ಕೊಲಂಬೊ : ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ತನ್ನ ಬೆಂಬಲಿಗ ಸ್ವಾಮಿಯನ್ನು ಕೊಲೊಂಬೊದ ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನಾಗಿ ನೇಮಿಸಿದ್ದರು. ಇದನ್ನು ವಿರೋಧಿಸಿ ಕೊಲಂಬೊ ವಿಶ್ವವಿದ್ಯಾಲಯದ ಪದವೀಧರರು, ಪದವಿ ಪ್ರದಾನ ಸಮಾರಂಭದಲ್ಲಿ ಕುಲಪತಿ ವೆನ್ ಮುರುತ್ತೆಟ್ಟುವೆ ಆನಂದ ಥೇರರಿಂದ ತಮ್ಮ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ.
ಸ್ವಾಮೀಜಿಗಳನ್ನು ನೇಮಕ ಮಾಡಿರುವ
ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಕಪ್ಪು ರಿಬ್ಬನ್ ಧರಿಸಿ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಹೆಸರನ್ನು ಕೂಗಿದಾಗ ವೇದಿಕೆ ಮೇಲೆರಿದ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸದೆ ಹಾಗೇಯೆ ವಾಪಸ್ಸಾಗುವ ಮೂಲಕ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ ಹಾಗೂ ವಿದ್ಯಾರ್ಥಿಗಳ ಒಕ್ಕೂಟವು ಸಹ ಸ್ವಾಮೀಜಿ ನೇಮಕವನ್ನು ವಿರೋಧಿಸಿತ್ತು. ಆನಂದ ಥೇರಾ ಅವರನ್ನು ಕುಲಪತಿಯನ್ನಾಗಿ ನೇಮಿಸಿದ್ದಕ್ಕೆ ಬಹಳಷ್ಟು ಜನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಆಕ್ಷೇಪಣೆಯನ್ನು ಸಲ್ಲಿಸಿದ್ದರು. ವಿಶ್ವವಿದ್ಯಾಲಯಗಳ ಬಹಳಷ್ಟು ಉಪನ್ಯಾಸಕರು ಪದವಿ ಪ್ರದಾನ ಸಮಾರಂಭಕ್ಕೂ ಹಾಜರಾಗಲಿಲ್ಲ ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ಅಧ್ಯಾಪಕರ ಈ ಪ್ರತಿಭಟನೆಯ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು, ಬಹಳಷ್ಟು ಜನ ಇವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.