ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ತಲಾ 2.5 ಲಕ್ಷ ರೂ ಗಿಫ್ಟ್ ರೂಪದ ಲಂಚ?

ಬೆಂಗಳೂರು : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿಗಳ ಜೊತೆಗೆ ತಲಾ 2.5 ಲಕ್ಷ ರೂಗಳನ್ನು ಗಿಫ್ಟ್ ರೂಪದಲ್ಲಿ ಲಂಚ ನೀಡಿರುವ ಆರೋಪದ ಆಘಾತಕಾರಿ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ದೀಪಾವಳಿ, ಯುಗಾದಿ ಹಬ್ಬಗಳ ಸಂದರ್ಭದಲ್ಲಿ ರಾಜಕಾರಣಿಗಳು ಪತ್ರಕರ್ತರಿಗೆ ಸಣ್ಣಪುಟ್ಟ ಗಿಫ್ಟ್‌ ನೀಡುವುದು ಮಾಮೂಲಿ. ಆದರೆ ಮೊಟ್ಟ ಮೊದಲ ಬಾರಿ ಎರಡೂವರೆ ಲಕ್ಷ ರೂಪಾಯಿ ನಗದು ಹಣವನ್ನು ಅದೂ ಕೂಡ ಸಿಎಂ ಕಚೇರಿಯಿಂದಲೇ ನೀಡಲಾಗಿರುವುದು ಇದೇ ಮೊದಲು. ಗಿಫ್ಟ್‌ ಪ್ಯಾಕ್‌ನಲ್ಲಿ ನಗದು ಹಣವಿರುವುದು ಗೊತ್ತಿಲ್ಲದ ಕೆಲವು ಪತ್ರಕರ್ತರು ಅದರಲ್ಲಿ ಹಣ ಇರುವುದು ಗೊತ್ತಾದ ಕೂಡಲೇ ಹಿಂದಕ್ಕೆ ಮರಳಿಸಿ, ವೃತ್ತಿಧರ್ಮ ಮೆರೆದಿದ್ದಾರೆ.

“ದೀಪಾವಳಿಯ ಸಂದರ್ಭದಲ್ಲಿ, ಕರ್ನಾಟಕದ ಬಹುತೇಕ ಎಲ್ಲಾ ಪತ್ರಕರ್ತರು ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿಗಳು ಮತ್ತು ತಲಾ 2.5 ಲಕ್ಷ ನಗದು ಉಡುಗೊರೆಯಾಗಿ ನೀಡಿದ್ದಾರೆ. ದಯವಿಟ್ಟು ಚುನಾವಣೆಯವರೆಗೂ ಮಾಧ್ಯಮಗಳಿಂದ ಸರ್ಕಾರದ ವಿರೋಧಿ ಸುದ್ದಿಗಳನ್ನು ನಿರೀಕ್ಷಿಸಬೇಡಿ” ಎಂಬ ವೈರಲ್ ವಾಟ್ಸಾಪ್ ಸಂದೇಶದ ಜಾಡು ಹಿಡಿದು ಹೊರಟಾಗ ಸರ್ಕಾರದ ಬೃಹತ್ ಭ್ರಷ್ಟಾಚಾರ ಬಯಲಿಗೆ ಬಂದಿದೆ.

ಇನ್ನು ಕೆಲವು ಟಿವಿ ಚಾನೆಲ್‌ ನಿರೂಪಕರಿಗೆ ಮತ್ತು ರಾಜಕೀಯ ವಿಷಯಗಳನ್ನು ಕವರ್ ಮಾಡುವವರಿಗೆ ಸಹ 5 ಲಕ್ಷ ರೂ.ಗಳ ವರೆಗೆ ಹಣ ನೀಡಿರುವುದನ್ನು ಮೂಲಗಳು ಖಚಿತಪಡಿಸಿವೆ. ಅದೇ ಸಂದರ್ಭದಲ್ಲಿ ಕೆಲ ಪತ್ರಿಕೆಗಳಿಗೆ ಕೇವಲ ಸಿಹಿ ತಿಂಡಿಗಳ ಪೊಟ್ಟಣಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಪತ್ರಕರ್ತರಿಗೆ ಹಣದ ಆಮಿಷ ನೀಡುವುದು, ಹಣ ನೀಡುವುದು ಕೂಡ ಭ್ರಷ್ಟಾಚಾರವೇ ಆಗಿದೆ. ಹಲವಾರು ಪತ್ರಕರ್ತರಿಗೆ ತಲಾ ಎರಡೂವರೆ ಲಕ್ಷ ರೂಪಾಯಿ ಕೊಟ್ಟಿರುವ ಹಿನ್ನೆಲೆಯಲ್ಲಿ ಲಕ್ಷಗಟ್ಟಲೆ ಹಣ ಎಲ್ಲಿಂದ ಬಂತು? ಇದರ ಮೂಲವೇನು ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸರ್ಕಾರ ಪತ್ರಕರ್ತರಿಗೆ ಹಣದ ರೂಪದಲ್ಲಿ ಉಡುಗೊರೆ ನೀಡುವ ಮೂಲಕ ಅವರು ಪಕ್ಷಪಾಗಿಗಳಾಗಿ ವರ್ತಿಸಲು ಲಂಚದ ಆಮಿಷ ಒಡ್ಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ಸಂದರ್ಭದಲ್ಲಿ ಸಚಿವರೊಬ್ಬರು ಪತ್ರಕರ್ತರಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.

ಲೋಕಾಯುಕ್ತ ತನಿಖೆಗೆ ಹಿರಿಯ ಪತ್ರಕರ್ತರ ಆಗ್ರಹ : ಕೆಲವು ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ತಲಾ 2.5 ಲಕ್ಷ ರುಪಾಯಿ ಹಣ ನೀಡಿರುವ ಪ್ರಕರಣ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹಿರಿಯ ಪತ್ರಕರ್ತರು ಆಗ್ರಹಿಸಿದ್ದಾರೆ.

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಈ ಕುರಿತು ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದು, ಲೋಕಾಯುಕ್ತರು, ಮತ್ತು ಚುನಾವಣಾ ಆಯುಕ್ತರು ಕೂಡಲೇ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಬೆಳಗ್ಗಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ, ಸಚಿವರ ಕಚೇರಿಗಳಿಂದ ರಾಜ್ಯದ ಹಲವು ಪತ್ರಕರ್ತರಿಗೆ ದೀಪಾವಳಿ ಇನಾಮಿನ ಜೊತೆಯಲ್ಲಿ ನಗದು ಹಣವನ್ನು ನೀಡಲಾಗಿದೆ ಎಂಬ ವದಂತಿಗಳು ಹಬ್ಬಿವೆ. ಇದು ಹೌದೆಂದಾಗಿದ್ದಲ್ಲಿ, ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಇದನ್ನು ಪರಿಗಣಿಸುವುದು ಕರ್ನಾಟಕದ ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಗತ್ಯ. ತಾವು ತಕ್ಷಣ ಈಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಭ್ರಷ್ಟಾಚಾರ ನಡೆದಿರುವುದು ಹೌದೆಂದಾದರೆ, ಆ ಬಗ್ಗೆ ತಕ್ಷಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕದ ಜನತೆಯ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಚರ್ಚೆಯಾಗುತ್ತಿದೆ. 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಮುಖ್ಯಮಂತ್ರಿಗಳ ವಿರುದ್ಧ ನೆಗೆಟಿವ್‌ ಸುದ್ದಿಗಳನ್ನು ಬರೆಯದಂತೆ ಮನವೊಲಿಸಲು ಇಂತಹ ಗಿಫ್ಟ್‌ ನೀಡಿದ್ದಾರೆ. ಈ ಕುರಿತು ಸರಿಯಾದ ತನಿಖೆಯಾಗಲಿ, ಭ್ರಷ್ಟ ಪತ್ರಕರ್ತರಿಂದಾಗಿ ಪ್ರಾಮಾಣಿಕ ಪತ್ರಕರ್ತರೂ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *