ಕೊಹಿಮಾ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಅಫ್ ಸ್ಪಾ (ಎಎಫ್‌ಎಸ್‌ಪಿಎ)ವನ್ನು ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರೂಪಿಸಲಾಗುವುದು ಎಂದು ಸರಕಾರ ಹೇಳಿದೆ.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೋ, ಉಪ ಮುಖ್ಯಮಂತ್ರಿ ವೈ. ಪಟ್ಟೋನ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಶ್ವ ಶರ್ಮಾ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ ಮೂರು ದಿನಗಳ ಬಳಿಕ ನಾಗಾಲ್ಯಾಂಡ್ ಸರಕಾರ ಈ ಹೇಳಿಕೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಈಶಾನ್ಯ) ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ನಾಗಲ್ಯಾಂಡ್‌ನ ಮುಖ್ಯ ಕಾರ್ಯದರ್ಶಿ, ಐಜಿಪಿ ಈ ಸಮಿತಿಯಲ್ಲಿ ಒಳಗೊಳ್ಳಲಿದ್ದಾರೆ. ಐಜಿಎಆರ್ (ಉತ್ತರ) ಹಾಗೂ ಸಿಆರ್‌ಪಿಎಫ್‌ನ ಪ್ರತಿನಿಧಿಗಳು ಕೂಡ ಸಮಿತಿಯ ಭಾಗವಾಗಿರಲಿದ್ದಾರೆ. ಈ ಸಮಿತಿ 45 ದಿನಗಳಲ್ಲಿ ವರದಿ ಸಲ್ಲಿಸಲಿದೆ.
ನಾಗಾಲ್ಯಾಂಡ್‌ನಲ್ಲಿ ಪ್ರಕ್ಷುಬ್ಧಗೊಂಡ ಪ್ರದೇಶ’ಗಳ ಹಾಗೂ ಎಎಫ್‌ಎಸ್‌ಪಿಎ ಹಿಂಪಡೆದುಕೊಳ್ಳುವಿಕೆಯು ಕುರಿತ ನಿರ್ಧಾರ ಸಮಿತಿಯ ಶಿಫಾರಸು ಆಧರಿಸಿದೆ ಎಂದು ಹೇಳಿಕೆ ತಿಳಿಸಿದೆ.
‘ಪ್ರಕ್ಷುಬ್ದ’ ಎಂದು ಗುರುತಿಸಲಾದ ಪ್ರದೇಶದಲ್ಲಿ ವಾರಂಟ್ ಇಲ್ಲದೆ ಜನರನ್ನು ವಶಕ್ಕೆ ತೆಗೆದುಕೊಳ್ಳುವ ಹಾಗೂ ಬಂಧಿಸುವ ಅಧಿಕಾರವನ್ನು ಈ ವಿವಾದಾತ್ಮಕ ಕಾಯ್ದೆ ಶಸಸ್ತ್ರ ಪಡೆಗಳಿಗೆ ನೀಡಿದೆ
ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಒಟಿಂಗ್‌ನಲ್ಲಿ ಡಿಸೆಂಬರ್ 4ರಂದು ಸೇನೆ ನಡೆಸಿದ ಹೊಂಚು ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಈಶಾನ್ಯದ ಜನರು ವಿವಾದಾತ್ಮಕ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ಆರಂಭಿಸಿದರು. ಅಕ್ಷರಶಃ ಸಂಘಟಿತರಾಗಿ ಎಎಫ್‌ಎಸ್ ಎ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.
ಆಂತರಿಕ ಗಲಭೆಗಳು, ಅಡ್ಡಿಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ಎಎಫ್‌ಎಸ್‌ಪಿಎ ಯನ್ನು ಜಾರಿಗೆ ತರಲಾಗಿತ್ತು. ತೊಂದರೆಗೊಳಗಾದ ಪ್ರದೇಶಗಳ (ವಿಶೇಷ ನ್ಯಾಯಾಲಯಗಳು) ಕಾಯ್ದೆ 1976ರ ಅಡಿ ಸಮಸ್ಯೆಗೆ ಒಳಗಾಗಿರುವ ಎಂದು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರ ನೀಡುವ ಸಂಸತ್ತಿನ ಕಾಯ್ದೆ ಇದು.
ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲೆಯಾದರೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ವಾರಂಟ್ ಇಲ್ಲದೆ ಬಂಧಿಸಲು, ಯಾವುದೇ ವಾಹನ ತಡೆಯಲು ಮತ್ತು ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಸೇರಿದಂತೆ ಈ ಕಾಯ್ದೆಯ ಹಲವು ವಿಶೇಷ ಅಧಿಕಾರವನ್ನು ಹೊಂದಿದೆ.