು ಪ್ರಗತಿಪರ ಶಕ್ತಿಗಳನ್ನು ಉತ್ತಮ ಭವಿಷ್ಯದತ್ತ ಮುನ್ನಡೆಸುವ ಕೆಲಸಕ್ಕೆ ತಕ್ಷಣ ಸನ್ನದ್ಧರಾಗುತ್ತಾರೆ. ಮುಂಬರುವ ಸ್ಪರ್ಧೆ ಸುಲಭಸಾಧ್ಯವಾದ್ದಲ್ಲ. ಆದರೆ ಜಾರಾ ಅವರಿಗೆ ಸವಾಲಿನ ಸಮರಗಳ ಅನುಭವವಿದೆ. ನ್ಯಾಯಯುತ, ಸುಭದ್ರ ಮತ್ತು ಸಂತೋಷಭರಿತ ನಾಡನ್ನು ಕಟ್ಟಲು,ನಮ್ಮ ದೇಶಧ ಬಹುಸಂಖ್ಯಾತರನ್ನು ಅಣಿನೆರೆಸಲು ಒಟ್ಟಿಗೆ ಐಕ್ಯತೆಯಿಂದ ಕೆಲಸ ಮಾಡೋಣ” ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : ಬುದ್ಧಿಜೀವಿಗಳ ಮೇಲೆ ಹೆಚ್ಚುತ್ತಿರುವ ನವ-ಫ್ಯಾಸಿಸಂನ ದಾಳಿಗಳು

ಕಳೆದ ಬಾರಿ ಪ್ರಾಥಮಿಕ ಚನಾವಣೆಯಲ್ಲಿ ಗೆದ್ದಿದ್ದ ಹೊಸ ಎಡಪಂಥೀಯ ಪಕ್ಷಗಳ ಕೂಟ ‘ವಿಶಾಲ ರಂಗ’ ದ ಅಭ್ಯರ್ಥಿ ಗೊನ್ಸಾಲೊ ವಿಂಟರ್ 9% ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಈ ಕೂಟದ ಅಭ್ಯರ್ಥಿ ಗೇಬ್ರಿಯಲ್ ಬೊರಿಕ್ ಪ್ರಾಥಮಿಕದಲ್ಲಿ ಮತ್ತು ಎರಡನೇ ಸುತ್ತಿನಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿಲಿಯ ಸಂವಿಧಾನದ ಪ್ರಕಾರ ಅನುಕ್ರಮ ಅವಧಿಗಳಲ್ಲಿ ಒಬ್ಬರೇ ಅಧ್ಯಕ್ಷರಾಗುವಂತಿಲ್ಲ. ಹಾಗಾಗಿ ಬೊರಿಕ್ ಸ್ಪರ್ಧಿಸುವಂತಿಲ್ಲ. ಸಾಮಾಜಿಕ ಹಸಿರು ಪಕ್ಷದ 2,7% ಮತ ಪಡೆದು ಅಭ್ಯರ್ಥಿ ಜೈಮೆ ಮುಲೆಟ್ ನಾಲ್ಕನೇ ಸ್ಥಾನದಲ್ಲಿದ್ದರು.
ಚಿಲಿಯ ಕಮ್ಯುನಿಸ್ಟ್ ಪಕ್ಷ ಒಟ್ಟು ಎಲ್ಲ ಎಡ ಪ್ರಗತಿಪರ ಪ್ರಜಾಸತ್ತಾತ್ಮಕ ಶಕ್ತಿಗಳ ಕೂಟದ ಪರವಾಗಿ ಮೊದಲ ಬಾರಿಗೆ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಇದು ಕಮ್ಯುನಿಸ್ಟ್ ಪಕ್ಷದ ನೂರಕ್ಕೂ ಹೆಚ್ಚು ದೀರ್ಘ ಕಾಲದ ಇತಿಹಾಸದಲ್ಲೇ ಅಪೂರ್ವ ಕ್ಷಣ. ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಜೆನೆಟ್ ಜಾರಾ ಪ್ರಸ್ತುತ ಚಿಲಿಯ ಗೇಬ್ರಿಯಲ್ ಬೊರಿಕ್ ಸಚಿವ ಸಂಫುಟದಲ್ಲಿ ಕಾರ್ಮಿಕ ಮಂತ್ರಿಯಾಗಿ ಕಳೆದ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕನಿಷ್ಠ ವೇತನವನ್ನು ಗಮನಾರ್ಹವಾಗಿ ಹೆಚ್ಚಿಸಿ, ಗರಿಷ್ಠ ವಾರದ ಕೆಲಸದ ಗಂಟೆಗಳನ್ನು 45ರಿಂದ 40ಕ್ಕೆ ಇಳಿಸಿ, ಪೆನ್ಶನ್ ವ್ಯವಸ್ಥೆ ಉತ್ತಮಗೊಳಿಸಲು ಕಾನೂನು ಮತ್ತಿತರ ಕ್ರಮಗಳನ್ನು ಜಾರಿಗೊಳಿಸಿ ಜನಪ್ರಿಯರಾಗಿದ್ದರು. ಕೆಳಮಧ್ಯಮ ವರ್ಗದ ಕಾರ್ಮಿಕ ಕುಟುಂಬದಿಂದ ಬಂದಿರುವ ಜಾರಾ ಹಲವು ಕೆಲಸಗಳನ್ನು ಮಾಡಿದ ನಂತರ ವಿ.ವಿ ಶಿಕ್ಷಣ ಪಡೆದರು. ಅವರು ಸೋಶಲಿಸ್ಟ್ ಅಧ್ಯಕ್ಷ ಮಿಶೆಲ್ ಬಶೆಲೆಟ್ ಅವರ ತಂಡದಲ್ಲಿ ಸಾಮಾಜಿಕ ಭದ್ರತೆಯ ಅಂಡರ್ ಸೆಕ್ರೆಟರಿಯಾಗಿದ್ದು ಆಡಳಿತದ ಅನುಭವ ಹೊಂದಿದ್ದಾರೆ. ಜಾರಾ 14 ವರ್ಷ ಹದಿಹರೆಯದಲ್ಲೇ ಯುವ ಕಮ್ಯುನಿಸ್ಟ್ ಲೀಗ್ ಸೇರಿದ್ದು, ವಿ.ವಿ ವಿದ್ಯಾರ್ಥಿ ಚಳುವಳಿಯಲ್ಲೂ ಭಾಗವಹಿಸಿದ್ದರು. ಆ ಮೇಲೆ ಟ್ರೇಢ್ ಯುನಿಯನ್ , ಸರಕಾರ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಜಾರಾ ಸಾರ್ವಜನಿಕ ಸಮಸ್ಯೆಗಳ ಅಪಾರ ಜ್ಞಾನ ಮತ್ತು ಪ್ರಾಯೋಗಿಕ ಅನುಭವ ಹೊಂದಿದ್ದಾರೆ.
ಮೂರನೇ ಬಾರಿಗೆ ಸ್ಪರ್ಧಿಸಿರುವ, ಹಿಂದಿನ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ಗೆದ್ದಿದ್ದ ಮತ್ತು ಎರಡನೇ ಸುತ್ತಿನಲ್ಲಿ 46% ಮತ ಗಳಿಸಿದ್ದ ಜೋಸ್ ಅಂಟೋನಿಯೊ ಕಾಸ್ಟ್ ಜಾರಾ ಅವರ ಪ್ರಮುಖ ಸ್ಪರ್ಧಿಯಾಗಿರುತ್ತಾರೆ. ಜರ್ಮನಿಯಿಂದ ವಲಸೆ ಬಂದ ಕಾಸ್ಟ್ ಅವರ ತಂದೆ ನಾಜಿ ಪಕ್ಷದ ಸದಸ್ಯರಾಗಿದ್ದರಂತೆ. ಕಾಸ್ಟ ಸ್ವತಃ ಪಿನೋಶೇ ಸರ್ವಾಧಿಕಾರಿ ಮತ್ತು ಉಗ್ರ ಬಲಪಂಥೀಯ ನೀತಿಗಳ ಕಟು ಬೆಂಬಲಿಗರಾಗಿದ್ದಾರೆ. ಉಳಿದ ಇಬ್ಬರು ನಿರೀಕ್ಷಿತ ಸ್ಪರ್ಧಿಗಳು ಸಹ ಜರ್ಮನ್ ಫ್ಯಾಸಿಸ್ಟ್ ಆಡಳಿತದೊಂದಿಗೆ ಸಂಬಂದವಿರುವ ಮತ್ತು ಪಿನೋಶೆ ಸರ್ವಾಧಿಕಾರಿ ಆಡಳಿತದ ಬೆಂಬಲಿಗರಾಗಿದ್ದವರು.
ಇದನ್ನೂ ನೋಡಿ : ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi
