ಬೆಂಗಳೂರು; ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ಧರಾಮಯ್ಯ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಸೆಪ್ಟೆಂಬರ್.2ರ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿತು.
ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯಪಾಲರು ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಿಎಂ ಸಿದ್ಧರಾಮಯ್ಯ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ವಾದವನ್ನು ಮುಂಡಿಸಿದ್ದರು. ಅರ್ಜಿದಾರರ ಪರವಾಗಿ ವಾದವನ್ನು ಆಲಿಸುವುದಕ್ಕೆ ಇಂದಿಗೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತ್ತು.
ಇಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದಲ್ಲಿ ಸಿಎಂ ಸಿದ್ಧರಾಮಯ್ಯ ರಾಜ್ಯಪಾಲರ ಅನುಮತಿ ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ನಡೆಯಿತು. ದೂರುದಾರ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾದವಗಿ ಅವರು ಆರೋಪಿಗಳಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೋಟಿಸ್ ನೀಡಿದರೇ ತನಿಖೆಯೇ ಪೂರ್ವಗ್ರಾಹಕ್ಕೊಳಗಾಗಲಿದೆ. 17ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕವಷಅಟೇ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ ಎಂದು ವಾದಿಸಿದರು.
ಸಂವಿಧಾನದ 163ರಡಿ ಸಿಎಂ ಕೂಡ ಕ್ಯಾಬಿನೆಟ್ ಭಾಗವಾಗಿದ್ದಾರೆ. ಹೀಗಾಗಿ ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಹೀಗಾಗಿ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ.
ಹೈಕೋರ್ಟ್ ನ್ಯಾಯಪೀಠದ ಮುಂದೆ ಹಿರಿಯ ವಕೀಲ ಪ್ರಭುಲಿಂಗ ನಾದವಗಿ ಅವರು ಆರ್ ಎಸ್ ನಾಯಕ್ ಪ್ರಕರಣ, ಸುಪ್ರೀಂ ಕೋರ್ಟ್ ಎಕೆ ಕ್ರೈ ಪಾಕ್ ಕೇಸ್ ಉಲ್ಲೇಖಗಳನ್ನು ಕೂಡ ಮುಂದಿಟ್ಟು ವಾದಿಸಿದರು.
ಒಂದೆಡೆ ಅಕ್ರಮವಾಗಿಲ್ಲ ಎಂದಿದ್ದಾರೆ. ಮತ್ತೊಂದೆಡೆ ನಿವೃತ್ತ ನ್ಯಾಯಮೂರ್ತಿ ಹಾಗೂ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಮುಡಾ ಹಗರಣದ ತನಿಖೆಗೆ ಸಮಿತಿ ರಚಿಸಿದ್ದಾರೆ. ಇದರನ್ನೇ ರಾಜ್ಯಪಾಲರು ಸಿಎಂ ವಿರುದ್ಧದ ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಉಲ್ಲೇಖಿಸಿದರು.
ಪ್ರಭುಲಿಂಗ ನಾದವಗಿ ಅವರ ವಾದ ಮುಕ್ತಾಯದ ಬಳಿಕ ದೂರುದಾರ ಟಿಜೆ ಅಬ್ರಾಹಂ ಅವರ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದ ಆರಂಭಿಸಿದರು. ಮುಡಾ ಸೈಟ್ ಹಂಚಿಕೆಗಾಗಿ ಡಿನೋಟಿಫಿಕೇಷನ್ ಆದಾಗ ಸಿದ್ಧರಾಮಯ್ಯ ಅವರು ಡಿಸಿಎಂ ಆಗಿದ್ದರು. ಭೂ ಪರಿವರ್ತನೆ ಆದಾಗಲೂ ಸಿದ್ಧರಾಮಯ್ಯ ಡಿಸಿಎಂ ಆಗಿದ್ದರು. 50:50 ಸೈಟ್ ಹಂಚಿಕೆ ಮಾಡುವಂತೆ ಕೇಳಿದಾಗ ಸಿದ್ಧರಾಮಯ್ಯ ಸಿಎಂ ಆಗಿದ್ದರು ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.
ದಿನಾಂಕ 25-10-2021ರಲ್ಲಿ 50:50 ನಿವೇಶನ ಹಂಚಿಕೆಗೆ ಮನವಿ ಮಾಡಲಾಗಿದೆ. ಸಿಎಂ ಪುತ್ರ ಇದ್ದಂತ ಮುಡಾ ಸಭೆಯಲ್ಲೇ ಒಪ್ಪಿಗೆ ನೀಡಲಾಗಿದೆ. ದಿನಾಂಕ 25-11-2021ರಂದು 50:50 ಹಕ್ಕು ಬಿಡುಗಡೆ ಮಾಡಲಾಗಿದೆ. ನಂತ್ರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿಗೆ ಸೈಟ್ ಹಂಚಿಕೆ ಮಾಡಲಾಗಿದೆ ಎಂಬುದಾಗಿ ಟಿಜೆ ಅಬ್ರಾಹಂ ಪರ ವಕೀಲ ರಂಗನಾಥ್ ತಮ್ಮ ವಾದವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಮುಂದಿಟ್ಟರು.
ಅಂತಿಮವಾಗಿ ವಾದವನ್ನು ಆಲಿಸಿದಂತ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್.2ರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.