ಮುಖ್ಯಮಂತ್ರಿ ಬದಲಾವಣೆಯೆಂದರೆ ಬಿಜೆಪಿಗೆ ಗೊಂಬೆಯಾಟ; ಕಾಂಗ್ರೆಸ್

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಷಯ ಮತ್ತೆ ಕೆದಕಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್‌ಗಳನ್ನು ಮಾಡಿತು. ಮತ್ತೀಗ ಮತ್ತೊಂದು ಟ್ವೀಟ್‌ನಲ್ಲಿ ‘ಬಿಜೆಪಿ ಹೈಕಮಾಂಡ್​ ಪಾಲಿಗೆ ಕರ್ನಾಟಕದ ಮುಖ್ಯಮಂತ್ರಿಗಳೆಂದರೆ ಆಟಿಕೆ ಮುಖ್ಯಮಂತ್ರಿಗಳಿದ್ದಂತೆ. ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ ಎಂದು ವ್ಯಂಗ್ಯವಾಡಿದೆ.

ಸರಣಿ ಟ್ವೀಟ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರಂಥ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ‘ಬೊಂಬೆ ಬೊಮ್ಮಾಯಿ’ ಯಾವ ಲೆಕ್ಕ ಎಂದು ಕಾಂಗ್ರೆಸ್ ಪ್ರಶ್ನಿ ಮಾಡಿದೆ. ‘ಸಂತೋಷ ಕೂಟ’ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ ಎಂದು ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ವಲಯದಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಬಗ್ಗೆಯೂ ಟ್ವೀಟ್‌ ಮಾಡಿದೆ.

ಈ ಹಿಂದೆ ಯಡಿಯೂರಪ್ಪ ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ ಬಸವರಾಜ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸಲು ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ ಕೈಗೊಂಬೆ ಮುಖ್ಯಮಂತ್ರಿಗೆ ಸಂಪುಟ ಸಂಕಟ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮೂಲಕ ಚಾಟಿ ಬೀಸಿದೆ.

ಟ್ವೀಟ್ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಮುಖ್ಯಮಂತ್ರಿ ಬದಲಾವಣೆ ವಿಚಾರಗಳನ್ನು ಬಿಜೆಪಿ ಪಕ್ಷ ತಳ್ಳಿ ಹಾಕಲು ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್‌ ಶಾಸಕ ಪ್ರಿಕಾಂಕ್‌ ಖರ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪಕ್ಷದಲ್ಲಿಯೇ ಮೂರನೇ ಮುಖ್ಯಮಂತ್ರಿಯ ಕೂಗು ಕೇಳಿಬಂದಿದೆ. ಹಿಂದೊಮ್ಮೆ ಬಿಜೆಪಿ ಅಧಿಕಾರವಧಿಯಲ್ಲಿ ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದರು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್​ ಪಕ್ಷದ ಟ್ವೀಟ್​ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಪ್ರತಿಕ್ರಿಯಿಸಿದ ಅವರು, 3ನೇ ಮುಖ್ಯಮಂತ್ರಿ ಕೂಗು ಕಾಂಗ್ರೆಸ್ ಪಾಳಯದಲ್ಲಿ ಅಲ್ಲ, ಬಿಜೆಪಿಯಲ್ಲಿಯೇ ಕೂಗು ಎದ್ದಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿ ಕರ್ನಾಟಕ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಯು ಹುಸಿಯಾಗಿದೆ. 1999ರ ಬಳಿಕ ರಾಜ್ಯದಲ್ಲಿ 3 ಬಾರಿ ಕಾಂಗ್ರೆಸ್​ ಸರ್ಕಾರ ಬರಲಿದೆ. ಕಾಂಗ್ರೆಸ್​ನಿಂದ ಮಾತ್ರ ಸ್ಥಿರ ಸರ್ಕಾರ ನೀಡಲು ಸಾಧ್ಯ ಎಂದು ಹೇಳಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಗಳಿಗೆ ಹೋಗುವಂತೆ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದರೂ ಸಹ ಯಾವ ಸಚಿವರು ತಾನೇ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ.? ಎಷ್ಟು ಸಂತ್ರಸ್ತರಿಗೆ ಪರಿಹಾರ ನೀಡಿದ್ದಾರೆ ಅಂತಾ ಹೇಳಲಿ? ಮುಖ್ಯಮಂತ್ರಿಗಳೇ ಎಲ್ಲ ಕಡೆ ಓಡಾಡಿ ವರದಿ ನೀಡುವಂತಾಗಿದೆ ಎಂದು ವ್ಯಂಗ್ಯವಾಡಿದರು.

Donate Janashakthi Media

Leave a Reply

Your email address will not be published. Required fields are marked *