ಮಯನ್ಮಾರ್: ಉಗ್ರರು ನಡೆಸಿದ ದಾಳಿಯಿಂದಾಗಿ ಭಾರತೀಯ ಸೇನೆಯ ನಾಲ್ವರು ಯೋಧರು, ಅಸ್ಸಾಂ 46 ರೈಫಲ್ನ ಕಮಾಂಡಿಂಗ್ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಮಣಿಪುರದ ಮಯನ್ಮಾರ್ ಗಡಿಯ ಸಿಂಘಾತ್ನಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಈ ದಾಳಿ ನಡೆದಿದೆ. ಮಣಿಪುರ ಮೂಲದ ಬಂಡುಕೋರರ ಗುಂಪು ಪೀಪಲ್ಸ್ ಲಿಬರೇಶನ್ ಆರ್ಮಿ ಈ ದಾಳಿ ನಡೆಸಿದ್ದಾಗಿ ಮಾಹಿತಿ ಇದೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನು ಓದಿ: ಸೇಲ್ಸ್ಮನ್ ಅನ್ನು ಗುಂಡಿಟ್ಟು ಕೊಂದ ಉಗ್ರರು
ಹುತಾತ್ಮರಾದ ಕಮಾಂಡಿಂಗ್ ಆಫೀಸರ್ನ್ನು ಕರ್ನಲ್ ವಿಪ್ಲವ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಇವರು ಮಯನ್ಮಾರ್ ಗಡಿಯಲ್ಲಿ ಇದ್ದವರು, ದಾಳಿ ನಡೆಯುವ ಸಂದರ್ಭದಲ್ಲಿ ಅಲ್ಲಿಂದ ಕುಟುಂಬದೊಂದಿಗೆ ಹಿಂತಿರುಗುತ್ತಿದ್ದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಐವರು ವೀರ ಯೋಧರನ್ನು ಈ ದೇಶ ಇಂದು ಕಳೆದುಕೊಂಡಿದೆ. ಅದರಲ್ಲೂ ಕಮಾಂಡಿಂಗ್ ಅಧಿಕಾರಿಯ ಕುಟುಂಬವನ್ನು ಟಾರ್ಗೆಟ್ ಮಾಡಿದ್ದು ನಿಜಕ್ಕೂ ದುರಂತ. ಈ ಸಾವಿಗೆ ನ್ಯಾಯ ಒದಗಿಸದೆ ಸುಮ್ಮನಾಗುವುದಿಲ್ಲ ಎಂದಿದ್ದಾರೆ.
ಉಗ್ರರ ದಾಳಿಯಯನ್ನು ಖಂಡಿಸಿ ಮಣಿಪುರ ಮುಖ್ಯಮಂತ್ರಿ ಎನ್.ಬಿರನ್ ಸಿಂಗ್ ಟ್ವೀಟ್ ಮಾಡಿದ್ದು, 46 ಅಸ್ಸಾಂ ರೈಫಲ್ಸ್ ಮೇಲೆ ಉಗ್ರರು ಹೇಡಿತನದಿಂದ, ಹೊಂಚು ಹಾಕಿ ದಾಳಿ ಮಾಡಿದ್ದು ಖಂಡನೀಯ. ಸಿಸಿಪುರ ಎಂಬಲ್ಲಿ ನಡೆದ ಈ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಮತ್ತವರ ಕುಟುಂಬವೂ ಹತ್ಯೆಗೀಡಾಗಿದೆ. ಯೋಧರು ಹುತಾತ್ಮರಾಗಿದ್ದಾರೆ. ಉಗ್ರರನ್ನು ಸೆರೆಹಿಡಿಯಲು ರಾಜ್ಯದ ಭದ್ರತಾ ಪಡೆಗಳು ಮತ್ತು ಪ್ಯಾರಾಮಿಲಿಟರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ ಆಗುತ್ತದೆ ಎಂದು ಹೇಳಿದ್ದಾರೆ.