ಉಡುಪಿ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರು ಕಾಲೇಜಿನಿಂದ ತಮ್ಮ ವಿಳಾಸ, ಮೊಬೈಲ್ ಸಂಖ್ಯೆ ಸೋರಿಕೆ ಆಗಿದೆ ಎಂದು ಆರೋಪಿಸಿದ್ದು, ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಆರು ಜನ ವಿದ್ಯಾರ್ಥಿನಿಯರ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಪೋಷಕರ ವಿವರ ಮತ್ತು ವಿಳಾಸವನ್ನು ಒಳಗೊಂಡಂತೆ ಹಲವು ವಿಚಾರಗಳನ್ನು ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಆಲಿಯಾ ಅಸ್ಸಾದಿ, ಇದರಿಂದಾಗಿ ಸಾರ್ವಜನಿಕವಾಗಿ ಓಡಾಡಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ವಿವರ ಮತ್ತು ವಿಳಾಸದ ಬಗ್ಗೆ ಎಲ್ಲರಿಗೂ ತಿಳಿಸಲಾಗಿದೆ ಮತ್ತು ನನ್ನನ್ನು ಗುರಿಯಾಗಿಸುವ ಸಾಧ್ಯತೆಯಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಫೆಬ್ರವರಿ 9ರ ರಾತ್ರಿಯಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಈ ರೀತಿ ಮಾಹಿತಿಯನ್ನು ಹೊರ ಹಾಕಿರುವುದು ಕಾನೂನು ಬಾಹಿರ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿನಿ ಹಾಝರ ಶಿಫಾ ಅವರಿಗೂ ಹಾಗೂ ಅವರ ಕುಟುಂಬಕ್ಕೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ : ವಿದ್ಯಾರ್ಥಿನಿಯರು ಖಾಸಗಿ ಮಾಹಿತಿ ಸೋರಿಕೆಯಾಗಿದ್ದರ ವಿರುದ್ದ
ಮಹಿಳಾ ಆಯೋಗಕ್ಕೆ ಹಾಗೂ ಪಿಯು ಮಂಡಳಿಗೆ ಮಹಿಳಾ ಸಂಘಟನೆಗಳು ದೂರು ಸಲ್ಲಿಸಿವೆ. ದೂರು ಸಲ್ಲಿಸಿದ ನಂತರ ಜನಶಕ್ತಿ ಮೀಡಿಯಾ ಜೊತೆ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾ ಮಾತನಾಡಿ, ವಿದ್ಯಾರ್ಥಿನಿಯರ ದೂರವಾಣಿ ಸಂಖ್ಯೆ, ಪೋಷಕರ ಮೊಬೈಲ್ ನಂಬರ್, ಪಿಡಿಎಫ್ ಡಾಕ್ಯುಮೆಂಟ್, ಕಾಲೇಜಿನ ಲೆಡ್ಜರ್‌ನಿಂದ ಪ್ರವೇಶ ಫಾರ್ಮ್‌ಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿದ್ದು ಸ್ಪಷ್ಟವಾಗಿ ಕಂಡು ಬಂದಿದೆ. ಇದು ಶಿಕ್ಷಣ ಸಂಸ್ಥೆಯೊಳಗಿಂದ ಸೋರಿಕೆಯಾಗಿದೆ ಎಂದು ಸೂಚಿಸುತ್ತದೆ ಹಾಗಾಗಿ ಆಡಳಿತ ಮಂಡಳಿಯ ಮೇಲೆ ಕ್ರಮಜರುಗಿಸಬೇಕಿದೆ.
ಕಾಲೇಜಿನ ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷ, ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಕೈವಾಡವೂ ಇದೆ. ಈ ಎಲ್ಲಾ ಘಟನೆಗಳಿಗೆ ಇವರು ಪ್ರಮುಖ ಕಾರಣವಾಗಿದ್ದು ಇವರ ಮೇಲೂ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನಿಂದ ಸುಪ್ರೀಮ್ ಕೋರ್ಟ್ ಗೆ ಅರ್ಜಿಯನ್ನು ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ಕರ್ನಾಟಕ ಹೈಕೋರ್ಟ್, ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಸೂಚನೆ ನೀಡಿದ್ದು, ಧಾರ್ಮಿಕ ಗುರುತು ಸೂಚಿಸುವಂತಹ ವಸ್ತ್ರಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗಬಾರದು ಎಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮೌಖಿಕವಾಗಿ ಆದೇಶಿಸಿದ್ದಾರೆ. ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿದೆ.