ಕುಸಿದು ಬಿದ್ದ ಬಿಎಂಟಿಸಿ ಡ್ರೈವರ್‌ : ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಬಸ್‌ ಚಲಾಯಿಸಿ ಮಾನವಿಯತೆ ಮೆರೆದ ಎಸಿಪಿ

ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ಚಾಲಕ ಅಸ್ವಸ್ಥಗೊಂಡಿದ್ದರಿಂದ ನಡುರಸ್ತೆಯಲ್ಲಿ‌ ನಿಲ್ಲಿಸಿದ್ದ ಬಿಎಂಟಿಸಿ‌ ಬಸ್‌ ಅನ್ನು ಸಹಾಯಕ‌ ಪೊಲೀಸ್ ಕಮಿಷನರ್ (ಎಸಿಪಿ) ರಾಮಚಂದ್ರಪ್ಪ ಅವರು 1 ಕಿ.ಮೀ.ವರೆಗೆ ಚಲಾಯಿಸಿ ಸುರಕ್ಷಿತ‌ ಸ್ಥಳಕ್ಕೆ‌ ತಲುಪಿಸಿ ಮಾನವಿಯತೆ ಮೆರೆದಿದ್ದಾರೆ. ಈ ಒಂದು ಘಟನೆ ಸೋಷಿಯಲ್‌ ಮೀಡಿಯಾಗಳಲ್ಲಿ ಬಾರಿ ವೈರಲ್‌ ಆಗಿದ್ದು ಎಲ್ಲಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೋಮವಾರ ಶಿವಾಜಿನಗರ-ಕಾಡುಗೋಡಿ‌ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಚಾಲಕ ಮಾರ್ಗ ಮಧ್ಯದಲ್ಲಿಯೇ ಅಸ್ವಸ್ಥಗೊಂಡ ಪರಿಣಾಮ ಬಸ್‌ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಚಾಲಕ ತಲುಪಿದ್ದರು. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್​ ನಿಲ್ಲಿಸಿದ್ದ. ಎರಡು ದಿನಗಳ ವಿರೋಧ ಪಕ್ಷಗಳ ನಾಯಕರ ಸಭೆ ಹಿನ್ನೆಲೆ ನಗರಕ್ಕೆ ವಿಐಪಿಗಳ ಆಗಮನ ಹಿನ್ನೆಲೆ ಓಲ್ಡ್ ಏರ್ಪೋರ್ಟ್​ ರಸ್ತೆಯಲ್ಲಿ ಎಸಿಪಿ ರಾಮಚಂದ್ರಪ್ಪ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು.

ಇದನ್ನೂ ಓದಿ:ಬಸ್‌, ಆಟೋ, ಹಾಲಿನ ದರ ಹೆಚ್ಚಳ ಸಾಧ್ಯತೆ?!

ಈ ವೇಳೆ ರಸ್ತೆ ಮಧ್ಯ ನಿಂತಿದ್ದ ಬಿಎಂಟಿಸಿ ಬಸ್​ ಗಮನಿಸಿದ ರಾಮಚಂದ್ರಪ್ಪ ಅವರು ತಕ್ಷಣವೇ ಹೋಗಿ ಚಾಲಕನನ್ನು ಆಂಬ್ಯುಲೆನ್ಸ್‌ನಲ್ಲಿ‌ ಆಸ್ಪತ್ರೆಗೆ ಕಳುಹಿಸಿ, ಬಳಿಕ ಬಸ್ ಅನ್ನು ಸುಮಾರು ಒಂದು ಕಿ.ಮೀ ದೂರದವಿರುವ ಬಸ್​ ನಿಲ್ದಾಣದವರೆಗೆ ಸ್ವತಃ ತಾವೇ ಚಾಲನೆ ಮಾಡಿಕೊಂಡು ಹೋಗಿದ್ದಾರೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಎಸಿಪಿ ರಾಮಚಂದ್ರಪ್ಪ ಅವರು ಬಸ್ ಚಲಾಯಿಸುವ ವೀಡಿಯೊ ಮಾಡಿದ್ದಾರೆ. ನಂತರ ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ, ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿರುವ ಹಲವರು, ‘ತುರ್ತು ಸಂದರ್ಭದಲ್ಲಿ ಚಾಲಕನನ್ನು ಆಸ್ಪತ್ರೆಗೆ ಸೇರಿಸಿರುವ ರಾಮಚಂದ್ರಪ್ಪ ಅವರು ಇತರೆ ಅಧಿಕಾರಿಗಳಿಗೆ ಮಾದರಿ’ ಎಂದು ಹಾಡಿ ಹೊಗಳಿದ್ದಾರೆ.

ಬಿಎಂಟಿಸಿ ಚಾಲಕ ಗೋಪಿ ಎಂದು ಗುರುತಿಸಲಾಗಿದ್ದು, ‘330’ ಮಾರ್ಗದಲ್ಲಿ ಕಾಡುಗೋಡಿ ಮತ್ತು ಶಿವಾಜಿನಗರ ನಡುವೆ ಬಸ್ ಓಡಿಸುತ್ತಿದ್ದಾಗ, ಮಧ್ಯಾಹ್ನ 12 ರ ಸುಮಾರಿಗೆ ಕಮಾಂಡ್ ಆಸ್ಪತ್ರೆ ಬಳಿ ಅಸ್ವಸ್ಥರಾಗಿದ್ದರು. ಸದ್ಯ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನೋಡಿಕೊಳ್ಳಲು ಮತ್ತು ಅವರ ಚಿಕಿತ್ಸೆಯ ಮೇಲ್ವಿಚಾರಣೆಗೆ ಸಂಬಂಧಪಟ್ಟ ಬಿಎಂಟಿಸಿ ಡಿಪೋ ಮ್ಯಾನೇಜರ್ ಗೆ ಸೂಚಿಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *