ಮಂಗಳೂರು: ವಿಮೋಚನಾ ಚಳವಳಿಯಿಂದ ಆರಂಭವಾದ ಕಮ್ಯೂನಿಸ್ಟರ ಕ್ರಾಂತಿಕಾರಿ ಹೆಜ್ಜೆಗಳು ಈಗಲೂ ದೇಶದ ಮೂಲೆಮೂಲೆಯಲ್ಲಿ ಜೀವಂತವಾಗಿವೆ ಎಂದು ಸಿಐಟಿಯು ರಾಜ್ಯ ಮುಖಂಡ ಕೆ.ಮಹಾಂತೇಶ್ ಹೇಳಿದರು.
ಅವರು, ನಗರದ ಸಹೋದಯ ಸಭಾಂಗಣದಲ್ಲಿ ಡಾ. ಕೃಷ್ಣಪ್ಪ ಕೊಂಚಾಡಿ ಅನುವಾದಿತ ಮುಜಫರ್ ಅಹಮ್ಮದ್ ಅವರ ʻಕಮ್ಯೂನಿಸ್ಟ್ ಚಳವಳಿಯ ಆರಂಭಿಕ ಹೆಜ್ಜೆಗಳುʼ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಶೋಷಿತ ಜನಚಳವಳಿ ಜತೆ ಕಮ್ಯೂನಿಸ್ಟರು ಅವಿನಾಭಾವ ಸಂಬಂಧ ಹೊಂದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದರು.
ಭಾರತೀಯ ಸ್ವಾತಂತ್ರ್ಯ ಚಳವಳಿಯು ಕಮ್ಯೂನಿಸ್ಟ್ ಪಕ್ಷದ ಸ್ಥಾಪನೆ ಬಳಿಕವಷ್ಟೇ ಒಂದು ಕ್ರಾಂತಿಕಾರಿ ಪಥದತ್ತ ಸಾಗಲು ಸಾಧ್ಯವಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಬೇಡಿಕೆಯನ್ನು ಮೊದಲು ಮಂಡಿಸಿದ್ದು ಕಮ್ಯೂನಿಸ್ಟರೇ ಎಂದರು.
ಪುಸ್ತಕದ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ ರಾಜೇಂದ್ರ ಉಡುಪ ಮಾತನಾಡಿ, ಕಮ್ಯುನಿಸ್ಟ್ ಪಕ್ಷದ ಹುಟ್ಟೇ ಒಂದು ಸಾಹಸಮಯ ಹೋರಾಟ. 1920ರ ಕಾಲಘಟ್ಟದಲ್ಲಿ ಜನ್ಮ ತಾಳಿದ ಭಾರತದ ಕಮ್ಯುನಿಸ್ಟ್ ಪಕ್ಷವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಬ್ರಿಟಿಷರು ಹೆಣೆದ ತಂತ್ರಗಳು ಅಗಾಧವಾದದ್ದು. ಅವುಗಳನ್ನೆಲ್ಲ ಮೆಟ್ಟಿ ನಿಂತು, ಅನುಭವಿಸಿದ ಯಾತನಾಮಯ ಬದುಕಿನ ಎಳೆಎಳೆಯನ್ನು ಮುಜಫರ್ ಅಹಮ್ಮದ್ ಬಿಚ್ಚಿಟ್ಟ ರೀತಿ ರೋಮಾಂಚನಕಾರಿಯಾಗಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನು ಪ್ರಗತಿಪರ ಜನಸಮುದಾಯ ಪ್ರಕಾಶನದ ಪ್ರಕಾಶಕ ಸುನಿಲ್ ಕುಮಾರ್ ಬಜಾಲ್ ಮಾಡಿದರು. ಪತ್ರಿಕಾ ಮಾಧ್ಯಮದಲ್ಲಿ ತನ್ನ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸಲು ಜನ್ಮ ತಾಳಿದ ಪ್ರಗತಿಪರ ಜನಸಮುದಾಯ ಮಾಸಿಕ ಪತ್ರಿಕೆಯು ಅತ್ಯಲ್ಪ ಕಾಲದಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಕಾರ್ಯ ನಿರ್ವಹಿಸಿದೆ. ಬಳಿಕ ಪ್ರಕಾಶನದ ಹೆಸರಿನಲ್ಲಿ ಹಲವಾರು ಪುಸ್ತಕಗಳನ್ನು ಮುದ್ರಿಸಿ ಜನತೆಯ ತಿಳುವಳಿಕೆಯ ಮಟ್ಟವನ್ನು ಸುಧಾರಿಸಲು ಪ್ರಯತ್ನಪಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎನ್.ಇಸ್ಮಾಯಿಲ್, ವಿಚಾರವಾದಿ ಸಂಘಟನೆಯ ನಾಯಕ ಡಾ.ನರೇಂದ್ರ ನಾಯಕ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಮುಖಪುಟ ವಿನ್ಯಾಸಗಾರರಾದ ನಾಗೇಶ್ ಕಲ್ಲೂರು, ಪುಸ್ತಕ ಅನುವಾದಕ ಡಾ.ಕೃಷ್ಣಪ್ಪ ಕೊಂಚಾಡಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಯೋಗೀಶ್ ಜಪ್ಪಿನಮೊಗರುರವರು ಸ್ವಾಗತಿಸಿದರೆ, ಕೊನೆಯಲ್ಲಿ ಬಿ.ಕೆ.ಇಮ್ತಿಯಾಜ್ ವಂದಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.