- ಅಣ್ಣಾಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್ ಎಂದ ಸಿಎಂ
- ಅಣ್ಣಾಮಲೈ ನಡೆ ವಿರೋಧಿಸಿದ ರಾಜ್ಯ ಬಿಜೆಪಿ ನಾಯಕರು
ಬೆಂಗಳೂರು : ಅಣ್ಣಾಮಲೈ ಪ್ರತಿಭಟನೆಗೆ ಡೋಂಟ್ ಕೇರ್, ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆಗಿ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವನನ್ನ ದೊಡ್ಡ ಮನುಷ್ಯನನ್ನಾಗಿ ಮಾಡಬೇಡಿ. ಎರಡು ರಾಜ್ಯಗಳ ಸಂಬಂಧದ ವಿಚಾರವಿದು. ಹೆಚ್ಚುವರಿ ನೀರು ತಡೆದು, ನೀರು ಕೊಡುವ ಯೋಜನೆ ಇದಾಗಿದೆ. ಅದಕ್ಕೇ ನಾವು ಈ ಯೋಜನೆ ತರ್ತಿದ್ದೇವೆ ಎಂದರು.
ಐದು ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರಾರಂಭಿಸಲುದ್ದೇಶಿಸಿರುವ ಮೇಕೆದಾಟು ಯೋಜನೆಗೆ ವಿರೋಧಿಸುವ ತನ್ನ ಹಠವನ್ನು ತಮಿಳುನಾಡು ಮುಂದುವರಿಸಿದೆ. ಕರ್ನಾಟಕದ ಐಪಿಎಸ್ ಕೆಡರ್ ಆಗಿದ್ದ ಅಣ್ಣಾಮಲೈ ಅವರು ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನಲ್ಲಿ ಸತ್ಯಾಗ್ರಹ ನಡೆಸಿದ್ದಾರೆ. ಸಾವಿರಾರು ಕಾರ್ಯಕರ್ತರು, ಕಾರ್ಮಿಕರನ್ನ ಸೇರಿಸಿಕೊಂಡು ತಮ್ಮ ತವರಿನಲ್ಲಿ ಪ್ರತಿಭಟನೆ ನಡೆಸಿದ್ಧಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ನಿಲುವನ್ನು ಕರ್ನಾಟಕದ ರಾಜಕೀಯ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಬಲವಾಗಿ ಖಂಡಿಸಿದ್ಧಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಖಡಕ್ ಮಾತುಗಳನ್ನ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ. ಅಣ್ಣಾಮಲೈ ಉಪವಾಸ ಬೇಕಾದರೂ ಮಾಡಲಿ, ಊಟ ಬೇಕಾದರೂ ಮಾಡಲಿ ಮೇಕೆದಾಟು ಯೋಜನೆ ವಿರುದ್ಧ ಯಾವ ಪ್ರತಿಭಟನೆಗೂ ಐ ಡೋಂಟ್ ಕೇರ್. ಯೋಜನೆ ಮಾಡಿಯೇ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ ಇದರ ನಡುವೆಯೂ ಪ್ರತಿಭಟನೆ ಮಾಡ್ತಾರೆ ಅಂದರೆ ಅದು ರಾಜಕೀಯ ಪ್ರೇರಿತ ಅಷ್ಟೇ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿ ನಾಯಕರ ವಿಭಿನ್ನ ಹೇಳಿಕೆ : ರಾಜ್ಯ ಬಿಜೆಪಿಯ ಇತರ ಮುಖಂಡರೂ ಕೂಡ ಅಣ್ಣಾಮಲೈ ನಡೆಯನ್ನು ಆಕ್ಷೇಪಿಸಿದ್ಧಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ವಿ ಸೋಮಣ್ಣ, ಐಪಿಎಸ್ ಆಗುತ್ತಿದ್ದಂತೆಯೇ ದೊಡ್ಡವರಾಗುವುದಿಲ್ಲ. ಇದನ್ನ ಅಣ್ಣಾಮಲೈ ಅರ್ಥ ಮಾಡಿಕೊಳ್ಳಬೇಕು. ಅವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿದ್ದಾರೆ. ಮೇಕೆದಾಟು ಯೋಜನೆ ನಮ್ಮ ಭಾಗದಲ್ಲಿ ಆಗಲಿದೆ. ಅವರ ಕಂಡೀಷನ್ಗು ನಾವು ಬದ್ಧರಾಗಿದ್ದೇವೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನೆ ಅಗತ್ಯ ಇದೆ. ಇದು ಅವರಿಗೂ ಅರ್ಥ ಆಗುತ್ತದೆ. ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯದ ಜೊತೆ ಬಾಂಧವ್ಯ ಇರಬೇಕು ಎಂದು ಸೋಮಣ್ಣ ತಿಳಿಹೇಳಿದ್ದಾರೆ.
ಇನ್ನು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಣ್ಣಾಮಲೈ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೇಕೆ ದಾಟು ಯೋಜನೆ ನಮ್ಮ ಹಕ್ಕು ಎಂದು ಈ ಹಿಂದೆ ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ಧಾರೆ. ಇದನ್ನ ತಡೆಯಲು ಯಾರಿಗೂ ಸಾಧ್ಯವಿಲ್ಲ. ಅಣ್ಣಾಮಲೈ ಯಾಕೆ ಅಡ್ಡಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ಧಾರೆ.