ಕೊಬ್ಬರಿ ದರ ಇಳಿಕೆಯಿಂದ ತೆಂಗು ಕೃಷಿಕರು ತೀವ್ರ ಕಂಗಾಲಾಗಿದ್ದು ಬೆಂಬಲ ಬೆಲೆ ನೀಡಬೇಕು ಎಂದು ಹೋರಾಟ ಪ್ರಾರಂಭಿಸಿದ್ದಾರೆ. ಕೇಂದ್ರ ಸರ್ಕಾರ ಕೊಬ್ಬರಿಗೆ ಕ್ವಿಂಟಾಲಿಗೆ ರೂ.20,000 ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರ ರೂ.5,000 ಪ್ರೋತ್ಸಹ ಧನ ನೀಡಬೇಕು ಎಂದು ಒತ್ತಾಯಿಸಿ ಹಾಗೂ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ”ರಾಜಭವನ ಚಲೋ” ಆಂದೋಲನ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ತೆಂಗು ಬೆಳಗಾರರ ಸಂಘದ ರಾಜ್ಯ ಸಂಚಾಲಕ ಎಚ್. ಆರ್. ನವೀನ್ ಕುಮಾರ್ ಅವರು ಜನಶಕ್ತಿ ಮೀಡಿಯಾ ಜೊತೆಗೆ ತೆಂಗು ಬೆಳಗಾರರ ಸಮಸ್ಯೆಗಳು ಮತ್ತು ಸಂಕಷ್ಟಗಳ ಬಗ್ಗೆ ಮಾತನಾಡಿದ್ದು, ಅದಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಬೇಕು ಎಂಬ ಬಗ್ಗೆ ಬೆಳಕು ಚೆಲ್ಲಿದ್ದಾರೆ.
- ತೆಂಗು ಕೃಷಿಯನ್ನು ಯಾವೆಲ್ಲಾ ಕಡೆಗಳಲ್ಲಿ ಬೆಳೆಯುತ್ತಾರೆ? ಅದರ ಖರ್ಚು ವೆಚ್ಚಗಳು, ಸಮಸ್ಯೆಗಳು ಮತ್ತು ಪರಿಹಾರಗಳು ಒಂದೇ ರೀತಿಯಲ್ಲಿ ಇವೆಯೆ?
ಎಚ್. ಆರ್. ನವೀನ್ ಕುಮಾರ್: ಕರ್ನಾಟಕದಲ್ಲಿ ಮುಖ್ಯವಾಗಿ 15 ಜಿಲ್ಲೆಗಳಲ್ಲಿ ತೆಂಗು ಬೆಳೆಯುತ್ತಾರೆ. ಈ 15 ಜಿಲ್ಲೆಗಳಲ್ಲೂ ತೆಂಗು ಎಂಬುವುದು ಒಂದೊಂದು ರೀತಿಯ ಸ್ವರೂಪದ ಬೆಳೆಯಾಗಿದೆ. ರಾಜ್ಯದ ಬೇರೆ ಬೇರೆ ಪ್ರದೇಶದಲ್ಲಿ ಬೆಳೆಯುವ ತೆಂಗು ಬೇರೆ ಬೇರೆ ತೆಂಗಿನ ಉತ್ಪನ್ನಕ್ಕೆ ಪ್ರಸಿದ್ದವಾಗಿದೆ. ತುಮಕೂರಿನ ತಿಪಟೂರು ಮತ್ತು ಹಾಸನದ ಅರಸೀಕೆರೆಯಲ್ಲಿ ಬೆಳೆಯುವ ತೆಂಗನ್ನು ಮುಖ್ಯವಾಗಿ ಕೊಬ್ಬರಿಗೆ ಬಳಸಿಕೊಳ್ಳುತ್ತಾರೆ. ಆದರೆ ಮಂಡ್ಯದ ಸುತ್ತಮುತ್ತ ಬೆಳೆಯುವ ತೆಂಗನ್ನು ಎಳನೀರಿಗೆ ಪ್ರಸಿದ್ಧಿಯಾಗಿದೆ. ಮಂಡ್ಯದ ಮದ್ದೂರಿನ ಮಾರುಕಟ್ಟೆಯಿಂದ ದಿನಂಪ್ರತಿ ಮುಂಬೈಯಂತಹ ಮಹಾನಗರಕ್ಕೆ ನೂರಾರು ಲೋಡು ಎಳನೀರನ್ನು ಕಳುಹಿಸಿಕೊಡಲಾಗುತ್ತದೆ. ಅದೇ ರೀತಿ ಅರಸೀಕೆರೆ ಮತ್ತು ತಿಪಟೂರು ಮಾರುಕಟ್ಟೆಯಿಂದ ಲಕ್ಷಾಂತರ ಕ್ವಿಂಟಾಲ್ ಕೊಬ್ಬರಿ ರಫ್ತಾಗುತ್ತದೆ. ಉಳಿದಂತೆ ಮಲೆನಾಡು ಮತ್ತು ಕರಾವಳಿ ಸೇರಿದಂತೆ ಉಳಿದ ಕಡೆಗಳಲ್ಲಿ ಬೆಳೆಯುವ ತೆಂಗು ಅಡುಗೆ ಹಾಗೂ ಸ್ಥಳೀಯವಾಗಿ ಬಳಸಲಾಗುತ್ತದೆ. ಇದನ್ನೂ ಓದಿ:ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸಂಯುಕ್ತ ಹೋರಾಟ-ಕರ್ನಾಟಕ ತೆಂಗು ಬೆಳೆಗಾರರ ರಾಜ್ಯ ಸಮನ್ವಯ ಸಮಿತಿ ಆಗ್ರಹ
ರಾಜ್ಯದ ಬೇರೆ ಬೇರೆ ಪ್ರದೇಶದಲ್ಲಿ ಹಲವು ಸ್ವರೂಪದಲ್ಲಿ ಬೆಳೆಸುವ ಬೆಳೆಯಾಗಿರುವುದರಿಂದ, ತೆಂಗಿನ ಕೃಷಿಯ ಖರ್ಚು ವೆಚ್ಚಗಳೂ ಪ್ರದೇಶವಾರೂ ಬೇರೆ ಬೇರೆಯದ್ದೇ ಆಗಿದ್ದು, ಸಮಸ್ಯೆಗಳೂ ಬೇರೆ ಬೇರೆಯದ್ದೇ ಇರುತ್ತವೆ. ಆದರೆ ಈಗ ತೀವ್ರವಾಗಿ ಸಮಸ್ಯೆಯಿಂದ ಬಳಲುತ್ತಿರುವವರು ‘ಕೊಬ್ಬರಿ’ ಬೆಳೆಯುವ ತೆಂಗು ಕೃಷಿಕರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಹಳೆ ಮೈಸೂರು ಸುತ್ತ ಮುತ್ತಲಿನ ತೆಂಗು ಬೆಳೆಗಾರರು ಕೊಬ್ಬರಿಯ ದರ ಇಳಿಕೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ.
ತೆಂಗು ಕೃಷಿಗೆ ಬೇರೆ ಬೇರೆ ಸಮಸ್ಯೆಗಳಿವೆ, ಮೊದಲನೇ ಸಮಸ್ಯೆ ನೀರಾವರಿಯದ್ದಾಗಿದೆ. ಯಾಕೆಂದರೆ ತೆಂಗು ಕೃಷಿಗೆ ವರ್ಷ ಪೂರ್ತಿ ನೀರು ಬೇಕಾಗುತ್ತದೆ. ಒಂದು ವೇಳೆ ಮಳೆ ಸರಿಯಾಗಿ ಆಗಿಲ್ಲವೆಂದರೆ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತದೆ. ಈ ಸಮಸ್ಯೆ ಬಯಲು ಸೀಮೆ ಅದರಲ್ಲೂ ಮುಖ್ಯವಾಗಿ ಹಾಸನ, ಮಂಡ್ಯ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳ ತೆಂಗು ಕೃಷಿಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಳೆನಾಡು ಮತ್ತು ಕರಾವಳಿಗೆ ಈ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಬೇರೆ ಬೆಳೆಯಂತೆ ತೆಂಗು ಬೆಳೆ ನಾಲೆಯ ನೀರನ್ನು ಅವಲಂಬಿಸಿ ಮಾಡಲಾಗುವುದಿಲ್ಲ. ಬಯಲು ಪ್ರದೇಶದಲ್ಲಿ ತೆಂಗು ಕೃಷಿಗೆ ಮಳೆಯನ್ನು ಮತ್ತು ತೆರೆದ ಬಾವಿಯ ನೀರನ್ನೆ ಅವಲಂಬಿಸಿ ಮಾಡಲಾಗುತ್ತದೆ. ಸರಿಯಾದ ರೀತಿಯಲ್ಲಿ ಮಳೆ ಬಂದಿಲ್ಲವೆಂದರೆ ಭಾರಿ ಪ್ರಮಾಣದಲ್ಲಿ ರೈತರು ನಷ್ಟವನ್ನು ಅನುಭವಿಸಬೇಕಾಗುತ್ತದೆ.
- ಕೃಷಿಯೆಂದರೆ ಅದಕ್ಕೆ ರೋಗಗಳೂ ಬರುತ್ತದೆ. ತೆಂಗು ಬೆಳೆಗೆ ರೋಗಗಳು ಬಂದರೆ ಸರ್ಕಾರದ ಕರ್ತವ್ಯವೇನು? ರೈತರು ಸರ್ಕಾರದಿಂದ ಏನು ಬಯಸುತ್ತಾರೆ?
ಎಚ್. ಆರ್. ನವೀನ್ ಕುಮಾರ್: 15 ವರ್ಷಗಳ ಹಿಂದೆ ತೆಂಗು ಬೆಳೆಗೆ ನುಸಿ ರೋಗ ಎಂಬ ಕಾಯಿಲೆ ಬಂದಿತ್ತು. ಈಗ ಆ ರೋಗ ಇಲ್ಲ. ಈ ರೋಗ ತೆಂಗಿನ ಹೊಂಬಾಳೆಗೆ ಬಡಿದು ಕಾಯಿ ಕಟ್ಟುತ್ತಿರಲಿಲ್ಲ. ಇದರಿಂದ ರೈತರು ಸಿಕ್ಕಾಪಟ್ಟೆ ತೊಂದರೆಗೆ ಒಳಗಾಗಿದ್ದರು. ತೆಂಗಿನ ಬೆಳೆಯು ದೀರ್ಘಾವಧಿಯ ಬೆಳೆಯಾಗಿದ್ದು, ಫಸಲು ಬರಬೇಕೆಂದರೆ ರೈತ ಅದನ್ನು ಕಾಳಜಿ ವಹಿಸಿ ಏಳೆಂಟು ವರ್ಷ ಸಾಕಬೇಕಾಗುತ್ತದೆ. ಏಳೆಂಟು ವರ್ಷ ಅದಕ್ಕೆ ಬಂಡವಾಳ ಹಾಕಬೇಕಾಗುತ್ತದೆ. ಇಷ್ಟು ಕಷ್ಟಪಟ್ಟು ಬೆಳೆಸಿದರೂ, ಫಸಲು ಬರುವಾಗ ಅದಕ್ಕೆ ರೋಗ ಬಂದರೆ ಎಂಟು ವರ್ಷಗಳ ಶ್ರಮ ವ್ಯರ್ಥವಾಗುತ್ತದೆ. ಅಲ್ಲದೆ, ತೆಂಗು ಬೆಳೆ ಬೇಡವೆಂದು ಹೊಲವನ್ನು ಹಸನು ಮಾಡಿ ಪರ್ಯಾಯ ಬೆಳೆ ಮಾಡಬೇಕೆಂದರೂ ಅದು ಕೂಡಾ ತುಂಬಾ ಸಮಯವನ್ನು ಬೇಡುತ್ತದೆ. ಯಾಕೆಂದರೆ ಪ್ರಮುಖ ತೋಟಗಾರಿಕಾ ಬೆಳಗಳಾದ ತೆಂಗು ಮತ್ತು ಅಡಿಕೆಯ ಬೇರುಗಳು ಇಡೀ ಜಮೀನಿಗೆ ಹರಡಿರುತ್ತದೆ. ಅವುಗಳನ್ನು ಹಸನು ಮಾಡುವಷ್ಟರಲ್ಲಿ ರೈತನಲ್ಲಿ ಇದ್ದ ಬಂಡವಾಳ ಕೂಡಾ ನಷ್ಟವಾಗುತ್ತದೆ.
ಮತ್ತೊಂದು, ಚಿತ್ರದುರ್ಗದಂತಹ ಮಳೆ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಚುಕ್ಕಿ ರೋಗ ಕೂಡಾ ತೆಂಗಿಗೆ ಬಂದಿದೆ. ಈ ರೋಗದಿಂದಾಗಿ ತೆಂಗಿನ ಮರದಲ್ಲಿನ ಗರಿಗಳು ಕಪ್ಪು ಮರದಿಂದ ಉದುರಿ ಕೆಳಗೆ ಬೀಳುತ್ತದೆ. ಹೀಗೆ ಉದುರುವಾಗ ಗೊನೆಯ ಭಾರ ತಾಳಲಾರದೆ ಕೆಳಗೆ ಬೀಳುತ್ತದೆ. ಈ ತರದ ಕೆಲವು ಸಮಸ್ಯೆಗಳನ್ನು ತೆಂಗು ಬಳೆಗಾರರು ಅನುಭವಿಸುತ್ತಿದ್ದಾರೆ. ರಾಜ್ಯದ ಎಲ್ಲಾ ತೆಂಗು ಬೆಳೆಗಾರರು ಒಂದೇ ರೀತಿಯ ಸಮಸ್ಯೆಯಿಲ್ಲ ಹಾಗೂ ಒಂದೇ ರೀತಿಯ ಪರಿಹಾರವೂ ಇಲ್ಲ.
ರೈತ ಸಂಘವಾಗಿ ನಮ್ಮ ಬೇಡಿಕೆ ಏನೆಂದರೆ, ಪ್ರತಿ ತಾಲೂಕನ್ನು ಒಂದು ಘಟಕವವೆಂದು ತೋಟಗಾರಿಕೆ ಇಲಾಖೆ ಪರಿಗಣಿಸಬೇಕಿದೆ. ನಂತರ ಆ ತಾಲೂಕಿನಲ್ಲಿ ತೆಂಗು ಬೆಳೆಗಾರರ ಸಮಸ್ಯೆ ಏನಿದೆ ಎಂಬುವುದನ್ನು ಹುಡುಕಿ ಪರಿಹಾರ ಕಂಡುಕೊಳ್ಳಬೇಕಿದೆ. ಇದನ್ನೂ ಓದಿ: ಹೋರಾಟದ ಹಕ್ಕಿಗಾಗಿ ಆಂದೋಲನ | ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
- ಈ ರೀತಿಯಾಗಿ ರೋಗ ಬಂದಾಗ ಕೃಷಿ ವಿಶ್ವವಿದ್ಯಾಲಯಗಳು ತೆಂಗು ಕೃಷಿಕರಿಗೆ ಹೇಗೆ ಸಹಾಯ ಮಾಡಿವೆ? ಸರ್ಕಾರ ಹೇಗೆ ನಡೆದು ಕೊಂಡಿದೆ?
ಎಚ್. ಆರ್. ನವೀನ್ ಕುಮಾರ್: ರೋಗಗಳು ಬರದಂತೆ ತಡೆಗಟ್ಟುವುದು ಹೇಗೆ, ರೋಗ ಬಂದರೆ ಅದನ್ನು ಹೇಗೆ ನಿರ್ವಹಿಸಬೇಕು ಎಂದು ಸರ್ಕಾರ ರೈತನಿಗೆ ತಿಳುವಳಿಕೆ ನೀಡಬೇಕಿತ್ತು. ನಮ್ಮ ದುರಾದೃಷ್ಟ ಏನೆಂದರೆ, ಈ ವರೆಗೆ ಸರ್ಕಾರ ಯಾವುದೆ ಅಧೀಕೃತ ಇಲಾಖೆಗಳು ಇಂತಹ ಯಾವುದೆ ಕೆಲಸವನ್ನು ಮಾಡುತ್ತಿಲ್ಲ. ಬದಲಾಗಿ ರೈತರೆ ತಮ್ಮ ಹಿಂದಿನ ಅನುಭವದ ಆಧಾರ ಮೇಲೆ ರೋಗಗಳಿಗೆ ಚಿಕಿತ್ಸೆ ಮಾಡುತ್ತಾರೆ.
ಸಾಮಾನ್ಯವಾಗಿ ರೈತರು ಸಮಸ್ಯೆ ಬಂದ ಒಂದು ನಿರ್ದಿಷ್ಟ ಕಾಲಾವಧಿಯ ಒಳಗಡೆ ರೋಗಗಳಿಗೆ ಪರಿಹಾರ ನಿರೀಕ್ಷೆ ಮಾಡುತ್ತಾರೆ. ಆದರೆ ಈ ಸಮಸ್ಯೆ ಬಂದು ರೈತರೆಲ್ಲಾ ನಷ್ಟ ಅನುಭವಿಸಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿಕೆಯಾಗಿ, ಅದಕ್ಕೆ ಸಂಬಂಧಪಟ್ಟ ಅಧ್ಯಯನ ಮಾಡಿ ಎಂದು ಸರ್ಕಾರ ತೀರ್ಮಾನಿಸಿ ಇಲಾಖೆಗಳಿಗೆ ಮತ್ತು ಕೃಷಿ ವಿಶ್ವವಿದ್ಯಾಲಯಗಳಿಗೆ ಕಳಿಸುವಷ್ಟರಲ್ಲಿ ಕನಿಷ್ಠ ಐದಾರು ವರ್ಷಗಳಾಗಿರುತ್ತವೆ. ಅಷ್ಟರಲ್ಲಿ ಇರುವ ಸಮಸ್ಯೆಯೆ ಇಲ್ಲದಾಗಿ ಬೇರೆಯೆ ಹೊಸ ಸಮಸ್ಯೆಗಳು ರೈತರ ಮುಂದಿರುತ್ತವೆ. ಆದರೆ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸರ್ಕಾರದ ಆದೇಶದಂತೆ ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನದಲ್ಲಿ ಇರುತ್ತಾರೆ. ಇಂತಹ ಸಮಸ್ಯೆಗಳಿಗೆ ನಿರ್ದಿಷ್ಟ ಕಾಲಾವಧಿಯೊಳಗೆ ಪರಿಹಾರ ಕಂಡುಹಿಡಿಯದಿದ್ದರೆ ಯಾವ ಪ್ರಯೋಜನವೂ ಆಗುವುದಿಲ್ಲ.
- ಕೊಬ್ಬರಿಗೆ ಕನಿಷ್ಠ ಬೆಲೆ ನೀಡಬೇಕು ಎಂದು ಸರ್ಕಾರದ ಜೊತೆಗೆ ನೀವು ಕೇಳುತ್ತಿದ್ದೀರಿ, ಆದರೆ ಈ ಬೆಲೆಯನ್ನು ಯಾವ ಆಧಾರದಲ್ಲಿ ಕೇಳುತ್ತಿದ್ದೀರಿ?
ಎಚ್. ಆರ್. ನವೀನ್ ಕುಮಾರ್: ಕೊಬ್ಬರಿಗೆ ನಾವು 20 ಸಾವಿರ ರೂ.ಗಳ ಕನಿಷ್ಟ ಬೆಂಬಲ ಬೆಲೆಯನ್ನುಸರ್ಕಾರ ನಿಗದಿ ಮಾಡಿರುವ ಬೆಲೆಯ ಆಧಾರದಲ್ಲೆ ಕೇಳುತ್ತಿದ್ದೇವೆ. ದೆಹಲಿಯಲ್ಲಿರುವ ಕೇಂದ್ರ ಸರ್ಕಾರದ ಸಿಎಸಿಪಿ ಸಂಸ್ಥೆಗೆ(ಭಾರತದ ಯಾವುದೆ ಕೃಷಿ ಉತ್ಪನ್ನಕ್ಕೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ಸಂಸ್ಥೆ) ಕರ್ನಾಟಕದ ತೋಟಗಾರಿಕೆ ಇಲಾಖೆಯು ಶಿಫಾರಸ್ಸು ಪತ್ರವೊಂದನ್ನು ಕಳುಹಿಸಿದೆ. ಪತ್ರದಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿಯ ಉತ್ಪಾದನಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು 16,730 ರೂ. ಬೆಲೆ ನಿಗದಿ ಮಾಡಬೇಕು ಎಂದು ಹೇಳಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿಯ ಬೆಲೆ 5ರಿಂದ 8 ಸಾವಿರದ ವರೆಗಷ್ಟೆ ಇವೆ. ಒಂದು ಕಾಲದಲ್ಲಿ 1 ಕ್ವಿಂಟಾಲ್ ಕೊಬ್ಬರಿಯ ಬೆಲೆ 18 ಸಾವಿರದ ವರೆಗೂ ಆಗಿತ್ತು.
ಈಗಿನ ನಮ್ಮ ಬೇಡಿಕೆ ಏನೆಂದರೆ, ಸರ್ಕಾರ ಈಗ ಹಾಕಿರುವ ದರ ನಿಗದಿ ಸರ್ಕಾರಿ ಆಧಾರದ ಲೆಕ್ಕಚಾರವಾಗಿದೆ. ಅಂದರೆ, ನಿರಂತರ ಮಳೆ ಬರುವ ಒಂದು ಎಕರೆ ತೋಟದಲ್ಲಿ ಇಂತಿಷ್ಟು ಇಳುವರಿ ಬರುತ್ತದೆ ಎಂಬುವುದು ಸರ್ಕಾರದ ಲೆಕ್ಕಾಚಾರವಾಗಿದೆ. ಇಲ್ಲಿನ ಸಮಸ್ಯೆಯೇನೆಂದರೆ ಮಳೆ ವ್ಯತ್ಯಾಸವಾದರೆ ಇಳುವರಿ ವ್ಯತ್ಯಾಸವಾಗುತ್ತದೆ. ಅಲ್ಲದೆ, ಸರ್ಕಾರ ಲೆಕ್ಕಾಚಾರ ಮಾಡುವಾಗ ಇದ್ದ ಗೊಬ್ಬರದ ದರ, ಕೂಲಿ ಯಾವತ್ತಿಗೂ ಹಾಗೆಯೆ ಇರುವುದಿಲ್ಲ. ಅವುಗಳು ನಿರಂತರವಾಗಿ ಹೆಚ್ಚುತ್ತಾ ಹೋಗುತ್ತದೆ. ಈ ಎಲ್ಲಾ ಬದಲವಾಣೆ ಕಾಲ ಕಾಲಕ್ಕೆ ಆಗುತ್ತಿರುವುದರಿಂದ ಸರ್ಕಾರ ಪರಿಗಣಿಸಿರುವ 16 ಸಾವಿರದ ಬದಲಾಗಿ ಕನಿಷ್ಠ 20 ಸಾವಿರು ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನೀಡಬೇಕಿದೆ ಎಂಬುವುದು ನಮ್ಮ ಬೇಡಿಕೆಯಾಗಿದೆ. ಜೊತೆಗೆ ರಾಜ್ಯ ಸರ್ಕಾರ 5 ಸಾವಿರ ರೂಗಳನ್ನು ಪ್ರೂತ್ಸಾಹ ಬೆಲೆಯನ್ನು ನೀಡಬೇಕಿದೆ. ಇದನ್ನೂ ಓದಿ: ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿ ರದ್ದುಪಡಿಸಲು ಕೆಪಿಆರ್‌ಎಸ್ ಆಗ್ರಹ
- ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರದ ಬಳಿಯೆ ಯಾಕೆ ಕೇಳುತ್ತಿದ್ದೀರಿ? ನೀವು ಯಾಕೆ ರಾಜ್ಯ ಸರ್ಕಾರದ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಕೇಳುತ್ತಿಲ್ಲ?
ಎಚ್. ಆರ್. ನವೀನ್ ಕುಮಾರ್: ತೆಂಗು ಸೇರಿದಂತೆ ಭಾರತದ ಕೆಲವೊಂದು ಬೆಳೆಗಳನ್ನು ಖರೀದಿ ಮಾಡುವ ಮತ್ತು ರಫ್ತು ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರವಾಗಿದೆ. ರಾಜ್ಯಕ್ಕೆ ಈ ಅಧಿಕಾರ ಇಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರವೇ ಬೆಲೆ ನಿಗದಿ ಮಾಡಿ ಎಪಿಎಂಸಿ ಮೂಲಕ ನಫೆಡ್ ಖರೀದಿ ಕೇಂದ್ರಗಳನ್ನು ತೆರೆಯುತ್ತದೆ. ನಂತರ ಯಾರು ತೆಂಗು ಬೆಳೆಯುವ ರೈತರು ಎಂದು ಅವರ ಪಹಣಿಯ ಮೂಲಕ ನೋಂದಣಿ ಮಾಡುತ್ತದೆ. ಆದರೆ, ಕೇಂದ್ರ ಸರ್ಕಾರ ಒಂದು ಎಕರೆಗೆ 5 ಕ್ವಿಂಟಾಲ್ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡುತ್ತೇವೆ ಎಂದು ಹೇಳುತ್ತದೆ. ಇಲ್ಲಿನ ಸಮಸ್ಯೆಯೇನಂದರೆ, ಒಂದು ಎಕರೆಯಲ್ಲಿ ಒಬ್ಬ ರೈತ ಕನಿಷ್ಠ 10 ಕ್ವಿಂಟಾಲ್ ಕೊಬ್ಬರಿ ಬೆಳೆಯುತ್ತಾರೆ. ಹಾಗಾರೆ ಅವರು ಉಳಿದ ಬೆಳೆಗಳನ್ನು ಏನು ಮಾಡಬೇಕು?
ಅಷ್ಟೆ ಅಲ್ಲದೆ, ತೆಂಗು ಖರೀದಿ ಕೇಂದ್ರ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ತೆರೆದಿರುತ್ತದೆ. ತೆಂಗು ವಾರ್ಷಿಕ ಬೆಳೆಯಾದರೂ, ಇಂತದೇ ಸಮಯದಲ್ಲಿ ಕೊಬ್ಬರಿ ಆಗುತ್ತದೆ ಎನ್ನಲು ಅದು ಋತು ಆಧಾರಿತ ಬೆಳೆಯಲ್ಲ. ಖರೀದಿ ಕೇಂದ್ರ ತೆರೆದಾಗ ಎಲ್ಲಾ ರೈತರಲ್ಲಿ ಕೊಬ್ಬರಿ ಇರುತ್ತದೆ ಎಂದೇನಿಲ್ಲ. ತೆಂಗು ವರ್ಷ ಪೂರ್ತಿ ಬೆಳೆಯುತ್ತಲೆ ಇರುತ್ತದೆ ಹಾಗೂ ಕೊಬ್ಬರಿ ವರ್ಷದ ಎಲ್ಲಾ ಸಮಯಗಳಲ್ಲೂ ಮಾರುಕಟ್ಟೆಗೆ ಬರುತ್ತಲೆ ಇರುತ್ತದೆ. ಹಾಗಾರೆ ಖರೀದಿ ಕೇಂದ್ರ ಮುಚ್ಚಿದ ನಂತರ ಒಣಗಿಸಿದ ಕೊಬ್ಬರಿಯನ್ನು ರೈತರು ಏನು ಮಾಡಬೇಕು? ಕೇಂದ್ರ ಸರ್ಕಾರದ ಈ ನಿಯಮವೇ ರೈತರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ.
ಹಾಗಾಗಿ ನಮ್ಮ ಬೇಡಿಕೆ ಏನೆಂದರೆ, ಎಪಿಎಂಸಿ ಮಾರುಕಟ್ಟೆಗಳು ಹೇಗೆ ವರ್ಷಪೂರ್ತಿ ತೆರೆದಿರುತ್ತದೆಯೊ, ಹಾಗೆಯೆ ತೆಂಗು ಖರೀದಿ ಮಾಡುವ ನಫೆಡ್ ವರ್ಷ ಪೂರ್ತಿ ತೆರೆದಿರಬೇಕು. ಜೊತೆಗೆ ಎಕರೆಗಿಷ್ಟೆ ಖರೀದಿ ಮಾಡುತ್ತೇವೆ ಎಂಬ ಮಿತಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿ, ರೈತ ಬೆಳೆದ ಎಲ್ಲಾ ಕೊಬ್ಬರಿಯನ್ನು ಖರೀದಿ ಮಾಡುವಂತಿರಬೇಕು. ಇದನ್ನೂ ಓದಿ: ಸೆ- 27 ನೈಸ್ ಕಂಪನಿ ದೌರ್ಜನ್ಯ ಹಾಗೂ ಭ್ರಷ್ಟಾಚಾರ ವಿರೋಧಿಸಿ ದುಂಡು ಮೇಜಿನ ಸಭೆ
- ಹಿಂದೊಮ್ಮೆ 18 ಸಾವಿರದವರೆಗೂ ಕೊಬ್ಬರಿ ದರ ಇತ್ತು ಎಂದು ನೀವು ಹೇಳಿದ್ದೀರಿ. ಈಗ ಅದೇ ಕೊಬ್ಬರಿಗೆ 5-8 ಸಾವಿರ ರೂಗಳಷ್ಟು ದರ ಇಳಿದಿದೆ. ಅರ್ಧಕ್ಕಿಂತ ಹೆಚ್ಚು ದರ ಇಳಿಯಲು ಕಾರಣವೇನು?
ಎಚ್. ಆರ್. ನವೀನ್ ಕುಮಾರ್: ಕೊಬ್ಬರಿಯನ್ನು ಮುಖ್ಯವಾಗಿ ಎಣ್ಣೆಗೆ ಬಳಕೆಯಾಗುತ್ತದೆ. ಆದರೆ ನಮ್ಮ ದೇಶಕ್ಕೆ ಪಾಮ್ ಆಯಿಲ್ ಸೇರಿದಂತೆ ಬೇರೆ ಬೇರೆ ರೀತಿಯ ಎಣ್ಣೆಯನ್ನು ಅತ್ಯಂತ ಕಡಿಮೆ ತೆರಿಗೆಯ ಮೂಲಕ ಆಮದು ಮಾಡಲಾಗುತ್ತಿದೆ. ಈ ರೀತಿಯಾದಾಗ ಕೊಬ್ಬರಿ ಎಣ್ಣೆಗೆ ಬೇಡಿಕೆ ಕಡಿಮೆಯಾಗಿ ಬೆಲೆ ತನ್ನಿಂದ ತಾನೆ ಇಳಿಕೆಯಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ನಿಯಂತ್ರಣ ಹೇರದೆ ಕೊಬ್ಬರಿಗೆ ಬೆಲೆ ಕೊಡಿ ಎಂದರೆ ಏನೂ ಪ್ರಯೋಜನವಾಗುವುದಿಲ್ಲ. ಇವೆಲ್ಲವೂ ಕೇಂದ್ರ ಸರ್ಕಾರದ ಕೈಯ್ಯಲ್ಲಿ ಇರುವುದರಿಂದ ನಾವು ಕೇಂದ್ರವನ್ನೆ ಕೇಳಬೇಕಿದೆ.
ಅಷ್ಟೆ ಅಲ್ಲದೆ, ನಮ್ಮ ಆಂತರಿಕ ಮಾರುಕಟ್ಟೆಯನ್ನು ಸುಧಾರಣೆ ಮಾಡಿದರೆ ಕೊಬ್ಬರಿ ಬೆಲೆ ಹೆಚ್ಚು ಮಾಡಲು ಸಾಧ್ಯವಿದೆ. ಇವತ್ತಿಗೂ ಕರಾವಳಿ ಮತ್ತು ಕೇರಳವನ್ನು ಬಿಟ್ಟರೆ ಕೊಬ್ಬರಿ ಎಣ್ಣೆಯನ್ನು ಅಡುಗೆ ಬಳಸುವವರು ಕಡಿಮೆಯಿದ್ದಾರೆ. ಕೊಬ್ಬರಿ ಎಣ್ಣೆಯ ಬಳಕೆಯಿಂದ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಲಾಭವಿದೆ ಎಂಬುವುದನ್ನು ಸರ್ಕಾರ ಪ್ರಚಾರ ಮಾಡಬೇಕಿದೆ. ಅಲ್ಲದೆ, ಅಕ್ಷರ ದಾಸೋಹದಂತಹ ಬಿಸಿಯೂಟ ಯೋಜನೆ, ಅಂಗನವಾಡಿ, ಸರ್ಕಾರಿ ಹಾಸ್ಟೆಲ್‌ಗಳಿಗೆ ತೆಂಗಿನ ಎಣ್ಣೆಯನ್ನು ಸರ್ಕಾರ ಬಳಸಿದರೆ ಸ್ಥಳೀಯವಾಗಿಯೆ ಕೊಬ್ಬರಿಗೆ ಬೇಡಿಕೆ ಹೆಚ್ಚಾಗುತ್ತದೆ.
ಬೇರೆ ಎಲ್ಲಾ ಬೆಳೆಗಳಿಗೆ ಹೋಲಿಸಿದರೆ ತೆಂಗು ಮಾತ್ರ ಒಂದು ಸಣ್ಣ ತ್ಯಾಜ್ಯವೂ ಇಲ್ಲದ ಉತ್ಪನ್ನವಾಗಿದೆ. ತೆಂಗಿನ ಪ್ರತಿಯೊಂದು ವಸ್ತುಗಳನ್ನು ಉಪ ಉತ್ಪನ್ನವಾಗಿ ಬಳಸಬಹುದು. ಅದಕ್ಕಾಗಿ ಸ್ಥಳೀಯವಾಗಿ ಉದ್ದಿಮೆಗಳನ್ನು ಸರ್ಕಾರ ಪ್ರಾರಂಭಿಸಿದರೆ ಜನರಿಗೆ ಉದ್ಯೋಗವೂ ಸಿಗುತ್ತದೆ. ಅದನ್ನು ಕೇರಳ ರಾಜ್ಯದಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಕೊಬ್ಬರಿಗೆ ಬೆಲೆ ಸಿಗಬೇಕು ಎನ್ನುವುದು ಇಂದಿನ ಸಣ್ಣದೊಂದು ಬೇಡಿಕೆಯಾದರೂ, ತೆಂಗು ಬೆಳೆಗಾರರು ಶಾಶ್ವತವಾಗಿ ಉಳಿಯಬೇಕೆಂದರೆ ಸರ್ಕಾರ ತೆಂಗಿನ ಉತ್ಪನ್ನವನ್ನು ಬಳಸಿ ಮಾಡುವ ಉದ್ದಿಮೆಗಳನ್ನು ಪ್ರಾರಂಭಿಸಬೇಕಾಗುತ್ತದೆ. ಇದನ್ನೂ ಓದಿ: ರೈತ, ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಮಹಾಪಡಾವ್‌ಗೆ ಸಂಯುಕ್ತ ಹೋರಾಟ ಕರ್ನಾಟಕ ನಿರ್ಧಾರ
- ರೈತರ ಹೋರಾಟಗಳಲ್ಲಿ ತುಮಕೂರು ಫುಡ್ ಪಾರ್ಕ್ ಬಗ್ಗೆ ಹೇಳಲಾಗುತ್ತದೆ. ಏನಿದು ವಿಚಾರ?
ಎಚ್. ಆರ್. ನವೀನ್ ಕುಮಾರ್: ತುಮಕೂರು ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ಮುಖ್ಯವಾಗಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತದೆ. ಅಲ್ಲಿ ಬೆಳೆಯುವ ತರಕಾರಿ ಮತ್ತು ಹಣ್ಣುಗಳನ್ನು ಬಳಸಿ ಫುಡ್ ಪ್ರಾಸೆಂಸಿಂಗ್ ಕೈಗಾರಿಕೆಗಳನ್ನು ಪ್ರಾರಂಭಿಸಿ ಅಲ್ಲಿಂದ ರಫ್ತು ಮಾಡಬೇಕು ಎನ್ನುವ ಉದ್ದೇಶದಿಂದ ಅಲ್ಲಿನ ರೈತರ ನೂರು ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿತ್ತು. ಆದರೆ ಭೂಮಿ ಪಡೆದು 20 ವರ್ಷಗಳಾದರೂ ಇನ್ನೂ ಯಾವುದೆ ಕೈಗಾರಿಕೆ ಪ್ರಾರಂಭವಾಗಿಲ್ಲ.
ಇಂದು ಎಲ್ಲಿಯಾದರೂ, ಅದು ಯಾವುದೇ ಹೆಸರಿನಲ್ಲಿ ಭೂ ಸ್ವಾಧೀನ ನಡೆದರೆ ಅದು ಪಕ್ಕಾ ರಿಯಲ್ ಎಸ್ಟೇಟ್ ದಂಧೆಯೆ ಆಗಿರುತ್ತದೆ. ಯಾವುದೋ ಯೋಜನೆಯ ಹೆಸರಿನಲ್ಲಿ ಭೂಮಿಯನ್ನು ಸ್ವಾಧೀನ ಮಾಡುವುದು, ಅದನ್ನು ಹತ್ತಿಪ್ಪತ್ತು ವರ್ಷಗಳ ಕಾಲ ಹಾಗೆ ಇಡುವುದು, ಅಷ್ಟರಲ್ಲಿ ಆ ಭೂಮಿಯ ದರ ಹೆಚ್ಚಾಗುತ್ತದೆ, ಆಮೇಲೆ ಅದನ್ನು ಬೇರೆಯವರಿಗೆ ಮಾರಾಟ ಮಾಡುವುದು.
“ಯಾವ ಉದ್ದೇಶಕ್ಕಾಗಿ ಭೂ ಸ್ವಾಧೀನ ಮಾಡಿರುತ್ತೀರೋ, ಅದನ್ನು 5 ವರ್ಷಗಳೊಳಗೆ ಬಳಕೆ ಮಾಡದಿದ್ದರೆ, ಭೂಮಿಯನ್ನು ಯಾರಿಂದ ಸ್ವಾಧೀನ ಮಾಡಿರುತ್ತೀರೋ ಅದನ್ನು ಅವರಿಗೆ ವಾಪಾಸು ನೀಡಬೇಕು” ಎಂದು ಭೂಸ್ವಾಧೀನ ಕಾಯ್ದೆ ಹೇಳುತ್ತದೆ. ಈ ಕಾನೂನನ್ನು ಕೇಂದ್ರದ ಬಿಜೆಪಿ ಸರ್ಕಾರ ಬದಲಾಯಿಸಲು ಹೊರಟಿದೆ. ಇದನ್ನೂ ಓದಿ: ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಮನೆ ವ್ಯವಸ್ಥೆ ಕಲ್ಪಿಸಲು ಡಿವೈಎಫ್ಐ ಒತ್ತಾಯ
- ಆಮದಾಗಿರುವ ಪಾಮ್ ಆಯಿಲ್ ಕಡಿಮೆ ಬೆಲೆಗೆ ಸಿಗಬೇಕಾದರೆ, ಹೆಚ್ಚಿನ ಬೆಲೆ ನೀಡಿ ತೆಂಗಿನ ಎಣ್ಣೆ ಯಾಕೆ ಬಳಕೆ ಮಾಡಬೇಕು? ಬೇರೆ ಅಡುಗೆ ಎಣ್ಣೆಗೆ ಹೋಲಿಸಿದರೆ ತೆಂಗಿನ ಎಣ್ಣೆಯ ಬೆಲೆ ಹೆಚ್ಚಿದೆಯಲ್ಲವೆ? ಒಂದು ವೇಳೆ ಎಲ್ಲರೂ ತೆಂಗಿನ ಎಣ್ಣೆ ಬೇಕೆಂದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವೆ?
ಎಚ್. ಆರ್. ನವೀನ್ ಕುಮಾರ್: ಜಾಗತೀಕರಣವನ್ನು ಭಾರತ ಒಪ್ಪಿಕೊಂಡಿರುವ ಕಾರಣಕ್ಕೆ ಸರ್ಕಾರ ಪಾಮ್ ಆಯಿಲ್ ಆಮದನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಈ ವಾದ ನಿಜವೇ, ಆದರೆ ನಮ್ಮಲ್ಲೆ ಸಿಗುವ ಸರಕುಗಳಿಗೆ ಸರ್ಕಾರ ಆಮದಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ, ಅದರ ಆಮದು ಕಡಿಮೆ ಮಾಡಲು ಸಾಧ್ಯವಿದೆ. ತೆರಿಗೆಯನ್ನು ತೀರ್ಮಾನಿಸುವುದು ಕೇಂದ್ರ ಸರ್ಕಾರವಾಗಿದೆ. ಆದರೆ ಈ ಸರ್ಕಾರ ಪಾಮ್ ಆಯಿಲ್ ಆಮದಿನ ತೆರಿಗೆ ಕಡಿಮೆ ಮಾಡುತ್ತಿದೆ.
ತೆಂಗಿನ ಎಣ್ಣೆ ಬೆಲೆ ಹೆಚ್ಚಾಗುವಂತೆ ಮುಕ್ತ ಮಾರುಕಟ್ಟೆಯಲ್ಲಿ ನೋಡಿಕೊಳ್ಳಲಾಗಿದೆ. ಒಂದು ವೇಳೆ ಬೃಹತ್ ಮಟ್ಟದಲ್ಲಿ ತೆಂಗಿನ ಎಣ್ಣೆ ಉತ್ಪಾದನೆ ಪ್ರಾರಂಭವಾದರೆ ದರ ಕಡಿಮೆಯಾಗಲಿದೆ. ಜೊತೆಗೆ ತೆಂಗಿನ ಎಣ್ಣೆಗೆ ಎಷ್ಟು ಬೇಡಿಕೆ ಬಂದರೂ ಯಾವುದೆ ರೀತಿಯಲ್ಲಿ ಕೊರತೆ ಇಲ್ಲದೆ ಅದನ್ನು ಪೂರೈಕೆ ಮಾಡುಷ್ಟು ತೆಂಗು ಇಲ್ಲಿ ಉತ್ಪಾದಿಸಲಾಗುತ್ತದೆ.
ವಿಡಿಯೊ ನೋಡಿ: ಕೊನೆಯ ಹೀರೋಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುರುಷೋತ್ತಮ ಬಿಳಿಮಲೆಯವರ ಮಾತುಗಳು Janashakthi Media