- ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ
- ಭಾರತಕ್ಕೆ ಪದಕ ಗೆದ್ದುಕೊಟ್ಟ ಕನ್ನಡಿಗ ಗುರುರಾಜ ಪೂಜಾರಿ
- 269 ಕೆಜಿ ಭಾರ ಎತ್ತಿ ಕಂಚಿನ ಪದಕ ಜಯಿಸಿದ ಕುಂದಾಪುರದ ಹುಡುಗ
ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತದ ವೇಟ್ಲಿಫ್ಟರ್ಗಳು ಮತ್ತೊಮ್ಮೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಅನುಭವಿ ವೇಟ್ಲಿಫ್ಟರ್ ಗುರುರಾಜ ಪೂಜಾರಿ (Gururaja Pujari) ಬರ್ಮಿಂಗ್ಹ್ಯಾಮ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಂಚು ಗೆದ್ದರು. ವೇಟ್ಲಿಫ್ಟಿಂಗ್ನೊಂದಿಗೆ ಖಾತೆಯನ್ನು ತೆರೆದ ನಂತರ, ಭಾರತಕ್ಕೆ ಅದೇ ಸ್ಪರ್ಧೆಯಲ್ಲಿ ಮತ್ತೊಂದು ಪದಕ ಸಿಕ್ಕಿತು. ಈ ಬಾರಿ ಭಾರತದ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. 29ರ ಹರೆಯದ ವೇಟ್ ಲಿಫ್ಟರ್ ಪುರುಷರ 61 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಲಾರಿ ಚಾಲಕನ ಮಗ ಗುರುರಾಜ : ಗುರುರಾಜ ಟ್ರಕ್ ಚಾಲಕನ ಮಗನಾಗಿದ್ದು ಗುರುರಾಜನಿಗೆ ಇನ್ನೂ ನಾಲ್ವರು ಸಹೋದರರಿದ್ದಾರೆ. ಬಡತನದಲ್ಲೇ ಬದುಕಿದ ಗುರುರಾಜ ಅವರಿಗೆ ಈ ಸ್ಪರ್ಧೆಗೆ ಬೇಕಾದ ಅವಶ್ಯಕತೆಗಳನ್ನು ಪೂರ್ಣಗೊಳಿಸಿಕೊಳ್ಳು ಕಷ್ಟಸಾಧ್ಯವಾಗಿತ್ತು. ಅಲ್ಲದೆ ಗುರುರಾಜ ಅವರ ತಂದೆಗೆ ವೇಟ್ಲಿಫ್ಟರ್ಗೆ ಬೇಕಾಗುವ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಜೊತೆಗೆ ಈ ಸ್ಪರ್ಧೆ ನಿಂತಿರುವದೇ ತೂಕ ಎತ್ತುವುದರ ಮೇಲೆ ಹಾಗಾಗಿ ಈ ತೂಕ ಎತ್ತಲು ಅದೇ ರೀತಿಯ ಆಹಾರ ಬೇಕು, ಆದರೆ ಈ ಬಡ ಕುಟುಂಬದ ಹುಡುಗನಿಗೆ ಆ ರೀತಿಯ ಪ್ರೋಟಿನ್ಯುಕ್ತ ಆಹಾರ ಸೇವಿಸಲು ಹಣದ ಕೊರತೆಯಿತ್ತು. ಆದರೆ ಛಲ ಬಿಡದ ಗುರುರಾಜ ಇಂದು ಕಾಮನ್ವೆಲ್ತ್ನಲ್ಲಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
India's 2nd Medal at @birminghamcg22!! 🇮🇳#Weightlifter P. Gururaja clinched BRONZE 🥉with an impressive lift of 269 kg in the Men's 61kg Finals event. (Snatch- 118kg, Clean & Jerk- 151kg)
Heartiest congratulations, Champ!#Cheer4India #India4CWG2022 @Media_SAI pic.twitter.com/pK9Hy8tVqF
— Dept of Sports MYAS (@IndiaSports) July 30, 2022
ಹಲವು ಪದಕಗಳ ಸರದಾರ : ಕಾಮನ್ವೆಲ್ತ್ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿ ಕುಂದಾಪುರದವರು. ಆಗಸ್ಟ್ 15, 1992ರಂದು ಜನಿಸಿದರು. 2010ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ವೇಟ್ಲಿಫ್ಟಿಂಗ್ ಕ್ರೀಡಾಲೋಕಕ್ಕೆ ಪ್ರವೇಶಿಸಿದರು. ಆರಂಭದ ದಿನಗಳಲ್ಲಿ ಗುರುರಾಜ ಅವರು ಕುಸ್ತಿಪಟುವಾಗಿದ್ದರು, 2008ರಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ಕಂಡ ಈ ಆಟಗಾರ ತುಂಬಾ ಪ್ರಭಾವಿತರಾಗಿದ್ದರು. ಕರ್ನಾಟಕದ ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ ವಾಸವಾಗಿರುವ ಗುರುರಾಜ ಅವರೂ ದೇಶಕ್ಕೆ ಪದಕ ಗೆಲ್ಲಲೇಬೇಕು ಎಂಬ ದೃಢಸಂಕಲ್ಪ ಹೊಂದಿದ್ದರು. ಹೀಗಾಗಿ ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ ಗುರುರಾಜ ಅಖಾಡಕ್ಕೆ ಹೋಗಲು ಪ್ರಾರಂಭಿಸಿದರು. ಆದರೆ ಶಾಲೆಯ ಶಿಕ್ಷಕರ ಸಲಹೆಯ ನಂತರ ಅವರು ಈ ಕ್ರೀಡೆಯನ್ನು ಬಿಟ್ಟು ವೇಟ್ಲಿಫ್ಟಿಂಗ್ನಲ್ಲಿ ತೊಡಗಿಕೊಂಡರು. 2015ರಲ್ಲಿ ಭಾರತೀಯ ವಾಯುಪಡೆಯಲ್ಲಿ ಸಾರ್ಜೆಂಟ್ ಆಗಿ ಸೇರಿದರು. 2016ರಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ಗುರುತಿಸಿಕೊಂಡರು, ಅಲ್ಲಿಂದಲೇ ಅವರ ಯಶೋಗಾಥೆ ಆರಂಭವಾಯಿತು.
2016 ರಲ್ಲಿ ಮಲೇಷ್ಯಾ ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲಿ ಗುರುರಾಜ ಪೂಜಾರಿ ಚಿನ್ನದ ಪದಕ ಗೆದ್ದಿದ್ದರು. ಅದೇ ವರ್ಷ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮತ್ತೊಂದು ಚಿನ್ನವನ್ನು ಗೆದ್ದರು. 2017ರ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. 2018ರ ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ ಪೂಜಾರಿ ಶ್ರೇಷ್ಠ ಸಾಧನೆ ಮಾಡಿದರು. ಪೂಜಾರಿ 2018 ರಲ್ಲಿ ಜೂನಿಯರ್ ವಿಶ್ವಕಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.