ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 23ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ರಾಜ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಕಾನೂನು ಮೊರೆ ಹೋಗುವುದಾಗಿ ತಿಳಿಸಿದ್ದ ಸಿದ್ದರಾಮಯ್ಯ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.
ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರು ಆಗಸ್ಟ್ 23ರಂದು ದೆಹಲಿಗೆ ತೆರಳಲಿದ್ದು, ಪ್ರಾಸಿಕ್ಯೂಷನ್ ವಿಚಾರದ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಮಟ್ಟದಲ್ಲಿ ಹಿರಿಯ ವಕೀಲರ ಭೇಟಿಗೆ ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ರಾಜ್ಯಪಾಲರ ನಡೆ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ದೆಹಲಿಗೆ ತೆರಳುವ ಒಂದು ದಿನ ಮುನ್ನ ಅಂದರೆ ಆಗಸ್ಟ್ 22ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಭೆಯಲ್ಲಿ ಕೆಲ ರಾಜ್ಯ ರಾಜಕಾರಣದ ಬೆಳವಣಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಎಲ್ಲಾ ಶಾಸಕರು ತಮ್ಮ ಬೆಂಬಲಕ್ಕಿರುವಂತೆ ಮನವಿ ಮಾಡಲಿದ್ದಾರೆ.
ರಾಜ್ಯಪಾಲರ ಆದೇಶದಕ್ಕೆ ತಡೆ ನೀಡುವಂತೆ ಹೈಕೋರ್ಟ್ ನಾಳೆ ಅರ್ಜಿ ಸಲ್ಲಿಸಲಿದ್ದಾರೆ. ಒಂದು ವೇಳೆ ಹೈಕೋರ್ಟ್ ನಿರಾಕರಿಸಿದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ. ಇದರ ನಡುವೆ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದಾರೆ.