ವಿಜಯೇಂದ್ರನನ್ನು ಸಂಪುಟಕ್ಕೆ ಸೇರಿಸುವಂತೆ ಯಡಿಯೂರಪ್ಪ ಒತ್ತಡ
ನವದೆಹಲಿ : ಬೊಮ್ಮಾಯಿ ಸಂಪುಟದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸ್ಥಾನ ನೀಡುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧಪಡಿಸಿಕೊಂಡು ಹೋಗಿದ್ದ ಸಂಭಾವ್ಯ ಸಚಿವರ ಪಟ್ಟಿ ನೋಡಿದ ಸಂತೋಷ್ ಸಿಡಿಮಿಡಿಗೊಂಡಿದ್ದಾರೆ.
ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ನಡೆಸಿದ ಸಂತೋಷ್, ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬೇಡ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಈಗಾಗಲೇ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಈ ಸಮಯದಲ್ಲಿ ಇವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಂಡರೆ ತಪ್ಪಾಗುತ್ತದೆ. ಮೊದಲು ಚುನಾವಣೆಯಲ್ಲಿ ಗೆದ್ದು ಬರಲಿ . ನಂತರ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ನೋಡೋಣ ಎಂದಿದ್ದಾರೆ.
ಈಗಾಗಲೇ ಯಡಿಯೂರಪ್ಪ ಮನೆ ಪವರ್ ಸೆಂಟರ್ ಆಗಿ ಬದಲಾವಣೆ ಆಗಿದೆ. ಮತ್ತೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ್ರೆ ಕಷ್ಟವಾಗಲಿದೆ. ಹೀಗಾಗಿ ಸದ್ಯಕ್ಕೆ ವಿಜಯೇಂದ್ರ ಸಂಪುಟದಲ್ಲಿ ಇರೋದು ಬೇಡ ಎಂದು ಕಡ್ಡಿ ಎರಡು ತುಂಡಾಗುವಂತೆ ಬೊಮ್ಮಾಯಿಗೆ ಹೇಳಿದ್ದಾರೆ.
ಇದನ್ನೂ ಓದಿ : ಸಂಪುಟ ರಚನೆ : ಇಂದು ಸಚಿವರ ಪಟ್ಟಿ ಅಂತಿಮ ಸಾಧ್ಯತೆ?
ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಯಡ್ಡಿ ಒತ್ತಡ : ವಿಜಯೇಂದ್ರನನ್ನು ಸಂಪುಟಕ್ಕೆ ಸೇರಿಕೊಳ್ಳುವಂತೆ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿಯವರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿಯೂ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸ್ಥಾನ ಸಿಗಲಿಲ್ಲ. ಹಾಗಾಗಿ ರಾಜ್ಯದಲ್ಲಿಯಾದ್ರೂ ಮತ್ತೊಬ್ಬ ಪುತ್ರನಿಗೆ ಸಚಿವ ಸ್ಥಾನ ಸಿಗಲಿ ಅನ್ನೋದು ಯಡಿಯೂರಪ್ಪನವರ ಲೆಕ್ಕಾಚಾರ ಎನ್ನಲಾಗ್ತಿದೆ.
ಪುತ್ರರ ಭವಿಷ್ಯಕ್ಕಾಗಿಯೇ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪನವರು ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರ ಗೌರವದ ನಿರ್ಗಮನದ ಬಗ್ಗೆ ಮಾತಾಡುವ ಹೈಕಮಾಂಡ್ ಸಿಎಂ ಬೊಮ್ಮಾಯಿ ನೀಡಿದ ಪಟ್ಟಿಗೆ ಸಮ್ಮತಿ ನೀಡಬೇಕಾ ಅಥವಾ ಬೇಡ್ವಾ ಅನ್ನೋದರ ಬಗ್ಗೆ ಚರ್ಚೆ ನಡೆಸುತ್ತಿದೆ. ಬೊಮ್ಮಾಯಿ ಕೊಟ್ಟಿರುವ ಲಿಸ್ಟ್ ನಂತೆ ವಿಜಯೇಂದ್ರಗೂ ಮಣೆ ಹಾಕುತ್ತಾ ಅನ್ನೋದು ಇಂದು ಸಂಜೆ ಗೊತ್ತಾಗಲಿದೆ.