- ಯಡಿಯೂರಪ್ಪನವರೇ ಹೀರೋ, ವಿಲನ್ ಎಂದು ತೇಪೆ
ಮೈಸೂರು: ನಾನು ಯಾವತ್ತಿದ್ದರೂ ಹೀರೋ ಹೊರತು ಯಾರಿಗೂ ವಿಲನ್ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಮೇಲೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇಂದು ಮೈಸೂರಿನಲ್ಲಿ ಇದೇ ವಿಷಯವಾಗಿ ಮಾತನಾಡುವಾಗ ಸಚಿವ ಎಸ್ಟಿ ಸೋಮಶೇಖರ್ ಎಡವಟ್ಟು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅಲ್ಲ ಯಡಿಯೂರಪ್ಪ ಹೀರೋ ಎಂದು ಹೇಳುವ ಭರದಲ್ಲಿ ಸಿಎಂ ಯಡಿಯೂರಪ್ಪನವರೇ ನಿಜವಾದ ವಿಲನ್ ಎಂದು ಹೇಳಿದ್ದಾರೆ. ನಂತರ ಯಡಿಯೂರಪ್ಪನವರೇ ಹೀರೋ, ವಿಲನ್ ಎಲ್ಲವೂ ಎನ್ನುವ ಮೂಲಕ ತಮ್ಮ ಹೇಳಿಕೆಗೆ ತೇಪೆ ಹಚ್ಚಿದ್ದಾರೆ.
ಸಿದ್ದರಾಮಯ್ಯನಾಗಲಿ, ಇನ್ಯಾರೋ ಆಗಲಿ ಅಲ್ಲ. ಯಡಿಯೂರಪ್ಪನವರೇ ನಿಜವಾದ ವಿಲನ್ ಎಂದು ಹೇಳಿದ ಸಚಿವ ಎಸ್ಟಿ ಸೋಮಶೇಖರ್ ಹೀರೋ -ವಿಲನ್ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಬಾಯ್ತಪ್ಪಿನಿಂದ ಎಡವಟ್ಟು ಮಾಡಿಕೊಂಡಿದ್ದಾರೆ. ವಿಲನ್ ಪದ ಬಳಸಿದ ತಕ್ಷಣ ಸಚಿವರ ಸಹಾಯಕ್ಕೆ ನಿಂತ ಶಾಸಕ ರಾಮದಾಸ್ ಸರ್ ಅದು ವಿಲನ್ ಅಲ್ಲ ಹೀರೋ ಎಂದು ತಿದ್ದಿದರು. ತಕ್ಷಣ ಎಚ್ಚೆತ್ತ ಸಚಿವ ಎಸ್.ಟಿ. ಸೋಮಶೇಖರ್ ಈ ಕೋವಿಡ್ ಸಮಯದಲ್ಲಿ ಹೀರೋ, ವಿಲನ್ ಎಲ್ಲರನ್ನೂ ಸಿಎಂ ಯಡಿಯೂರಪ್ಪನವರು ನಿಭಾಯಿಸಿದ್ದಾರೆ. 7 ತಿಂಗಳಿನಿಂದ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಕೊರೊನಾ ಸಂದರ್ಭದಲ್ಲಿ ಯಡಿಯೂರಪ್ಪ ಒಬ್ಬರೇ ಹೀರೋ, ಅವರೇ ವಿಲನ್ ಎಂದು ಹೇಳುವ ಮೂಲಕ ತೇಪೆ ಹಚ್ಚಿದರು.
ಸಿದ್ದರಾಮಯ್ಯನವರ ಧಮ್ ಮತ್ತು ಆಡಳಿತ ಎರಡನ್ನೂ ನಾನು ನೋಡಿದ್ದೇನೆ. ಇವರು ಸದನದ ಒಳಗೆ ಒಂದು ಮಾತನಾಡುತ್ತಾರೆ, ಸದನದ ಹೊರಗೆ ಒಂದು ಮಾತನಾಡುತ್ತಾರೆ. ತುರ್ತು ಸದನ ಕರೆದರೆ ಇವರು ಬಾಯ್ ಕಾಟ್ ಮಾಡಿ ಹೊರಗೆ ಹೋಗ್ತಾರೆ. ಅದಕ್ಯಾಕೆ ಸದನ ಕರೆಯಬೇಕು? ನಾನು ಅವರ ಜೊತೆ 5 ವರ್ಷ ಕೆಲಸ ಮಾಡಿದ್ದೇನೆ. ಅವರು ಸದನದಲ್ಲಿ ಏನು ಮಾತನಾಡುತ್ತಾರೆ ಹಾಗೂ ಯಾವುದಕ್ಕೆ ಮಾತನಾಡಲು ಅವಕಾಶ ಇದೆ ಅನ್ನೋದು ಗೊತ್ತಿದೆ. ಸುಮ್ಮನೆ ನಮ್ಮ ಧಮ್ ಯಾಕೆ ಟೆಸ್ಟ್ ಮಾಡ್ತೀರಾ? ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯನವರಿಗೆ ಸಚಿವ ಎಸ್.ಟಿ. ಸೋಮಶೇಖರ್ ಟಾಂಗ್ ನೀಡಿದ್ದಾರೆ.
ಮುನಿರತ್ನ ನಾಲ್ಕು ವರ್ಷಗಳಿಂದ ಕೇಬಲ್ ಬಿಸಿನೆಸ್ ಮಾಡುತ್ತಿದ್ದಾರೆ. ಅವರು ಜನರಿಗೆ ಸೆಟಪ್ ಬಾಕ್ಸ್ ಕೊಡುತ್ತಿರುವುದು ಇದೇ ಮೊದಲೇನಲ್ಲ. ನಾನು ಆ ಸೆಟ್ ಅಪ್ ಬಾಕ್ಸ್ ನೋಡಿದ್ದೇನೆ. ಅದರಲ್ಲಿ ಮುನಿರತ್ನ ಬಗ್ಗೆ ಮಾಹಿತಿ ಬರುತ್ತದೆ. ಚುನಾವಣಾ ಆಯೋಗ ಇದನ್ನು ಗಮನಿಸುತ್ತದೆ. ಮುನಿರತ್ನ ಸಿನಿಮಾದಲ್ಲಿರೋದರಿಂದ ಅವರು ಸೆಟ್ ಅಪ್ ಬಾಕ್ಸ್ ಕೊಟ್ಟರೆ ತಪ್ಪೇನಿದೆ? ಎಂದು ಮೈಸೂರಿನಲ್ಲಿ ಸಚಿವ ಎಸ್.ಸಿ. ಸೋಮಶೇಖರ್ ಪ್ರಶ್ನಿಸಿದ್ದಾರೆ.