ಮೈಸೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್ ಧರಿಸಲು ಪ್ರಾರಂಭಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
ಮೈಸೂರಿನಲ್ಲಿ ನೂತನ ಪೊಲೀಸ್ ಠಾಣೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, “ನಾವು ಹಿಜಾಬ್ ಅನ್ನು ನಿಷೇಧಿಸುವ ಆದೇಶವನ್ನು ಹಿಂಪಡೆಯುತ್ತೇವೆ. ಆದೇಶ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉಡುಗೆ ತೊಡುವುದು ಅಥವಾ ನಿಮಗೆ ಇಷ್ಟವಾದ ಆಹಾರವನ್ನು ತಿನ್ನುವುದು ನಿಮ್ಮ ಆಯ್ಕೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯೂಸ್ ಕ್ಲಿಕ್ ಪ್ರಕರಣ | ತನಿಖೆಗೆ ಹೆಚ್ಚಿನ ಸಮಯ ಕೋರಿದ್ದ ದೆಹಲಿ ಪೊಲೀಸ್ ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್
ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ-ಕಾಲೇಜು ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು ಸೂಚಿಸುವ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಮತ್ತು ಸಮವಸ್ತ್ರದ ಭಾಗವಾಗಿ ಯಾವುದೇ ತಲೆ ಸ್ಕಾರ್ಫ್ ಅಥವಾ ಶಾಲು ಧರಿಸಬಾರದು ಎಂದು ಬಿಜೆಪಿ ಸರ್ಕಾರ 2022ರ ಫೆಬ್ರವರಿಯಂದು ಆದೇಶ ಮಾಡಿತ್ತು. ಈ ಆದೇಶವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮಾತನಾಡಿದ್ದಾರೆ
ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿರುವ ಅವರು, “ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್-ಸಬ್ಕಾ ವಿಕಾಸ್ ನಕಲಿಯಾಗಿದೆ. ಬಿಜೆಪಿ ಬಟ್ಟೆ, ಉಡುಗೆ, ಜಾತಿಯ ಆಧಾರದ ಮೇಲೆ ಜನರನ್ನು ಒಡೆಯುವ ಮತ್ತು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ನಾನು ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟಿವಿ, ಸಂಪಾದಕೀಯ ಮೂಲಕ ಇಡೀ ವ್ಯವಸ್ಥೆ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ | ಸಂದರ್ಶನದಲ್ಲಿ ಮೋದಿ
ಇದಕ್ಕೂ ಮೊದಲು ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ನಾವು ಹಿಜಾಬ್ ಬಗ್ಗೆ ಸರ್ಕಾರದ ಆದೇಶವನ್ನು ಹಾಗೆ ಬದಲಾಯಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕಾನೂನು ಇಲಾಖೆ ಹೋರಾಟ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಇದ್ದಕ್ಕಿದ್ದಂತೆ, ಹಿಜಾಬ್ ಮೇಲೆ ನಿಷೇಧ ಹೇರುವ ಅಗತ್ಯವಿರಲಿಲ್ಲ” ಎಂದು ಹೇಳಿದ್ದಾರೆ. ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯುವುದು ರಾಜ್ಯ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ.
ಮುಸ್ಲಿಂ ಹುಡುಗಿಯರು ಕರ್ನಾಟಕ ಹೈಕೋರ್ಟ್‌ನಲ್ಲಿ ಬಿಜೆಪಿ ಸರ್ಕಾರದ ಫೆಬ್ರವರಿಯ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಮಾರ್ಚ್ 2022 ರಲ್ಲಿ ನ್ಯಾಯಾಲಯವು ವಜಾಗೊಳಿಸಿತ್ತು. ಈ ಬಗ್ಗೆ ಪ್ರಕರಣವು ಇನ್ನೂ ವಿಚಾರಣೆಯಲ್ಲಿದ್ದು ಅಕ್ಟೋಬರ್ 2022 ರಲ್ಲಿ ಸುಪ್ರೀಂ ಕೋರ್ಟ್ ಭಿನ್ನಮತದ ತೀರ್ಪು ನೀಡಿತ್ತು.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ